ಕಾಂಗ್ರೆಸ್ಗೆ ಬೆಂಬಲ: ವಿರೋಧ
ಹಾವೇರಿ: ರೈತ ಸಂಘಕ್ಕೆ ಯಾವುದೇ ಪಕ್ಷದ ಹಂಗು ಬೇಕಿಲ್ಲ. ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರು ರೈತ ಸಂಘದ ಹೆಸರಿನಲ್ಲಿ ಕಾಂಗ್ರೆಸ್ಗೆ ಬೆಂಬಲಿಸುವಂತೆ ಹೇಳಿರುವುದು ಖಂಡನೀಯ. ರೈತರ ಶಕ್ತಿಯನ್ನು ಯಾವುದೇ ಪಕ್ಷದ ಕಾಲಡಿಗೆ ಇಡುವುದು ಬೇಕಾಗಿಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ರೈತ ಸಂಘದ ಮುಖಂಡ ಶಿವಾನಂದ ಗುರುಮಠ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ಕೊಡುವಂತೆ ರೈತ ಸಂಘದ ಕಾರ್ಯಕರ್ತರಿಗೆ ಕರೆ ನೀಡಿರುವುದನ್ನು ನೋಡಿದರೆ ಪುಟ್ಟಣ್ಣಯ್ಯ ಬಣದ ಸಂಘ ಸೈದ್ಧಾಂತಿಕವಾಗಿ ದಿವಾಳಿಯಾಗಿರುವುದನ್ನು ತೋರಿಸುತ್ತದೆ. ಹೋರಾಟದ ಪ್ರವೃತ್ತಿ ಮರೆತು ಹೊಂದಾಣಿಕೆಯ ಸ್ವಭಾವ ಹೊಂದಿದ್ದು ಅಕ್ಷಮ್ಯ. ಆದ್ದರಿಂದ ರೈತರಿಗೆ ಅನ್ಯಾಯ ಮಾಡುತ್ತ ಬಂದಿರುವ ಪಕ್ಷಗಳಿಗೆ ಬೆಂಬಲ ನೀಡಬಾರದು ಎಂದು ಅವರು ಆಗ್ರಹಿಸಿದರು.
ಈ ಹಿಂದೆ ಕ್ಷೇತ್ರದಿಂದ ಆಯ್ಕೆಯಾದ ಬಹುತೇಕ ಸಂಸದರು ಜಿಲ್ಲೆಯವರಲ್ಲ. ಅವರಿಂದ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಕೊಡುಗೆ ಸಿಕ್ಕಿಲ್ಲ. ಶಿವಕುಮಾರ ಉದಾಸಿ ಅವರು ಕಳೆದ 5 ವರ್ಷಗಳಿಂದ ತಮ್ಮ ಪ್ರದೇಶಾಭಿವೃದ್ಧಿ ಅನುದಾನವನ್ನು ಎಷ್ಟು ಮತ್ತು ಯಾವುದಕ್ಕೆ ಖರ್ಚು ಮಾಡಲಾಗಿದೆ ಎಂಬುದನ್ನು ತಿಳಿಸಬೇಕು. ಎಲ್ಲ ಪಕ್ಷಗಳ ಅಭ್ಯರ್ಥಿಗಳೂ ಆರೋಪ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ನೀವು ಆರಿಸಿ ಬಂದರೆ ಏನು ಮಾಡುತ್ತೀರಿ ? ಎಂಬುದನ್ನು ಅಭ್ಯರ್ಥಿಗಳು ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದರು. ರಾಜಶೇಖರ ಬೂದಿಹಳ್ಳಿ, ಈರಪ್ಪ ಪೂಜಾರ, ವಿಜಯಕುಮಾರ ಕೋಣನತಲಿ, ತೆವರಪ್ಪ, ಭೀಮಣ್ಣ ನರೇಗಲ್ಲ, ಶಿವಪ್ಪ ಬೆನಕಣ್ಣನವರ ಇತರರು ಇದ್ದರು.