ಮತದಾನ ಪ್ರಮಾಣ ಅಧಿಕಗೊಳಿಸಲು ಕರೆ
ಹಾವೇರಿ: ಗ್ರಾಮೀಣ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಕುಸಿಯುತ್ತಿದ್ದು, ಇಂತಹ ಪ್ರದೇಶಗಳಲ್ಲಿನ ಮತದಾನ ಪ್ರಮಾಣ ಅಧಿಕಗೊಳಿಸಲು ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರೂ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತದಾನ ಪ್ರಮಾಣವನ್ನು ಹೆಚ್ಚಿಸಬೇಕೆಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಕೆ.ಬಿ. ಆಂಜನಪ್ಪ ಕರೆ ನೀಡಿದರು.
ತಾಲೂಕಿನ ನೆಗಳೂರು ಗ್ರಾಮದ ವರದಾ ವಿದ್ಯಾಪೀಠದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ಐದು ತಿಂಗಳ ಕಂಪ್ಯೂಟರ್ ತರಬೇತಿಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಕುರಿತು ರಂಗೋಲಿ ಪ್ರದರ್ಶನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಲೋಕಸಭಾ ಕ್ಷೇತ್ರದಲ್ಲಿ ಮತದಾನ ಪ್ರಮಾಣನವನ್ನು ಶೇ. 85ರಿಂದ 90ರವರೆಗೆ ಹೆಚ್ಚಿಸುವಂತೆ ಗಮನಹರಿಸಬೇಕಾಗಿದೆ. ಮತದಾನ ನಮ್ಮ ಹಕ್ಕು, ಅದನ್ನು ಅರ್ಹ ವ್ಯಕ್ತಿಗೆ ನೀಡುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಮೇಲಿದೆ ಎಂದರು.
ಸುಶಿಕ್ಷಿತರು ವಾಸಿಸುವ ನಗರ ಪ್ರದೇಶಗಳಲ್ಲಿ ಕಡಿಮೆ ಮತದಾನವಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ನಗರ ಪ್ರದೇಶದ ಪ್ರಜ್ಞಾವಂತ ಪ್ರಜೆಗಳು ತಪ್ಪದೇ ಮತದಾನದಲ್ಲಿ ಪಾಲ್ಗೊಂಡು, ಉತ್ತಮ ವ್ಯಕ್ತಿಯನ್ನು ಚುನಾಯಿಸುವಂತೆ ಸಲಹೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರಿ ಮಾತನಾಡಿ, ಮತದಾನ ಸಂವಿಧಾನ ಬದ್ಧ ಹಕ್ಕು, 18 ವರ್ಷ ತುಂಬಿದ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ ಪ್ರತಿಯೊಬ್ಬರೂ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಏ. 17ರಂದು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ತಿಳಿಸಿದರು. ತಾಪಂ ಇಒ ಜಯಕುಮಾರ, ವಾರ್ತಾಧಿಕಾರಿ ಎಂ. ಜುಂಜಣ್ಣ, ವರದಾ ವಿದ್ಯಾಪೀಠದ ಪ್ರಾಂಶುಪಾಲ ಆನಂದ, ಜಿಲ್ಲಾ ಸಂಯೋಜಕ ಎಲ್.ಯು. ನಾಯ್ಕರ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಚಂದ್ರಕಾಂತ ಕುಸನೂರ ಮಾತನಾಡಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ. ಐ.ಎ. ಲೋಕಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಸ್ವಾಗತಿಸಿದರು. ಬಸವರಾಜ ಕಡಪರ ಕಾರ್ಯಕ್ರಮ ನಿರೂಪಿಸಿದರು. ಗಿರೀಶ ವಂದಿಸಿದರು.