ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಲ್ಲೆ: ಪೌರಕಾರ್ಮಿಕರ ಪ್ರತಿಭಟನೆ

Mainashree
Updated On : 10 Apr 2014, 10:12 am

ಹಾವೇರಿ: ಕರ್ತವ್ಯ ನಿರತ ನಗರಸಭೆ ಪೌರಕಾರ್ಮಿಕರ ಮೇಲೆ ನಡೆದ ಹಲ್ಲೆ ಹಾಗೂ ಜೀವ ಬೆದರಿಕೆಯನ್ನು ಖಂಡಿಸಿ ನಗರಸಭೆ ಎದುರು ಬುಧವಾರ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು.
ಇಲ್ಲಿನ ಶಿವಾಜಿ ನಗರ 3ನೇ ಕ್ರಾಸ್‌ನಲ್ಲಿ ಸತ್ತು ಬಿದ್ದಿದ್ದ ಹತ್ತಾರು ಹಂದಿಗಳನ್ನು ನಗರದಿಂದ ಹೊರ ಸಾಗಿಸಲು ಬುಧವಾರ ಬೆಳಗ್ಗೆ ಪೌರಕಾರ್ಮಿಕರು ತೆರಳಿದಾಗ ಹಂದಿ ಸಾಕಣೆದಾರರು ಪೌರಕಾರ್ಮಿಕರಾದ ಎಸ್.ಎಂ. ಮಾಳಗಿ, ಮಲಕಪ್ಪ ಅಂಗಡಿ, ಹನುಮಂತಪ್ಪ ಮರಿಯಣ್ಣನವರ ಎಂಬುವರ ಮೇಲೆ ಹಲ್ಲೆ ನಡೆಸಿದ್ದರು. ಇದನ್ನು ಖಂಡಿಸಿ ಎಲ್ಲ ಪೌರಕಾರ್ಮಿಕರು ನಗರವನ್ನು ಶುಚಿಗೊಳಿಸುವ ಕಾರ್ಯ ಅರ್ಧಕ್ಕೆ ಮೊಟಕುಗೊಳಿಸಿ ನಗರಸಭೆ ಎದುರು ಪ್ರತಿಭಟನೆಗೆ ಮುಂದಾದರು.
ನಗರದಲ್ಲಿ ಹಂದಿಗಳ ಕಾಟ ವಿಪರೀತವಾಗಿರುವ ಹಿನ್ನೆಲೆಯಲ್ಲಿ ತೊಂದರೆ ಅನುಭವಿಸುವ ಸಾರ್ವಜನಿಕರು ಹಂದಿಗಳನ್ನು ನಿಯಂತ್ರಿಸುವಂತೆ ನಗರಸಭೆಗೆ ಅನೇಕ ಬಾರಿ ದೂರು ನೀಡುದ್ದರು. ಅಲ್ಲದೆ, ಈ ಬಗ್ಗೆ ಸಾಮಾನ್ಯ ಸಭೆಗಳಲ್ಲೂ ಚರ್ಚೆಯಾಗಿ ಹಂದಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಡ ಹಾಕಿದ್ದರು. ಆದರೆ, ಅವುಗಳನ್ನು ಹಿಡಿದು ಬೇರೆಡೆ ಸಾಗಿಸಲು ತೆರಳಿದರೆ ಹಂದಿಗಳ ಮಾಲೀಕರು ಹಲ್ಲೆ ನಡೆಸುತ್ತಿದ್ದಾರೆ ಎಂದು ಪೌರಕಾರ್ಮಿಕರು ದೂರಿದರು.
ಹಲ್ಲೆಗೊಳಗಾದ ಪೌರಕಾರ್ಮಿಕ ಎಸ್.ಎಂ. ಮಾಳಗಿ ಮಾತನಾಡಿ, ಶಿವಾಜಿ ನಗರದಲ್ಲಿ ಹಂದಿಗಳು ಸತ್ತು ಗಬ್ಬೆದ್ದು ನಾರುತ್ತಿದ್ದ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಅವುಗಳನ್ನು ದೂರ ಸಾಗಿಸಲು ತೆರಳಿದಾಗ ಹಂದಿ ಸಾಕಣೆದಾರರು ಹಲ್ಲೆ ನಡೆಸಿದ್ದಾರೆ.
ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಿ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ನಗರದಲ್ಲಿ ಹಂದಿಗಳನ್ನು ಹಿಡಿಯಲು ಹಾಗೂ ಅವುಗಳು ಸತ್ತು ಬಿದ್ದರೂ ಅವುಗಳನ್ನು ಹೊರ ಸಾಗಿಸುವುದಿಲ್ಲ ಎಂದರು. ಸ್ಥಳಕ್ಕಾಗಮಿಸಿದ ನಗರಸಭೆ ಆಯುಕ್ತ ಶಿವಕುಮಾರಯ್ಯ, ಹಲ್ಲೆ ನಡೆಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗುವುದು ಎಂದು ಭರವಸೆ ನೀಡಿ ಕಾರ್ಮಿಕರ ಮನವೊಲಿಸಿದರು.
ಬಸವರಾಜ ಬೊಗಳಿ, ಕೆ.ಕೆ. ಗೌಡರ್, ರಮೇಶ ಮುಂಜೂರಿ, ಉಡಚಪ್ಪ ಮಾಳಗಿ, ಅರ್ಜುನ ಮಜಗೇರಿ, ಯಲ್ಲಪ್ಪ ಮಾಳಗಿ, ರಾಜು ಮಾಳಗಿ, ಹನುಮಂತಪ್ಪ ಮರಡೂರ, ಮಂಜು ದೊಡ್ಡಮನಿ ಸೇರಿದಂತೆ ಹಲವಾರು ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement