ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮೋದಿ ಬಿಂಬಿಸಿದ್ದೇ ಕಳಂಕ

Mainashree
Updated On : 11 Apr 2014, 10:40 am

ಹಾವೇರಿ: ಮೂರು ಸಾವಿರಕ್ಕೂ ಹೆಚ್ಚು ಜನರ ಹತ್ಯೆಯ ಹೊಣೆಯಿಂದ ನುಣುಚಿಕೊಳ್ಳುವ ನರೇಂದ್ರ ಮೋದಿಯನ್ನು ಪ್ರಧಾನಿ ಹುದ್ದೆಗೆ ಬಿಂಬಿಸಿರುವುದೇ ದೇಶಕ್ಕೆ ದೊಡ್ಡ ಕಳಂಕ ಎಂದು ಕೇಂದ್ರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಕೆ. ರೆಹಮಾನ್‌ಖಾನ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ರಾಜ್ಯದ ಜನರ ಪ್ರಾಣ ರಕ್ಷಣೆ ಜವಾಬ್ದಾರಿ ಆ ರಾಜ್ಯದ ಮುಖ್ಯಮಂತ್ರಿ ಮೇಲಿರುತ್ತದೆ. ಆದರೆ, ಗುಜರಾತ್‌ನಲ್ಲಿ ನಡೆದ ನರಮೇಧದಲ್ಲಿ ನನ್ನ ಪಾತ್ರವಿಲ್ಲವೆಂದು ತನಿಖಾ ವರದಿಗಳು, ಸುಪ್ರೀಂಕೋರ್ಟ್ ಹೇಳಿವೆ ಎಂದು ತನ್ನ ಜವಾಬ್ದಾರಿಯಿಂದ ನುಣಚಿಕೊಳ್ಳುವ ವ್ಯಕ್ತಿಯಿಂದ ದೇಶದ ಜನರ ರಕ್ಷಣೆಯ ಜವಾಬ್ದಾರಿ ಹೇಗೆ ಹೊತ್ತುಕೊಳ್ಳಲು ಸಾಧ್ಯ ಎಂದು ಅವರು ಪ್ರಶ್ನಿಸಿದರು. 2002ರಲ್ಲಿ ನಡೆದ ನರಮೇಧದಲ್ಲಿ ನನ್ನ ಪಾತ್ರವಿಲ್ಲ ಎಂದು ಹೇಳುವ ಮೋದಿ, ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಜನರ ಪ್ರಾಣ ರಕ್ಷಣೆ ಮಾಡುವ ಕುರಿತು ಪ್ರಮಾಣ ಮಾಡಿರುವುದು ಮರೆತಂತೆ ಕಾಣುತ್ತದೆ ಎಂದು ಟೀಕಿಸಿದರು.
ಗುಜರಾತ್ ಮೊದಲಿನಿಂದಲೂ ಅಭಿವೃದ್ಧಿ ಹೂಂದಿದ ರಾಜ್ಯ. ಮೋದಿ ಅಧಿಕಾರಕ್ಕೆ ಬರುವ ಮುನ್ನವೇ ಗುಜರಾತ್ ಸಾಕಷ್ಟು ಅಭಿವೃದ್ಧಿಯಾಗಿತ್ತು. ಅಲ್ಲಿರುವ ದೊಡ್ಡ ಉದ್ಯಮಗಳು ಕಾಂಗ್ರೆಸ್ ಕೊಡುಗೆಯಾಗಿವೆ ಎಂದ ಅವರು, ಮೋದಿ ಮೂರು ಬಾರಿ ಮುಖ್ಯಮಂತ್ರಿಯಾದ ಮೇಲೆ ಗುಜರಾತ್‌ಗೆ ನೀಡಿರುವ ಕೊಡುಗೆ ಏನು ಎಂಬುದನ್ನು ದೇಶದ ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದರು. ಮೂರು ಬಾರಿ ಮುಖ್ಯಮಂತ್ರಿ ಆಗಿರುವುದೇ ದೊಡ್ಡ ಸಾಧನೆ ಎನ್ನುವುದಾದರೆ, ದೇಶದಲ್ಲಿ ಮೂರಲ್ಲ, ಸತತ ಐದು ಬಾರಿ ಮುಖ್ಯಮಂತ್ರಿಗಳಾದವರು ಇದ್ದಾರೆ ಎಂಬುದನ್ನು ಮೋದಿ ಹಾಗೂ ಬಿಜೆಪಿ ಅರಿತುಕೊಳ್ಳಬೇಕು ಎಂದರು. ಜಾತ್ಯತೀತ ಹಾಗೂ ಕೋಮುವಾದ ತತ್ವಗಳಡಿ ದೇಶದ 16ನೇ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಆರ್‌ಎಸ್‌ಎಸ್ ತನ್ನ ತತ್ವಗಳನ್ನು ಬಿಂಬಿಸುವುದಕ್ಕಾಗಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಮಾಡಲಾಗಿದೆ. ದೇಶದ ಜನರು ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಕಳೆದ 10 ವರ್ಷಗಳಲ್ಲಿ ಯುಪಿಎ ಸರ್ಕಾರ ದೇಶದ ಸಾಮಾನ್ಯ ಪ್ರಜೆಗೆ ಅಧಿಕಾರ ಕೊಟ್ಟಿದೆ. ನರೇಗಾ, ಆರ್‌ಟಿಐ, ಆಹಾರ ಭದ್ರತೆ ಸೇರಿದಂತೆ ಅನೇಕ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟ ಹೆಗ್ಗಳಿಗೆ ಕಾಂಗ್ರೆಸ್ ಪಕ್ಷದ್ದು. ಯುಪಿಎ ಸರ್ಕಾರವನ್ನು ಭ್ರಷ್ಟ ಎಂದು ಹೇಳುವ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಆರ್‌ಟಿಐ ಕಾನೂನು ಬಂದಿದ್ದರಿಂದಲೇ ಭ್ರಷ್ಟಾಚಾರ ಬಯಲಿಗೆ ಬರುತ್ತಿದೆ. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುವುದಿದ್ದರೆ ಆರ್‌ಟಿಐ ಕಾನೂನನ್ನು ಯುಪಿಎ ಜಾರಿಗೆ ತರುತ್ತಿತ್ತೇ ಎಂದು ರೆಹಮಾನ್ ಖಾನ್ ಪ್ರಶ್ನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement