ಬಿಜೆಪಿ ಒಡೆದಾಳುವ ನೀತಿ
ಶಿಗ್ಗಾಂವಿ: ಬಿಜೆಪಿ ಜಾತಿ ರಾಜಕೀಯ ಮಾಡುತ್ತಾ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಧಾರವಾಡ ಲೋಕಸಭಾ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಚಾಮುಂಡೇಶ್ವರಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ತಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್ಗೆ ಕೊಟ್ಟು ಬಿಜೆಪಿಯ ಭ್ರಷ್ಟ ಆಡಳಿತಕ್ಕೆ ತಕ್ಕ ಉತ್ತರ ನೀಡಿ ಎಂದು ಕೋರಿದರು. ಮಾಜಿ ಶಾಸಕ ಅಜ್ಜಂಫಿರ ಖಾದ್ರಿ ಮಾತನಾಡಿ, ಬಿಜೆಪಿ ಸರ್ಕಾರ ರಾಜ್ಯವನ್ನು ಲೂಟಿ ಹೊಡೆದಿದೆ. 65 ವರ್ಷದ ಇತಿಹಾಸದಲ್ಲಿಯೇ ರಾಜ್ಯದ ಮುಖ್ಯಮಂತ್ರಿ ಭ್ರಷ್ಟಾಚಾರದಲ್ಲಿ ತೊಡಗಿ ಜೈಲು ಅನುಭವಿಸಿದ್ದು ಇದೆ ಮೊದಲು ಅಂತವರಿಗೆ ತಕ್ಕಪಾಠ ಕಲಿಸುವ ಅವಕಾಶ ನಿಮ್ಮ ಮೇಲಿದೆ ಎಂದರು. ಎಸ್.ಎಫ್. ಮಣಿಕಟ್ಟಿ, ಎಸ್.ಬಿ. ಗಚ್ಚಿನಮಠ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಹುಬ್ಬಳ್ಳಿ ಧಾರವಾಡ ಮಾಜಿ ಮೇಯರ್ ದೀಪಕ ಮಾತನಾಡಿದರು. ಶಂಭುಲಿಂಗಪ್ಪ ಆಜೂರ, ಪುರಸಭೆ ಅಧ್ಯಕ್ಷೆ ಮುಕ್ತಾ ಕಟ್ಟಿಮನಿ, ಕಾಂಗ್ರೆಸ್ ತಾಲೂಕು ಅಧ್ಯಕ್ಷೆ ಎಂ.ಎನ್. ವೆಂಕೋಜಿ, ಸ್ವಾತಿ ಮಳಗಿ, ಪುರಸಭೆ ಸದಸ್ಯ ಸತೀಶ ಆಲದಕಟ್ಟಿ, ಇಸ್ಮಾಯಿಲ್ ದೊಡ್ಡಮನಿ, ಅಯೂಬ್ಖಾನ್ ಪಠಾಣ, ಮುನ್ನಾ ಗುಲ್ಮಿ, ಉಮೇಶ ಮಾಳಗಿಮನಿ, ಸಿದ್ದಿಕ್ ಖತೀಬ್, ಅಲ್ಲಿಸಾಬ ಸೊಲ್ಲಾಪುರ ಇತರರಿದ್ದರು.
