ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮೋದಿ ಅಲೆ ಅಲ್ಲ, ಚಂಡಮಾರುತ

Vishwanath S
Updated On : 6 Apr 2014, 12:21 pm

ಹಾವೇರಿ/ಹಿರೇಕೆರೂರು: ಮೋದಿ ಅಲೆಯಿಂದ ದೇಶದಲ್ಲಿ ಪರಿವರ್ತನೆ ಗಾಳಿ ಬೀಸಿದೆ. ಮೋದಿ ಪ್ರಧಾನಿಯಾಗುವ ಮೂಲಕ ದೇಶದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಲಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ಹಿರೇಕೆರೂರು ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಶನಿವಾರ ರೋಡ್ ಶೋ, ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ಮೋದಿ ಅಲೆಯ ಬದಲಿಗೆ ದೇಶದಲ್ಲಿ ಮೋದಿ ಚಂಡಮಾರುತ ಬೀಸಲಿದ್ದು, ಈ ಚಂಡಮಾರುತಕ್ಕೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕೊಚ್ಚಿಕೊಂಡು ಹೋಗಲಿವೆ ಎಂದು ಹೇಳಿದರು.
ಡಾಲರ್ ಮುಂದೆ ರುಪಾಯಿ ಮೌಲ್ಯ ಕುಸಿತಕ್ಕೆ, ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭದ್ರತೆಗೆ ಯುಪಿಎ ಸರ್ಕಾರ ಕಾರಣ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಂಡ ನದಿ ಜೋಡಣೆಯ ಕನಸು ನನಸು ಮಾಡಲು ಮೋದಿ ಕಂಕಣ ಬದ್ಧರಾಗಿದ್ದಾರೆ. ಮತದಾರರು ಸುಭದ್ರ ಭಾರತದ ನಿರ್ಮಾಣಕ್ಕೆ ಮೋದಿ ಬೆಂಬಲಿಸಬೇಕು ಎಂದು ವಿನಂತಿಸಿದರು. ಮಾಜಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಿಂದುಳಿದವರು, ಬಡವರು ಹಾಗೂ ಅಲ್ಪಸಂಖ್ಯಾತರ ಹೆಸರು ಹೇಳಿಕೊಂಡು ದೇಶದಲ್ಲಿ 60 ವರ್ಷಗಳಿಂದ ಆಡಳಿತ ನಡೆಸಿದೆ. ಆದರೆ, ಬಡವರ ಅಲ್ಪಸಂಖ್ಯಾತರ ಅಭಿವೃದ್ಧಿ ಕುರಿತು ಯಾವತ್ತೂ ಚಿಂತಿಸಿಲ್ಲ. ನಾವು ಹಿಂದಿನ ಎಲ್ಲ ತಪ್ಪನ್ನು ಮರೆತು ಒಂದಾಗಿದ್ದೇವೆ. ಆದ್ದರಿಂದ ಮತದಾರರು ಶಿವಕುಮಾರ ಉದಾಸಿಗೆ ಮತ ನೀಡುವ ಮೂಲಕ ಮೋದಿ ಪ್ರಧಾನಿಯಾಗಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಶಾಸಕ ಯು.ಬಿ. ಬಣಕಾರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಸಂಕಪ್ಪ ಮಾರನಾಳ, ಎಸ್.ಆರ್. ಅಂಗಡಿ,  ಭಾರತಿ ಜಂಬಗಿ, ಪಾಲಾಕ್ಷಗೌಡ ಪಾಟೀಲ, ನಿಂಗಪ್ಪ ಚಳಗೇರಿ, ಲಿಂಗರಾಜ ಚಪ್ಪರದಹಳ್ಳಿ, ಎನ್.ಎಂ. ಈಟೇರ ಭಾಗವಹಿಸಿದ್ದರು.
ಪರಮೇಶ್ವರ್ ಅನಾಗರಿಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷ ಡಾ೤ ಜಿ. ಪರಮೇಶ್ವರ್ ಹಿರಿಯ ರಾಜಕಾರಣಿಯಾಗಿ, ಮಾಜಿ ಪ್ರಧಾನಿ ದೇವೇಗೌಡರು ವಿಷ ಕುಡಿಯುವುದನ್ನು ಎದುರು ನೋಡುತ್ತಿದ್ದೇನೆ ಎನ್ನುವುದು ಅನಾಗರಿಕ ಹೇಳಿಕೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಿಡಿಕಾರಿದರು.ಹಿರೇಕೆರೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೆ ವಾಕ್ ಸ್ವಾತಂತ್ರ್ಯವಿದೆ ನಿಜ. ಆದರೆ, ಎಲುಬು ಇಲ್ಲದ ನಾಲಿಗೆ ಅಂಥ ಹಿರಿಯ ರಾಜಕಾರಣಿ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು. ರೈತ ವಿಠ್ಠಲ್ ಅರಬಾವಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸಾರಾಯಿ ಕುಡಿದು ಮೃತಪಟ್ಟಿದ್ದಾನೆಂದು ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಕೂಡಲೇ ಸಿದ್ದರಾಮಯ್ಯ, ಡಾ೤ ಜಿ. ಪರಮೇಶ್ವರ್ ಸಾರ್ವಜನಿಕರ ಕ್ಷಮೆ ಕೇಳಬೇಕು. ಈ ಚುನಾವಣೆಯಲ್ಲಿ  ಜನತೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಸಾಹಿತಿಗಳ ಹೇಳಿಕೆ ಫಲಿತಾಂಶ ಬದಲಿಸದು: ಶೆಟ್ಟರ್
ಬ್ಯಾಡಗಿ: ಎಡಪಂಥೀಯ ವಿಚಾರಧಾರೆ ಇರುವ ಬೆರಳೆಣಿಕೆಯಷ್ಟು ಸಾಹಿತಿಗಳು ಕಾಂಗ್ರೆಸ್‌ನ ಬಂಡವಾಳ ಶಾಹಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದಾರೆ. ಇದರಿಂದ ಬಿಜೆಪಿಯ ಫಲಿತಾಂಶದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಮೋಟೆಬೆನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೋಂಗಿ ಸೆಕ್ಯೂಲರಿಸಂ ಮುಖವಾಡ ಹೊಂದಿರುವ ಇಂತಹ ಸಾಹಿತಿಗಳು ಆರ್‌ಎಸ್‌ಎಸ್ ಹಾಗೂ ಬಿಜೆಪಿಯನ್ನು ನಿಂದಿಸತೊಡಗಿದ್ದಾರೆ. ಕಾರ್ಪೋರೇಟ್ ನಂದನ್ ನಿಲೇಕಣಿಯನ್ನು ಬೆನ್ನು ಹತ್ತಿರುವ ಇವರಿಗೆ ಬಡವರ, ದಲಿತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಇಂತಹ ಸಾಹಿತಿಗಳಿಂದಲೇ ನಕ್ಸಲ್ ವಾದಕ್ಕೆ ಪುಷ್ಟಿ ದೊರೆಯುತ್ತಿದೆ ಎಂದು ಆರೋಪಿಸಿದರು.
ರಾಜಿನಾಮೆ ಕೊಡಲೇಬೇಕು: ರೈತ ವಿಠ್ಠಲ ಅರಭಾವಿ ಸಾವಿಗೆ ಪರೋಕ್ಷವಾಗಿ ಕಾಂಗ್ರೆಸ್ ಕಾರಣ. ಅಧಿವೇಶನದ ವೇಳೆ 5 ನಿಮಿಷ ರೈತರ ಜೊತೆ ಚರ್ಚೆ ನಡೆಸಿದ್ದರೆ ಅರಭಾವಿ ಸಾಯುವ ಪ್ರಶ್ನೆ ಉದ್ಭವವಾಗುತ್ತಿರಲಿಲ್ಲ. ಕೂಡಲೇ ರಾಜ್ಯದ ರೈತರ ಕ್ಷಮೆ ಕೋರುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ನೈತಿಕ ಹೊಣೆಹೊತ್ತು ರಾಜಿನಾಮೆ ನೀಡುವಂತೆ ಆಗ್ರಹಿಸಿದರು. ಈ ಸಂದರ್ಭ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ, ಶಿವರಾಜ ಸಜ್ಜನ, ವಿರೂಪಾಕ್ಷಪ್ಪ ಬಳ್ಳಾರಿ, ರವೀಂದ್ರ ಪಟ್ಟಣಶೆಟ್ಟಿ, ಮುರಿಗೆಪ್ಪ ಶೆಟ್ಟರ, ಅಜೀಜ್ ಬಜಾಪುರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement