ಜೆಡಿಎಸ್ ಗೆಲವು ಖಚಿತ
ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವಿ ಮೆಣಸಿನಕಾಯಿ ಅವರು ತಮ್ಮ ಪತ್ನಿ ಶರ್ಮಿಳಾ, ಪುತ್ರ ಅಕ್ಷಯ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಗುರುವಾರ ನಗರದ ಪ್ರಮುಖ ಓಣಿಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರವಿ ಮೆಣಸಿನಕಾಯಿ, ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಆಡಳಿತ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಭ್ರಷ್ಟಾಚಾರದಿಂದಾಗಿ ಮತದಾರರು ಬೇಸತ್ತಿದ್ದಾರೆ. ಆದ್ದರಿಂದ ಈ ಭಾರಿ ಲೋಕಸಭೆ ಚುನಾವಣೆಯಲ್ಲಿ ಸರ್ಕಾರದ ಬದಲಾವಣೆಯನ್ನು ಬಯಸಿದ್ದಾರೆ. ಈ ಎರಡೂ ಪಕ್ಷಗಳನ್ನು ಜನತೆ ತಿರಸ್ಕರಿಸಲು ನಿರ್ಧರಿಸಿದ್ದು, ರೈತರ ಬೆನ್ನೆಲುಬಾಗಿ ನಿಂತು ಈ ಹಿಂದೆ ಉತ್ತಮ ಆಡಳಿತ ತೋರಿದ ಜೆಡಿಎಸ್ ಸರ್ಕಾರವನ್ನು ಮತದಾರರು ಬಯಸುತ್ತಿದ್ದಾರೆ. ಜಿಲ್ಲೆಯಲ್ಲಷ್ಟೇ ಅಲ್ಲದೇ ರಾಜಾದ್ಯಂತ ಜೆಡಿಎಸ್ ಪರ ಜನ ಒಲವು ತೋರುತ್ತಿದ್ದಾರೆ. ಆದ್ದರಿಂದ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಎಂದು ಹೇಳಿದರು.
ಮೊದಲಿಗೆ ನಗರದ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತ ಆಗಮಿಸಿ ಪೂಜೆ ಸಲ್ಲಿಸಿದ ಅವರು, ದ್ಯಾಮವ್ವನ ಗುಡಿ ಓಣಿಯಿಂದ ಪಾದಯಾತ್ರೆ ಪ್ರಾರಂಭಿಸಿದರು. ಪುರದ ಓಣಿ, ಯಾಲಕ್ಕಿ ಓಣಿ, ಪೋಸ್ಟ್ ಆಫೀಸ್ ರಸ್ತೆ, ಗೌಳಿಗಲ್ಲಿ ಸೇರಿದಂತೆ ವಿವಿಧ ಓಣಿಗಳಲ್ಲಿ ಮನೆಮನೆಗೆ ತೆರಳಿ ಜೆಡಿಎಸ್ಗೆ ಮತ ನೀಡಿ, ಉತ್ತಮ ಆಡಳಿತವನ್ನು ನೀರಿಕ್ಷಿಸಿ ಎಂದು ಹೇಳಿ ಮತ ಯಾಚಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷ ಪರಮೇಶ್ವರಪ್ಪ ಮೆಗಳಮನಿ, ಶಿವಣ್ಣ ಹೂಗಾರ, ಸಿದ್ದಪ್ಪ ಹೂಗಾರ, ನಾಗರಾಜ ಸೊಂಟನವರ, ರಮಾ ಹಾಗೂ ನೂರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.