ಕಂದಾಯ ಗ್ರಾಮಕ್ಕಾಗಿ ಮತ ಬಹಿಷ್ಕಾರ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಏ. 11
ಲಕ್ಷ್ಮೇಶ್ವರದಿಂದ ಹಾಗೂ ಶಿರಹಟ್ಟಿಯಿಂದಲೂ 17-18 ಕಿ.ಮೀ. ದೂರದ ಚನ್ನಪಟ್ಟಣ ಕುಗ್ರಾಮ ಉದಯವಾಗಿ 50-60 ವರ್ಷ ಗತಿಸಿದೆ. ಬೇರೆ ಬೇರೆ ಗ್ರಾಮಗಳಿಂದ ಅಕ್ಕಿಗುಂದ-ಶೆಟ್ಟಿಕೇರಿ ಗ್ರಾಮದ ಗುಡ್ಡದ ಪಕ್ಕದಲ್ಲಿರುವ ಅರಣ್ಯ ಇಲಾಖೆಯ ಜಮೀನಿಗೆ ವಲಸೆ ಬಂದ ಜಮೀನು ರಹಿತ ಕೃಷಿ ಕಾರ್ಮಿಕರು ಇಲ್ಲಿ ಗುಡಿಸಲು ನಿರ್ಮಿಸಿಕೊಂಡು ಹಾಗೂ ಪಕ್ಕದ ಅರಣ್ಯ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡುತ್ತ ತಮ್ಮ ಜೀವನ ಸಾಗಿಸುತ್ತಾ ಬಂದಿದ್ದಾರೆ.
ಈ ಗ್ರಾಮದಲ್ಲಿ ಸುಮಾರು 200 ಕುಟುಂಬಗಳಲ್ಲಿ 700ರಿಂದ 750 ಜನರು ವಾಸಿಸುತ್ತಿದ್ದಾರೆ. 200 ಮತದಾರರು ಇದ್ದಾರೆ. ಆದರೆ, ಇಲ್ಲಿನ ನಾಗರಿಕರಿಗೆ ಮೂಲ ಸೌಲಭ್ಯ ಇಲ್ಲ. ರಾಜಕಾರಣಿಗಳಿಗೆ ಚುನಾವಣೆ ಬಂದಾಗ ಮಾತ್ರ ಈ ಗ್ರಾಮ ನೆನಪಾಗುತ್ತದೆ.
ಸ್ವಂತ ಮನೆಗಳಿಲ್ಲ: ಇಲ್ಲಿನ ಜನರಿಗೆ ಸ್ವಂತ ಮನೆಯಿಲ್ಲ. ಇದ್ದರೂ ಎಲ್ಲವೂ ಗುಡಿಸಲುಗಳು, ಹೊಲಗಳಲ್ಲಿ ಉಳುಮೆ ಮಾಡುತ್ತಿದ್ದಾರೆ. ಆದರೆ, ಹೊಲದ ಪಟ್ಟಾ ಇವರ ಹೆಸರಿನಲ್ಲಿ ಇಲ್ಲ. ಕುಡಿಯಲು ನೀರು ಇಲ್ಲ. ಇದ್ದ ಬೋರ್ವೆಲ್ಗಳಲ್ಲಿ ಫ್ಲೋರೈಡ್ಯುಕ್ತ ನೀರು. ಪಟ್ಟಣಕ್ಕೆ ಹೋಗಲು ದಿನಕ್ಕೆ 2 ಬಸ್ ಮಾತ್ರ ಇವೆ. ಮಳೆಗಾಲದಲ್ಲಿ ಇಲ್ಲಿನ ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರು ಬೇರೆ ಊರಿಗೆ ಹೋಗಲು ಹಾಗೂ ಆಸ್ಪತ್ರೆಗೆ ಹೋಗಬೇಕಾದಲ್ಲಿ 8-10 ಕಿ.ಮೀ. ನಡೆದುಕೊಂಡೇ ಸಾಗಬೇಕು. ಕಿರಿಯ ಪ್ರಾಥಮಿಕ ಶಾಲೆ ಮಾತ್ರ ಇಲ್ಲಿ ಇದ್ದು, ಹೆಚ್ಚಿನ ಶಿಕ್ಷಣಕ್ಕೆ ದೂರದ ಊರುಗಳಿಗೆ ಹೋಗಬೇಕು. ಹೀಗಾಗಿ ಇಲ್ಲಿನ ಮಕ್ಕಳು ಶಿಕ್ಷಣದಿಂದ ವಂಚಿತ. ವೋಟು ಕೇಳಲು ಬರುವ ಜನಪ್ರತಿನಿದಿಗಳು ಕಂದಾಯ ಗ್ರಾಮ, ಜಮೀನಿನ ಹಕ್ಕು ಪತ್ರ, ಆಶ್ರಯ ನಿವೇಶನದ ಪೊಳ್ಳು ಭರವಸೆ ನೀಡುತ್ತಿರುವುದನ್ನು ಮನಗಂಡು ಚನ್ನಪಟ್ಟಣದ ಗ್ರಾಮಸ್ಥರು ಈ ಬಾರಿಯ ಲೋಕಸಭಾ ಚುನಾವಣೆ ಬಹಿಷ್ಕಾರದ ನಿರ್ಧಾರಕ್ಕೆ ಬಂದಿದ್ದಾರೆ.
ಬಾಳ್ವೆ ಹೆಂಗ ಮಾಡಬೇಕ್ರಿ...: ಇಲ್ಲಿ ಹಲವಾರು ವರ್ಷಗಳಿಂದ ನಾವು ಜೀವನ ಮಾಡಾಕತ್ತಿವ್ರಿ. ಆದರೆ, ಇಲ್ಲಿ ಏನ್ ಸಮಸ್ಯೆ ಐತಿ ಅನ್ನೊದ ಮಾತ್ರ ಯಾವ ಸರ್ಕಾರ ಕೇಳಂಗಿಲ್ರಿ, ಇಲೆಕ್ಷನ್ ಬಂದಾಗ ಎಲ್ಲರೂ ಬರತಾರ್ರಿ, ಮೂಗಿಗ ತುಪ್ಪ ಹಚ್ಚದಂಗ ಮಾಡಿ ಹೋಗತಾರ್ರಿ. ಅದಕ್ಕ ಈ ಸಲ ನಾವು ವೋಟ್ ಹಾಕೋದ ಬಿಟ್ಟ ಬಿಡತೇವ್ರಿ, ನಮಗ ಕಂದಾಯ ಗ್ರಾಮ ಅಂತಾ ಮಾಡೋವರೆಗೆ ನಾವು ವೋಟ್ ಹಾಕಂಗಿಲ್ರಿ ಎನ್ನುತ್ತಾ ತನ್ನ ಆಕ್ರೋಶವನ್ನು 85 ವರ್ಷದ ಹಿರಿಯ ಹುಲಗಪ್ಪ ಒಡ್ಡರ ಹೊರಹಾಕುತ್ತಾನೆ.
ಅಶೋಕ ಸೊರಟೂರ