ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅರಿಷಿಣ, ಕುಂಕುಮ ನೀಡಿ ಆಮಂತ್ರಣ!

Mainashree
Updated On : 12 Apr 2014, 10:16 am

ಹಾವೇರಿ: ಮಹಿಳಾ ಮತದಾರರು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುವಂತೆ ಮಾಡಲು ಸಾಂಪ್ರದಾಯಿಕ ಟಚ್ ನೀಡಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಮಹಿಳಾ ಮತದಾರರಿಗೆ ಅರಿಷಿಣ-ಕುಂಕುಮ ನೀಡುವ ಮೂಲಕ ಮತಗಟ್ಟೆಗೆ ಬಂದು ಕಡ್ಡಾಯ ಮತಚಲಾಯಿಸುವಂತೆ ಆಮಂತ್ರಣ ನೀಡಲಿದ್ದಾರೆ.
ಮಹಿಳಾ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಈ ವಿನೂತನ ಪ್ರಯೋಗ ಹಮ್ಮಿಕೊಳ್ಳಲಾಗಿದೆ. ಮದುವೆ, ಸೀಮಂತ ಮುಂತಾದ ಶುಭ ಕಾರ್ಯಗಳಿಗೆ ತಮ್ಮ ಸಂಬಂಧಿಕರಿಗೆ ಅರಿಷಿಣ-ಕುಂಕುಮ ನೀಡಿ ಆಹ್ವಾನಿಸುವುದು ಸಾಮಾನ್ಯ. ಅದೇ ಮಾದರಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವ ಮತದಾನವೆಂಬ ಶುಭಕಾರ್ಯಕ್ಕೆ ಆಮಂತ್ರಣ ನೀಡಲು ಗಲ್ಲಿ ಗಲ್ಲಿಗಳಲ್ಲಿರುವ ಮತದಾರರ ಮನೆಗೆ ತೆರಳಿ, ಅರಿಷಿಣ-ಕುಂಕುಮ ನೀಡಲು ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆರು ಅಣಿಯಾಗಿದ್ದಾರೆ.
ಮೂರು ದಿನ ಕಾರ್ಯಕ್ರಮ: ಗುರುವಾರ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಮಹಿಳಾ ಮತದಾನ ಸಂಖ್ಯೆ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಏ. 13, 14 ಹಾಗೂ 15ರಂದು ಈ ವಿಶೇಷ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ನಡೆಸಲು ನಿರ್ಧರಿಸಿದೆ. ಒಟ್ಟು 1,914 ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಲಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಮಹಿಳಾ ಮತದಾನ ಪ್ರಮಾಣ ಕಡಿಮೆಯಾದ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಮತಗಟ್ಟೆಗೆ ಕರೆತರಲು ಸಮಿತಿ ಹಲವು ಯೋಜನೆಗಳನ್ನು ರೂಪಿಸಿದೆ.
ಸಾಂಪ್ರದಾಯಿಕ ಪದ್ಧತಿಗೆ ಮೊರೆ: ಅರಿಷಿಣ-ಕುಂಕುಮ ಭಾರತೀಯ ಮಹಿಳೆಯರ ಪಾಲಿಗೆ ಸೌಭಾಗ್ಯ. ಜಿಲ್ಲಾ ಸ್ವೀಪ್ ಸಮಿತಿ ಮಹಿಳಾ ಮತದಾರರನ್ನು ಸುಲಭವಾಗಿ ಮತಗಟ್ಟೆಗೆ ಕರೆತಂದು ಮತದಾನ ಪ್ರಮಾಣ ಹೆಚ್ಚಳಕ್ಕೆ ಸುಲಭ, ಪರಿಣಾಮಕಾರಿ ವಿಧಾನ ಬಳಸುತ್ತಿರುವುದು ಕಾರ್ಯಕ್ರಮದ ವಿಶೇಷ.
ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 11,49,611 ಮತದಾರರಿದ್ದು, ಅದರಲ್ಲಿ 5,46,542 ಮಹಿಳೆಯರು. ಅವರ ಮನವೊಲಿಸಿ ಮತಗಟ್ಟೆಗೆ ಕರೆತರಲು ಅಂಗನವಾಡಿ ಕಾರ್ಯಕರ್ತೆಯರು ಅರಿಷಿಣ-ಕುಂಕುಮ ನೀಡಿ ಏ. 17ರಂದು ತಪ್ಪದೇ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುವಂತೆ ವಿನಂತಿಸಲಿದ್ದಾರೆ.
13ರಿಂದ ಚಾಲನೆ: ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರನ್ನು ಮತಗಟ್ಟೆಗೆ ಕರೆತರಲು ಜಿಲ್ಲಾ ಸ್ವೀಪ್ ಸಮಿತಿ ಜಿಲ್ಲೆಯಲ್ಲಿ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ಜಾಗೃತಿಗಾಗಿ ಹಲವು ಚಟುವಟಿಕೆ ಆಯೋಜಿಸಿದೆ. ಇದರ ಜೊತೆಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಲು ಅರಿಷಿಣ-ಕುಂಕುಮದ ಆಹ್ವಾನ ಮತ್ತಷ್ಟು ಪರಿಣಾಮಕಾರಿಯಾಗಲಿದೆ ಎಂದು ಏ. 13ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರೂಪಣಾಧಿಕಾರಿ ವಿಜಯಕುಮಾರ ತಿಳಿಸಿದ್ದಾರೆ.

ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement