ಸಲೀಂ ಅಹ್ಮದ್ಗೆ ಬೆಂಬಲ: ಆರ್. ಶಂಕರ್
ಹಾವೇರಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಣಿಬೆನ್ನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಸ್ಥಾನ ಗಳಿಸಿದ್ದ ತಾವು ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಅವರನ್ನು ಬೆಂಬಲಿಸುವುದಾಗಿ ಬಿಬಿಎಂಪಿ ಮಾಜಿ ಉಪಮೇಯರ್ ಆರ್. ಶಂಕರ್ ತಿಳಿಸಿದ್ದಾರೆ.
ಈ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಲೀಂ ಅಹ್ಮದ್ ಅವರಿಗೆ ನಾನು ಹಾಗೂ ನನ್ನ ಅಭಿಮಾನಿ ಬಳಗದಿಂದ ಬೆಂಬಲ ವ್ಯಕ್ತಪಡಿಸಿದ್ದು, ಚುನಾವಣಾ ಪ್ರಚಾರ ಕಾರ್ಯದಲ್ಲಿಯೂ ತೊಡಗಿಕೊಳ್ಳುತ್ತೇವೆ. ಈ ಬಗ್ಗೆ ಇತ್ತೀಚಿಗೆ ಅಭಿಮಾನಿ ಬಳಗವು ಸಭೆ ಸೇರಿ ಸರ್ವಾನುಮತದಿಂದ ಯಾವುದೇ ಷರತ್ತಿಲ್ಲದೇ ಸಲೀಂ ಅಹ್ಮದ್ರನ್ನು ಬೆಂಬಲಿಸುವ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಸಲೀಂ ಅಹ್ಮದ್ ಅವರೊಂದಿಗೆ ಚರ್ಚಿಸಲಾಗಿದೆ. ಸಲೀಂ ಗೆಲುವಿಗಾಗಿ ಅಭಿಮಾನಿಗಳೊಂದಿಗೆ ಪ್ರಚಾರ ನಡೆಸುತ್ತೇನೆ. ಕ್ಷೇತ್ರದ ಇತರ ಕಡೆಗಳಲ್ಲೂ ಪ್ರಚಾರ ನಡೆಸಲು ಸಿದ್ಧ ಎಂದರು.
ಆರ್. ಶಂಕರ ಅಭಿಮಾನಿ ಬಳಗದ ಪ್ರಮುಖರಾದ ಡಾ. ಮೋಹನ ಹಂಡೆ, ನ್ಯಾಯವಾದಿ ಚಂದ್ರಶೇಖರ ಮುದಕಣ್ಣನವರ, ಈಶ್ವರಪ್ಪ ಕೆಲಗಾರ, ಎಸ್.ಎಂ. ಪಾಟೀಲ, ಮರಡೆಪ್ಪ ಪೂಜಾರ, ಜಗದೀಶ ಯಲಿಗಾರ, ರಾಜೀವ ಅಡಿವೆಪ್ಪನವರ ಇತರರು ಇದ್ದರು.