20 ಕಡೆ ಗೆಲ್ತೇವೆ: ಈಶ್ವರಪ್ಪ
ರಾಣಿಬೆನ್ನೂರ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ರಾಣಿಬೆನ್ನೂರು ಪಟ್ಟಣ ಹಾಗೂ ತಾಲೂಕಿನ ಮೇಡ್ಲೇರಿಯಲ್ಲಿ ಮಂಗಳವಾರ ರೋಡ್ ಶೋ ಮೂಲಕ ಮತ ಯಾಚಿಸಿದರು.
ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಿಂದ ತೆರೆದ ವಾಹನದಲ್ಲಿ ಬೀರಲಿಂಗೇಶ್ವರ ವೃತ್ತ, ಕುರಬಗೇರಿ ಓಣಿ, ಕಿಚಡಿ ಓಣಿ, ಸೊಪ್ಪಿನ ಪೇಟೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿದರು.
ಅನಂತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ದೇಶದ ಭದ್ರತೆ, ಸುರಕ್ಷತೆ ದೃಷ್ಟಿಯಿಂದ ಎಲ್ಲರೂ ಬಿಜೆಪಿ ಕಮಲದ ಗುರುತಿಗೆ ಮತ ಹಾಕುವ ಮೂಲಕ ಎಂಟೆದೆಯ ಗಂಡು ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಕಂಕಣ ಬದ್ಧರಾಗಬೇಕು ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮೊಳಗಿನ ಮುಸುಕಿನ ಗುದ್ದಾಟದ ಲಾಭ ಪಡೆದು ಕಾಂಗ್ರೆಸ್ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವ ಶ್ರೀರಾಮುಲು ಬಿಜೆಪಿಗೆ ಮರಳಿರುವುದು ಪಕ್ಷದ ಬಲ ಇಮ್ಮಡಿಗೊಂಡಿದ್ದು, ರಾಜ್ಯದ 20 ಕ್ಷೇತ್ರಗಳಲ್ಲಿ ಬಿಜೆಪಿ ವಿಜಯದ ಮಾಲೆ ಧರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಸಂಕ್ರಪ್ಪ ಮಾರನಾಳ, ಗಂಗಾಧರ ಮಲೆಬೆನ್ನೂರ, ರಾಜ್ಯ ಮಹಿಳಾ ಅಧ್ಯಕ್ಷೆ ಭಾರತಿ ಜಂಬಗಿ, ಮಾಜಿ ಶಾಸಕ ಶಿವಣ್ಣ ತಿಳವಳ್ಳಿ, ವೀರಣ್ಣ ಅಂಗಡಿ, ಮಂಜುನಾಥ ಓಲೇಕಾರ, ಮೈಲಪ್ಪ ಗುಡಗೂರ, ಬಸವರಾಜ ಲಕ್ಷ್ಮೇಶ್ವರ, ಹೂವಕ್ಕ ನಾಗೂರ, ಕಾರ್ಯಕರ್ತರು ಇದ್ದರು.