ಪ್ರಚಾರಕ್ಕೆ ಅಡ್ಡಿ: ದೂರು
ಹಾವೇರಿ: ನಗರದ 21ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಿದ ಸಂದರ್ಭ ಇಬ್ಬರು ಪ್ರಚಾರಕ್ಕೆ ಅಡ್ಡಿಪಡಿಸಿದ್ದು, ಇವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಆದರೆ, ಅವರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿಲ್ಲ ಎಂದು ನಗರಸಭೆ ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ 21ನೇ ವಾರ್ಡ್ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ನನ್ನ ವಾರ್ಡ್ನ ಮೂಲಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆದರೆ, ಕಮಲ ಕಲ್ಯಾಣ ಮಂಟಪದ ಬಳಿ ಪ್ರಚಾರಕ್ಕೆ ತೆರಳಿದ್ದಾಗ ಸತೀಶ ಹತ್ತಿಮತ್ತೂರ, ರತ್ನಾಕರ ಕಳಸೂರು ಎಂಬುವರು ಅಡ್ಡಗಟ್ಟಿ, ಪ್ರಚಾರಕ್ಕೆ ತಡೆ ಒಡ್ಡಿದ್ದಾರೆ. ಇಲ್ಲಿಗೆ ಪ್ರಚಾರಕ್ಕೆ ಬರಬಾರದು ಎಂದು ಹೇಳಿ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ ಎಂದರು. ಈ ಘಟನೆ ಕಳೆದ ಏ. 9ರಂದು ನಡೆದಿದೆ. ನಂತರ ಮರುದಿನ ನಗರಸಭೆಗೆ ಹೋದಾಗಲೂ ಈ ಇಬ್ಬರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಆದ್ದರಿಂದ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಶಹರ ಠಾಣೆಗೆ ದೂರು ನೀಡಿದ್ದೇನೆ ಎಂದರು. ಜಯಶ್ರೀ ಶಿವಪೂರ, ಶಾಂತಾ ಶಿರೂರ, ತಲಿತಮ್ಮ ಹುಗ್ಗಿ, ಶಶಿಕಲಾ ಮಠದ ಇದ್ದರು.
ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ
ಹಾವೇರಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನದ ಆಶಯವೇ ನಿರ್ನಾಮವಾಗಿ ಸಾಮಾಜಿಕ ನ್ಯಾಯ ಮೂಲೆಗುಂಪಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬರುತ್ತದೆ ಎಂದು ಕರ್ನಾಟಕ ಜಾತ್ಯತೀತ ಒಕ್ಕೂಟದ ಮನೋಹರ ಮತ್ತು ಅಖಿಲಾ ಆರೋಪ ಮಾಡಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ವ್ಯಕ್ತಿ ಸ್ವಾತಂತ್ರ್ಯ ನಾಶವಾಗುವುದರಲ್ಲಿ ಸಂದೇಹವೆ ಇಲ್ಲ. ಮೋದಿ ಗೆಲ್ಲಿಸಿ ಭಾರತ ಗೆಲ್ಲಿಸಿ ಎನ್ನುವ ಮೂಲಕ ಭಾರತದ ಮುಖವನ್ನಾಗಿಸುವ ನೀಚ ಹುನ್ನಾರವನ್ನು ಕೋಮುವಾದಿ ಬಿಜೆಪಿ ಮಾಡುತ್ತಿದೆ ಇದು ಖಂಡನಾರ್ಹ ಎಂದರು.