ಕುಡಿವ ನೀರಿಗೆ ಆಗ್ರಹ
ಹಾವೇರಿ: ಕುಡಿಯಲು ಸಮರ್ಪಕ ನೀರು ಪೂರೈಸುವಂತೆ ಒತ್ತಾಯಿಸಿ ಇಲ್ಲಿನ ದೇಸಾಯಿ ಗಲ್ಲಿ ಸಾರ್ವಜನಿಕರು ವಾರ್ಡ್‌ನ ಸದಸ್ಯೆ ಹಾಗೂ ನಗರಸಭೆ ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ ಮನೆ ಎದುರು ಗುರುವಾರ ಹಠಾತ್ ಪ್ರತಿಭಟನೆ ನಡೆಸಿದರು.
ಕುಡಿವ ನೀರಿನ ಸಮಸ್ಯೆ ತೀವ್ರಗೊಂಡಿದ್ದರೂ ಸ್ಪಂದಿಸದ ವಾರ್ಡ್ ಸದಸ್ಯೆ ರತ್ನಾ ಭೀಮಕ್ಕನವರ ವಿರುದ್ಧ ದೇಸಾಯಿ ಗಲ್ಲಿ ಜನರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಕೆಲ ದಿನಗಳ ಹಿಂದೆಯೇ ದೇಸಾಯಿ ಗಲ್ಲಿಗೆ ನೀರು ಪೂರೈಸುವುದು ಸೇರಿದಂತೆ ಅನೇಕ ಪ್ರಮುಖ ಸಮಸ್ಯೆಗಳ ಕುರಿತು ವಾರ್ಡ್ ಸದಸ್ಯರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿಯನ್ನು ಮಾಡಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದೀಗ ಬೇಸಿಗೆ ಕಾಲ ಆರಂಭವಾಗಿದ್ದರಿಂದ ದೇಸಾಯಿ ಗಲ್ಲಿ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ನಗರಸಭೆ ಕೂಡ ಹದಿನೈದು ದಿನಕ್ಕೊಮ್ಮೆ ಕುಡಿಯಲು ನೀರು ಪೂರೈಸುತ್ತಿದೆ. ನಗರಸಭೆಯ ಆವಾಂತರದಿಂದ ಸಾರ್ವಜನಿಕರು ನಿತ್ಯ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಪ್ರವೀಣ ಬಣಕಾರ, ಬಸವರಾಜ ಜಕಿನಕಟ್ಟಿ, ಶಿವಬಸವ ಸಾತೇನಹಳ್ಳಿ, ಅಜಿತ್ ಮಲ್ಲಾಡ್, ರಾಜಶೇಖರ ಪಬ್ಬಣನವರ, ದತ್ತಾವಾಜಪೇರಿ ಡಾಂಗೆ, ಕಮಲಬಾಯಿ ಡಾಂಗೆ, ನಾಗರಾಜ ರಂಪೂರೆ, ವಿರೂಪಾಕ್ಷಪ್ಪ ನವಲಿ, ಬಸಮ್ಮ ಗಾಣಿಗೇರ, ಬ್ರಹ್ಮಕುಮಾರ ಹೊಸೂರ, ಪ್ರೇಮಕ್ಕ ಚವಡಿ, ರಮೇಶ ಗುಂಡೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು.