ನರೇಂದ್ರ ಮೋದಿ ಪ್ರಧಾನಿಯಾದ್ರೆ ತುರ್ತು ಪರಿಸ್ಥಿತಿ
ರಾಣಿಬೆನ್ನೂರು: ಕೋಮುವಾದಿ ಶಕ್ತಿಗಳಿಗೆ ದೇಶದ ಮತದಾರರು ಬುದ್ಧಿ ಕಲಿಸಲು ಮುಂದಾಗಿದ್ದಾರೆ. ನರೇಂದ್ರ ಮೋದಿ ಕೈಯಲ್ಲಿ ದೇಶದ ಆಡಳಿತ ಸಿಕ್ಕರೆ ತುರ್ತು ಪರಿಸ್ಥಿತಿ ಜಾರಿಯಾಗುತ್ತದೆ ಎಂದು ಕೇಂದ್ರ ಕಾರ್ಮಿಕ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಖಾತೆ ಸಚಿವ ಕೆ. ರೆಹಮಾನ ಖಾನ್ ಹೇಳಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ನಗರದಲ್ಲಿ ಮತ ಯಾಚನೆ ನಡೆಸಿದ ಅವರು, ಬಿಜೆಪಿ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಎಡವಿದೆ. ಬಿಜೆಪಿಯಿಂದ ಮುಖ್ಯ ಮಂತ್ರಿಗಳಾದವರು ಆಸ್ಸಾಂ, ಛತ್ತೀಸಗಡ ರಾಜ್ಯಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದಾರೆ. ಆದರೆ, ಗುಜರಾತ್ನಲ್ಲಿ ಬಡವರನ್ನು ಧಿಕ್ಕರಿಸಿ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸಿರುವ ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಆಯ್ಕೆ ಮಾಡಿದೆ ಎಂದು ಟೀಕಿಸಿದರು. ನಜೀರ ಅಹ್ಮದ್, ನಾಸಿರುದ್ದೀನಷಾ, ಶಾಸಕ ಕೆ.ಬಿ. ಕೋಳಿವಾಡ ಮಾತನಾಡಿದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಕಂಬಳಿ, ನಗರಾಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ, ನಗರಸಭಾಧ್ಯಕ್ಷ ಶಿವಣ್ಣ ಮಣೇಗಾರ, ಬಸವರಾಜ, ಎಂ.ಕೆ. ಮೊಹಿಯುದ್ದೀನ, ಆಲ್ ಹಜ ಸುಬಾನಿ ಚೂಡಿಗಾರ, ಇಖ್ಬಾಲ್ಸಾಬ್ ರಾಣಿಬೆನ್ನೂರು ಇದ್ದರು.