ಚುನಾವಣಾ ಸಿಬ್ಬಂದಿಗೆ ತರಬೇತಿ
ಶಿಗ್ಗಾಂವಿ: ಪಟ್ಟಣದ ಜೆಎಂಜೆ ಪ್ರೌಢ ಶಾಲೆಯಲ್ಲಿ ಚುನಾವಣಾ ಕಾರ್ಯಗಳಿಗೆ ನಿಯೋಜಿಸಿದ ಸಿಬ್ಬಂದಿಗೆ 3 ಹಂತದ ತರಬೇತಿ ಕಾರ್ಯಕ್ರಮದ ಮೊದಲ ಹಂತದ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದಲ್ಲಿ ಚುನಾವಣಾ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. 17 ರೂಂಗಳಲ್ಲಿ ಏಕಕಾಲಕ್ಕೆ ನಡೆದ ತರಬೇತಿಯಲ್ಲಿ ಚುನಾವಣೆಯ ಪ್ರಾತ್ಯಕ್ಷಿಕೆ, ನಿಯಮಾವಳಿಯ ಮಾಹಿತಿಯ ಬಗ್ಗೆ ವಿಡಿಯೋ ಕಾರ್ಯಕ್ರಮದ ಮಾಹಿತಿ ಒದಗಿಸಲಾಯಿತು. ಒಟ್ಟಾರೆ ಮೂರು ಹಂತದ ತರಬೇತಿ ಸನ್ನದ್ಧಗೊಳಿಸುವ ಕಾರ್ಯಕ್ರಮದ ಮೊದಲ ಹಂತವಾಗಿ ನಡೆದ ಕಾರ್ಯಾಗಾರ ಚುನಾವಣಾಧಿಕಾರಿಗಳ ಜವಾಬ್ದಾರಿಗಳು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿಕೆ. ಮತದಾನ ಅವಧಿಯಲ್ಲಿ ಮಾಡುವ ಕರ್ತವ್ಯ, ನಿಯಮಾವಳಿಗಳ ಮಾಹಿತಿ ಪುಸ್ತಕ ಸಿಬ್ಬಂದಿಗೆ ನೀಡಲಾಯಿತು. ಚುನಾವಣಾ ಸಿಬ್ಬಂದಿಗೆ ಕರ್ತವ್ಯ ನಿರತರಾದಾಗ ಆಗಬಹುದಾದ ಆರೋಗ್ಯ ಸಂಭಂದಿತ ತೊಂದರೆ ನೀಗಿಸಲು ಅದಕ್ಕಾಗಿ ಬಳಸಬೇಕಾದ ಅಗತ್ಯ ತುರ್ತು ಚಿಕಿತ್ಸೆಯ ಅನುಕೂಲತೆ ಕಲ್ಪಿಸಲಾಗಿದ್ದು, ತುರ್ತು ಕಾರ್ಯಕ್ಕಾಗಿ ವೈದ್ಯಕೀಯ ನೆರವನ್ನು ಪಡೆಯಲಾಗುವುದೆಂದು ಎಂದು ತರಬೇತಿಯ ಕಾರ್ಯಕ್ರಮದ ವಿವರಣೆಯನ್ನು ಸವಣೂರು ಉಪ ವಿಭಾಗಾಧಿಕಾರಿ ಶರಣಪ್ಪ ಕೋಟೆಪ್ಪಗೋಳ ತಿಳಿಸಿದರು. ತಹಸೀಲ್ದಾರ್ ಎಸ್.ಎ. ಚೌಗುಲೆ. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಸ್.ಎಂ. ಕುಂದೂರು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಟ್ಟೂರು ಅಲ್ಲದೇ ತಾಲೂಕಿನ ವಿವಿಧ ಇಲಾಖೆಯ ಚುನಾವಣಾ ನೀಯೋಜಿತ ಅಧಿಕಾರಿ ವರ್ಗದವರು ಪಾಲ್ಗೊಂಡಿದ್ದರು.
ಭ್ರಷ್ಟಾಚಾರಿಗಳಿಗೆ ತಕ್ಕಪಾಠ ಕಲಿಸಿ: ಜೋಶಿ
ಸವಣೂರ: ದೇಶದಲ್ಲಿ 5 ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರ ನಡೆಸಿ ಅಂದಾಜು ರು. 6.5 ಲಕ್ಷ ಕೋಟಿ ವಿದೇಶಿ ಬ್ಯಾಂಕ್ಗಳಲ್ಲಿ ಇಟ್ಟಿದ್ದು, ಈ ಹಣದ ಮೂಲಕ ಜನತೆಗೆ ಆಸೆ, ಆಮಿಷ ಮತದಾರರಿಗೆ ನೀಡಿ ಹಲವಾರು ತಂತ್ರಗಳನ್ನು ಕೈಗೊಂಡಿದ್ದಾರೆ. ಇದಕ್ಕೆ ಜನತೆ ಸಹಕಾರ ನೀಡಬಾರದು ಎಂದು ಧಾರವಾಡ ಲೋಕಸಭಾ ಕ್ಷೇತದ್ರ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಮನವಿ ಮಾಡಿದರು.
ಸವಣೂರ ತಾಲೂಕಿನ ಗೋನಾಳ, ಚವಡಾಳ, ಚಿಲ್ಲೂರಬಡ್ನಿ, ಚಿಲ್ಲೂರ ಗ್ರಾಮ ಹಾಗೂ ಸವಣೂರ ಪಟ್ಟಣದಲ್ಲಿ ರೋಡ್ ಶೋ ಮಾಡುವ ಮೂಲಕ ಮತಯಾಚಿಸಿ ಮಾತನಾಡಿದರು. ಕಾಂಗ್ರೆಸ್ ನೇತೃತ್ವದಲ್ಲಿ ಇರುವ ಪ್ರಧಾನಮಂತ್ರಿಗಳೇ ನೇಮಕ ಮಾಡಿರುವ ಲೆಕ್ಕ ಪರಿಶೋಧನಾ ಸಮಿತಿಯವರು ನೀಡಿರುವ ವರದಿಯಲ್ಲಿ ಈ ಅವ್ಯವಹಾರದ ದಾಖಲೆಗಳು ಸಾಬೀತು ಪಡಿಸುತ್ತವೆ. ಇಂತಹ ವ್ಯಾಪಕ ಭ್ರಷ್ಟಾಚಾರದ ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ಹಾಗೂ ರಸಗೊಬ್ಬರಗಳನ್ನು ಅತಿ ಹೆಚ್ಚಿನ ದರದಲ್ಲಿ ಖರೀದಿಸುತ್ತಿರುವುದು ಅತ್ಯಂತ ಅಪಾಯಕಾರಿ ಸಂಗತಿಯಾಗಿದ್ದು, ಈ ಎಲ್ಲ ಅವ್ಯವಸ್ಥೆಗಳನ್ನು ತೊಡೆದು ಹಾಕಿ ವಾಜಪೇಯಿ ಮಾದರಿಯ ಸರ್ಕಾರವನ್ನು ರಚಿಸಿ ಹಿಂದುಳಿದ ವರ್ಗದವರ, ರೈತರ, ಯುವ ಸಮುದಾಯದವರ, ಮಹಿಳೆಯರ ಪರವಾದ ಸರ್ಕಾರ ಬರಬೇಕಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಬಹುಮತದ ಸರ್ಕಾರವನ್ನು ರಚನೆ ಮಾಡಲು ತಮಗೆ ಮತ ನೀಡಿ ಅವಕಾಶ ಕೊಡಬೇಕೆಂದು ವಿನಂತಿಸಿದರು. ಈ ಸಂದರ್ಭದಲ್ಲಿ ಶಾಸಕ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಹೇಶ ಸಾಲಿಮಠ ಇತರರು ಇದ್ದರು.
ಬಿಜೆಪಿ ಶಹರ ಘಟಕದಿಂದ ಮತಯಾಚನೆ
ಹಾವೇರಿ: ಬಿಜೆಪಿ ಶಹರ ಘಟಕದ ಕಾರ್ಯಕರ್ತರು ಹಾವೇರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಶುಕ್ರವಾರ ನಗರದ ನಾಗೇಂದ್ರಮಟ್ಟಿಯಲ್ಲಿ ಮತಯಾಚನೆ ಮಾಡಿದರು.
ಪಾದಯಾತ್ರೆ ಮೂಲಕ ಮತಯಾಚನೆ ಹಾಗೂ ಪ್ರಚಾರ ಕಾರ್ಯಕೈಗೊಂಡ ಕಾರ್ಯಕರ್ತರು ಮನೆಮನೆಗೆ ತೆರಳಿ ಬಿಜೆಪಿ ಸಾಧನೆ ಬಗ್ಗೆ ಹಾಗೂ ದೇಶದ ಭವಿಷ್ಯತ್ತಿನ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಹರ ಘಟಕದ ಅಧ್ಯಕ್ಷ ಗುಡ್ಡನಗೌಡ ಅಂದಾನಿಗೌಡ್ರ ಮಾತನಾಡಿ, ದೇಶದಲ್ಲಿ ಸುಮಾರ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಸಾರ್ವಜನಿಕರು ಬೇಸತ್ತು ಇದೀಗ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ.
ಸುಭದ್ರ ಭಾರತದ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಸರ್ಕಾರದ ಆಡಳಿತ ಕೊನೆಗಾಣಿಸಲು ಹಾಗೂ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮತ ಬಾಂಧವರು ಬಿಜೆಪಿ ಕಮಲದ ಗುರುತಿಗೆ ತಮ್ಮ ಅಮೂಲ್ಯ ಮತ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ಸುರೇಶ ದೊಡ್ಡಮನಿ, ಶಿವಬಸವ್ವ ವನಳ್ಳಿ, ಲಲಿತಾ ಗುಂಡೇನಹಳ್ಳಿ, ಹನುಮಂತಪ್ಪ ದೇವಗಿರಿ, ಸತೀಶ ಹಾವೇರಿ, ಪರಶುರಾಮ ಮೈಲಾರಪ್ಪನವರ, ಗಫಾರ್ ನದಾಫ್, ಸುಭಾಷ್ ಬೆಂಗಳೂರ, ಇರ್ಫಾನ್ ಪಠಾಣ, ಗಂಗವ್ವ ಯರೇಶಿಮೆ, ಹನುಮಂತಪ್ಪ ಪೂಜಾರ, ಕರಬಸಪ್ಪ ಹಳದೂರ, ಮಲ್ಲಣ್ಣ ಸಾತೇನಹಳ್ಳಿ, ಶ್ರೀಪಾದ ಬೆಟಗೇರಿ ಶಿವಬಸಪ್ಪ ಹಲಗಲಿ, ಶಿವಲಿಂಗಪ್ಪ ಕಲ್ಯಾಣಿ, ಪ್ರಶಾಂತ ಅಸುಂಡಿ, ಹನುಮಂತಪ್ಪ ನೂಕಾಪುರ, ಮೆಹಬೂಬ್ ನಾರಂಗಿ, ನಜೀರ್ ನದಾಫ್, ವೇದವ್ಯಾಸ ಕಟ್ಟಿ, ಜ್ಯೋತಿ ಸಾತೇನಹಳ್ಳಿ, ಈರಣ್ಣ ಹೆರೂರ, ದಾವಲಸಾಬ್ ಹಿರೇಮುಗದೂರ, ಬಾಬಣ್ಣ ಮೋಮಿನಗಾರ, ಅಲ್ಲಾಭಕ್ಷ ತಿಮ್ಮಾಪುರ, ನೀಲಮ್ಮ ಹಂಚಗಿ, ಪ್ರವೀಣ ಶೆಟ್ಟರ, ಶೇಖಪ್ಪ ಹತ್ತಿ, ಸತೀಶ ಕೋರಿಶೆಟ್ಟರ, ಲಲಿತಾ ಬಡ್ನಿಮಠ, ಮಂಜುನಾಥ ಪೂಜಾರ, ಜಗದೀಶ ಸವಣೂರ ಇತರರು ಇದ್ದರು.
ಸುಭದ್ರ ಆಡಳಿತಕ್ಕೆ ಸಮರ್ಥ ನಾಯಕ ಅವಶ್ಯ
ಗುತ್ತಲ: ಈ ದೇಶದ ಆರ್ಥಿಕ ವ್ಯವಸ್ಥೆಗೆ ಮತ್ತು ಸುಭದ್ರ ಆಡಳಿತಕ್ಕೆ ಸಮರ್ಥ ನಾಯಕನ ಅವಶ್ಯಕತೆ ಇದೆ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹೇಳಿದರು.
ಸಮೀಪದ ಹೊಸರಿತ್ತಿಯಲ್ಲಿ ಪಾದಯಾತ್ರೆಯ ಮುಖಾಂತರ ಮತಯಾಚನೆ ನಡೆಸಿದ ನಂತರ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಇಲ್ಲಿಯವರೆಗೂ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರ ತನ್ನದೇ ಆದ ಪರಮಾಧಿಕಾರವನ್ನು ಬಳಸಿಕೊಂಡು ಅಧಿಕಾರವನ್ನು ನಡೆಸಿಕೊಂಡಿದೆಯೇ ಹೊರತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನುಚ್ಚುನೂರು ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡಿದೆ. ದೇಶದ ಜನತೆಯನ್ನು ಗೊಂದಲದಲ್ಲಿ ನೂಕಿದೆ ಎಂದು ಉದಾಸಿ ಅಪಾದಿಸಿದರು. ಪ್ರಧಾನ ಕಾರ್ಯದರ್ಶಿ ಸಿದ್ಧರಾಜ ಕಲಕೋಟಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಈ ದೇಶದ ಜನತೆ ನೋಡಿದ್ದಾರೆ. ಮತದಾರರು ಈ ಚುನಾವಣೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸುವ ಮುಖಾಂತರ ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಲು ಕೈಜೋಡಿಸಬೇಕು. ಅದಕ್ಕಾಗಿ ಶಿವಕುಮಾರ ಉದಾಸಿ ಅವರನ್ನು ಬೆಂಬಲಿಸಬೇಕು ಎಂದು ಹೇಳಿದರು. ನಾಗೇಂದ್ರ ಕಟಕೋಳ, ಎನ್.ಕೆ. ಮರೋಳ, ಅಪ್ಪಣ್ಣ ಅರಳಿ, ಮಲ್ಲೇಶಪ್ಪ ಹರಿಜನ, ಕೆ.ಸಿ. ಕೋರಿ ಸೇರಿದಂತೆ ಅನೇಕರು ಇದ್ದರು.