14ರಿಂದ ತೋಂಟದಾರ್ಯ ಜಾತ್ರೆ
ಕನ್ನಡಪ್ರಭ ವಾರ್ತೆ, ಗದಗ, ಏ. 8
ನಗರದ ತೋಂಟದಾರ್ಯ ಜಾತ್ರಾಮಹೋತ್ಸವ ಏ. 14ರಿಂದ 17ರ ವರೆಗೆ ಜರುಗಲಿದ್ದು, ಈ ಜಾತ್ರಾಮಹೋತ್ಸವದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾಮಹೋತ್ಸವ ಸಮಿತಿ ಉಪಾಧ್ಯಕ್ಷ, ಪ್ರಾಚಾರ್ಯ ಕೆ.ಎಚ್. ಬೇಲೂರ ಹೇಳಿದರು.
ಅವರು ಮಂಗಳವಾರ ಜ. ತೋಂಟದಾರ್ಯ ಕಲ್ಯಾಣ ಕೇಂದ್ರದ ನಿರಂಜನ ಧಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಏ. 7ರಿಂದ 13ರ ವರೆಗೆ ಪ್ರತಿದಿನ ಸಂಜೆ 7.30ಕ್ಕೆ ವಚನಗಳಲ್ಲಿ ಜೀವನ ಮೌಲ್ಯಗಳು ವಚನ ಕಾರ್ಯಕ್ರಮ ಗಿರಿಜಾ ಧರ್ಮರೆಡ್ಡಿ ಅವರಿಂದ ಜರುಗಲಿದೆ. ಏ. 9ರ ಬೆ. 9.30ಕ್ಕೆ ಷಟ್ಸ್ಥಳ ಧ್ವಜಾರೋಹಣ. 11ರ ರಾತ್ರಿ 9ಕ್ಕೆ ಕಳಸಾರೋಹಣ ಮತ್ತು ಬಸವ ಧ್ವಜಾರೋಹಣ ನೆರವೇರುವುದು.
ಏ. 14ರ ಬೆ. 7.30ಕ್ಕೆ ಜಾತ್ರಾ ಪ್ರಾರಂಭೋತ್ಸವ ಉದ್ಘಾಟನೆಯನ್ನು ಸಾಹಿತಿ, ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ನಾ.ಡಿಸೋಜಾ ನೆರವೇರಿಸುವರು. ಲಿಂಗಾಯತರ ಪುಣ್ಯಪುರುಷರ ಸಾಹಿತ್ಯ ರತ್ನ ಮಾಲಿಕೆ ಗ್ರಂಥಗಳ ಬಿಡುಗಡೆಯನ್ನು ಸಾಹಿತಿ ಡಾ. ಕುಂ.ವೀರಭದ್ರಪ್ಪ ನೆರವೇರಿಸುವರು. ಎಂ.ಪಿ. ಪ್ರಕಾಶ, ಅಬ್ಬಿಗೇರಿ ವಿರೂಪಾಕ್ಷಪ್ಪ, ಡಾ. ಎಂ.ಎಸ್. ಲಠ್ಠೆ, ಗಳಂಗಳಪ್ಪ ಪಾಟೀಲ ಇವರ ಕೃತಿಗಳ ಬಿಡುಗಡೆಯಾಗಲಿವೆ. ಏ. 14ರ ಬೆ. 10ರಿಂದ ಸಂಜೆ 4ರ ವರೆಗೆ ಕೃಷಿ ವಿಚಾರ ಸಂಕಿರಣ, ಕೃಷಿ ವಿಜ್ಞಾನಿಗಳ ಸಂವಾದ, ಗೃಹ ವಿಜ್ಞಾನ ವಸ್ತುಪ್ರದರ್ಶನ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಜರುಗುವುದು. ಆಯುರ್ವೇದ ವಿಜ್ಞಾನ ವಸ್ತುಪ್ರದರ್ಶನ, ಆಯುರ್ವೇದ ವನಸ್ಪತಿ ಔಷಧಿಗಳ ಪಂಚಕರ್ಮ ಚಿಕಿತ್ಸೆ, ವಿವಿಧ ಚಿಕಿತ್ಸೆಗಳ ಕುರಿತು ವಸ್ತುಪ್ರದರ್ಶನ ಜರುಗಲಿದೆ. ಏ. 15ರ ಸಂಜೆ 6.30ಕ್ಕೆ ಚಿತ್ತಾ ನಕ್ಷತ್ರದಲ್ಲಿ ಮಹಾರಥೋತ್ಸ ಜರುಗಲಿದೆ.
