ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ: ಶಾಸಕ ಲಮಾಣಿ ವಿಶ್ವಾಸ
ಗುತ್ತಲ: ಕೇಂದ್ರದಲ್ಲಿ ಯುಪಿಎ ಸರ್ಕಾರ ಸಮರ್ಥವಾಗಿ ಆಡಳಿತ ನಡೆಸಿದ್ದರ ಪರಿಣಾಮವಾಗಿ ಮತ್ತು ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕೈಗೊಂಡಿರುವ ಜನಪರ ಯೋಜನೆಗಳನ್ನು ಮನಗಂಡು ಮತದಾರರು ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲಿದ್ದಾರೆ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ಸಮೀಪದ ಹಾವನೂರ ಗ್ರಾಮದಲ್ಲಿ ಪಕ್ಷದ ಲೋಕಸಭೆಯ ಅಭ್ಯರ್ಥಿ ಸಲೀಂ ಅಹ್ಮದ್ ಪರ ಪ್ರಚಾರ ಕೈಗೊಂಡು, ಪಾದಯಾತ್ರೆಯ ಮೂಲಕ ಮತ ಯಾಚಿಸಿದರು. ನಂತರ ದ್ಯಾಮವ್ವ ದೇವಸ್ಥಾನದ ಸಭಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಪಕ್ಷದ ಅಭಿಮಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಿಜೆಪಿಯ ಡೊಂಬರಾಟ ಈ ಲೋಕಸಭೆ ಚುನಾವಣೆಯಲ್ಲಿ ನಡೆಯುವುದಿಲ್ಲ. ನರೇಂದ್ರ ಮೋದಿಯವರ ಮೋಡಿ ನಿಜಕ್ಕೂ ಕರ್ನಾಟಕದಲ್ಲಿ ನಡೆಯುವುದಿಲ್ಲ. ಸುಳ್ಳು ಹೇಳಿ ಅಧಿಕಾರವನ್ನು ನಡೆಸುವ ಜಾಯಮಾನ ಕಾಂಗ್ರೆಸ್ ಪಕ್ಷಕ್ಕಿಲ್ಲ. ಅದು ಏನೇ ಇದ್ದರೂ ಬಿಜೆಪಿಗೆ ಮಾತ್ರ ಸೀಮಿತ ಎಂದು ಟೀಕಿಸಿದರು.
ಗ್ರಾಮೀಣ ಘಟಕದ ಅಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ನೀತಿ, ಸಿದ್ಧಾಂತವಿದೆ. ಕೇವಲ ಮಾತಿನಿಂದ ಮತದಾರರನ್ನು ಓಲೈಸಿದರೆ ಸಾಲದು, ಅಭಿವೃದ್ಧಿಯ ಮಂತ್ರವಾಗಬೇಕಿದೆ. ದೇಶದ ದೀನ ದಲಿತರನ್ನು, ನಿರ್ಗತಿಕರನ್ನು, ನಿರುದ್ಯೋಗಿಗಳನ್ನು ಹುಡುಕಿ ಅವರನ್ನು ಮೇಲಕ್ಕೆತ್ತುವ ಕಾರ್ಯವಾಗಬೇಕಿದೆ. ಅದನ್ನು ಕಾಂಗ್ರೆಸ್ ತನ್ನ ಆಡಳಿತದಲ್ಲಿ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದರು.
ಪ್ರಮುಖರಾದ ಕೊಟ್ರೇಶಪ್ಪ ಬಸೆಗಣ್ಣಿ, ಎಸ್.ಎಫ್.ಎನ್. ಗಾಜಿಗೌಡ್ರ ಈರಪ್ಪ ಲಮಾಣಿ, ಬಾಬಣ್ಣ ಮಾಗಾವಿ, ಅಬ್ದುಲ್ ಹುಬ್ಬಳ್ಳಿ, ಸುರೇಶ ಹಾವನೂರ, ಸುನಿಲ್ ಕೆಂಗನಿಂಗಪ್ಪನವರ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.