ನಮೋ ಅಲೆಗೆ ಕಾಂಗ್ರೆಸ್ ಧೂಳಿಪಟ
ಹಾನಗಲ್ಲ: ಇಡೀ ದೇಶದಲ್ಲಿ ನರೇಂದ್ರ ಮೋದಿ ಪರವಾಗಿ ಎದ್ದಿರುವ ಅಲೆ ಕಂಡು ಕಂಗಾಲಾಗಿರುವ ಕಾಂಗ್ರೆಸ್ ನಾಯಕರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಟೀಕಿಸಿದರು.
ತಾಲೂಕಿನ ಇನಾಂಯಲ್ಲಾಪುರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಮತ ಯಾಚನೆ ಕೈಗೊಂಡು ಅವರು ಮಾತನಾಡಿದರು. ಗುಜರಾತ್ ರಾಜ್ಯದಲ್ಲಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳು ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ದೇಶದ ಯಾವ ಮೂಲೆಗೆ ಹೋದರೂ ಅವರ ಪರವಾದ ಮಾತುಗಳು ಕೇಳಿ ಬರುತ್ತಿವೆ. ಮೋದಿ ಅಲೆ ಕಂಡು ಸೋಲಿನ ಭೀತಿಗೆ ಒಳಗಾಗಿರುವ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಸಂಸತ್ತಿನ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಶಿವಕುಮಾರ ಉದಾಸಿ ಅವರನ್ನು ಇನ್ನೊಂದು ಅವಧಿಗೆ ಲೋಕಸಭೆಗೆ ಕಳುಹಿಸಲು ಮತದಾರರು ನಿರ್ಧರಿಸಿದ್ದಾರೆ ಎಂದರು.
ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರಿಲ್ಲ: ರೈತ ಮುಖಂಡ ಎ.ಎಸ್. ಬಳ್ಳಾರಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಗೊಂಡರೆ ರೈತರ ಬಾಳು ಹಸನಾಗಲಿದೆ. ರೈತ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರೆಯಲಿದೆ. ರೈತನ ಸರ್ವತೋಮುಖ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಆದರೆ ಕಾಂಗ್ರೆಸ್‌ನಲ್ಲಿ ದೇಶವನ್ನು ಮುನ್ನಡೆಸಬಲ್ಲ ಸಮರ್ಥ ನಾಯಕರಿಲ್ಲ. ಹೀಗಾಗಿ ಅವರು ವ್ಯಕ್ತಿಯ ಹೆಸರಿನಲ್ಲಿ ಪ್ರಚಾರ ಮಾಡುತ್ತಿಲ ಎಂದರು. ಟಿಎಪಿಸಿಎಂಎಸ್ ಅಧ್ಯಕ್ಷ ವಿಜಯೇಂದ್ರ ಕನವಳ್ಳಿ, ತಾಪಂ ಮಾಜಿ ಸದಸ್ಯ ಮನೋಜ ದೇಸಾಯಿ, ಮುಖಂಡರಾದ ರಾಜಣ್ಣ ಗೌಳಿ, ಉದಯಕುಮಾರ ವಿರುಪಣ್ಣನವರ, ಸುರೇಶ ಮಡಿವಾಳರ, ರುದ್ರಪ್ಪ ಹಣ್ಣಿ, ರಾಮಣ್ಣ ಬಡೆಮ್ಮನವರ, ಅಬ್ದುಲರಜಾಕ್ ಕುಂದಗೋಳ ಇದ್ದರು.