ಸನ್ಮಾನ: ರಾತ್ರಿ 8ಕ್ಕೆ ಸನ್ಮಾನ ಮತ್ತು ಗ್ರಂಥ ಬಿಡುಗಡೆ ಜರುಗಲಿದ್ದು, ಬೆಂಗಳೂರಿನ ನಿಡುಮಾಮಿಡಿ ಮಹಾ ಸಂಸ್ಥಾನ ಮಠದ ವೀರಭದ್ರ ಚನ್ನಮಲ್ಲ ಶ್ರೀಗಳು ಸಮ್ಮುಖ ವಹಿಸುವರು. ಹರಿಹರ ಪಂಚಮಸಾಲಿ ಪೀಠದ ಸಿದ್ಧಲಿಂಗ ಶ್ರೀಗಳು, ಕಲಬುರ್ಗಿಯ ಸಲಫಲ ಮಠದ ಡಾ. ಮಹಾಂತ ಶಿವಾಚಾರ್ಯರು, ಬೈಲೂರಿನ ನಿಷ್ಕಲಮಂಟಪದ ಮಠದ ನಿಜಗುಣಾನಂದ ಶ್ರೀಗಳು, ಮೈಸೂರಿನ ಜ್ಞಾನಪ್ರಕಾಶ ಶ್ರೀಗಳು, ಕಲಬುರ್ಗಿ ವಿವಿ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ಡಾ. ಶಿವಾನಂದ ಶ್ರೀಗಳಿಗೆ ಗೌರವಾರ್ಪಣೆ ಜರುಗಲಿದೆ. ಲಿಂಗಾಯತ ಪುಣ್ಯಪುರುಷರ ಸಾಹಿತ್ಯ ರತ್ನ ಮಾಲಿಕೆ ಗ್ರಂಥಗಳಾದ ಬಿ.ಎಂ. ಸಾಣಿಕೊಪ್ಪ, ಜಸ್ಟಿಸ್ ಡಿ.ಎನ್. ಮಲ್ಲಪ್ಪ, ಬಿ.ಕೆ. ಬಡಬಡಿ ಈ ಕೃತಿಗಳ ಬಿಡುಗಡೆಯಾಗಲಿದೆ. ಏ. 16ರಂದು ಲಘು ರಥೋತ್ಸವ ಜರುಗಲಿದ್ದು, ಅಂದು ಮಧ್ಯಾಹ್ನ 4ಕ್ಕೆ ಸ್ಥಳೀಯ ಬಸವೇಶ್ವರ ನಗರದ ಕುಬಸದ ಬಂಧುಗಳ ಮನೆಯಿಂದ ಶ್ರೀಮಠಕ್ಕೆ ಶ್ರೀಗಳ ಆಗಮನ, ಸಂಜೆ 6.30ಕ್ಕೆ ಲಘು ರಥೋತ್ಸವ ಜರುಗುವುದು. ಈ ಸಮಾರಂಭದ ಸಮ್ಮುಖವನ್ನು ಜ. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ವಹಿಸುವರು. ಈ ಸಮಾರಂಭದಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಮಹಾದೇವಪ್ಪ, ಧಾರವಾಡ ಕೃಷಿ ವಿವಿಯ ನೂತನ ಕುಲಪತಿ ಡಾ. ಡಿ.ಪಿ. ಬಿರಾದಾರ, ಧಾರವಾಡ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ಡಾ. ಶಿವಾನಂದ ಜಾಮದಾರ ಅವರಿಗೆ ಸನ್ಮಾನ ಜರುಗಲಿದೆ.
ಏ. 17ರ ಸಂಜೆ 7.30ಕ್ಕೆ ಮಂಗಲೋತ್ಸವ ಜರುಗಲಿದೆ. ಈ ಸಮಾರಂಭದ ಸನ್ಮಾನವನ್ನು ಹಾರಕೋಡ ಹಿರೇಮಠ ಸಂಸ್ಥಾನಮಠದ ಡಾ. ಚನ್ನವೀರ ಶಿವಾಚಾರ್ಯ ವಹಿಸುವರು.
ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ನಾಡೋಜ ಬೆಳಗಲ್ ವೀರಣ್ಣ ಆಗಮಿಸುವರು. ಅಂದಿನ ಗ್ರಂಥ ಬಿಡುಗಡೆಯನ್ನು ಧಾರವಾಡದ ವಿಶ್ರಾಂತ ಕುಲಪತಿ ಡಾ. ಎಸ್.ಬಿ. ಹಿರೇಮಠ ನೆರವೇರಿಸುವರು. ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಬೊಳ್ಳೊಳ್ಳಿ, ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಪ್ರಕಾಶ ಅಶೋಕ ಲಕ್ಕುಂಡಿ, ಕರಿಸೋಮನಗೌಡ್ರ, ಬಾಲಚಂದ್ರ ಭರಮಗೌಡ್ರ, ದಾನಯ್ಯ ಗಣಾಚಾರಿ, ಮಲ್ಲಿಕಾರ್ಜುನ ಐಲಿ, ಶಿವಕುಮಾರ ಪಾಟೀಲ, ಶಿವಯೋಗಿ ತಡಸದ, ಪ್ರಕಾಶ ಉಗಲಾಟ, ಸಂಗಣ್ಣ ಲಕ್ಕುಂಡಿ ಇದ್ದರು.