ಮೋದಿ ರ್ಯಾಲಿಗೆ ಸಿದ್ಧತೆ
ಹಾವೇರಿ: ನಗರದ ಹಾನಗಲ್ ರಸ್ತೆಯಲ್ಲಿ ಏ. 13ರಂದು ಬಿಜೆಪಿ ಹಮ್ಮಿಕೊಂಡಿರುವ ನರೇಂದ್ರ ಮೋದಿ ಪ್ರಚಾರ ಹಾಗೂ ಭಾರತ ವಿಜಯ ರ್ಯಾಲಿಗೆ ಭರ್ಜರಿ ತಯಾರಿ ನಡೆದಿದ್ದು, ಅಗತ್ಯ ವ್ಯವಸ್ಥೆ ಕಲ್ಪಿಸುವ ಕಾರ್ಯ ಪೂರ್ಣಗೊಂಡಿದೆ. ಕಾರ್ಯಕ್ರಮದ ಪೂರ್ವ ಸಿದ್ಧತಾ ಕಾರ್ಯಕ್ಕೆ ಕೇಸರಿ ಪಡೆ ಟೊಂಕ ಕಟ್ಟಿ ನಿಂತಿದ್ದು, ಮೋದಿ ಭಾಷಣ ಕೇಳಲು ಒಂದು ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ.
ಈ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಮಾಹಿತಿ ನೀಡಿದ್ದು, ಈ ರ್ಯಾಲಿಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿರುವುದರಿಂದ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ವಿಐಪಿಗಳಿಗೆ, ವಿವಿಐಪಿಗಳಿಗೆ, ಮಹಿಳೆಯರಿಗಾಗಿ ಹಾಗೂ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಹಾವೇರಿ ಲೋಕಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಮನೆಮನೆಗೆ ತೆರಳಿ ಪ್ರಚಾರ ಮಾಡಲಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿಗೆ ಹೆಚ್ಚಿನ ರೀತಿ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಕಂಗೆಟ್ಟಿದ್ದಾರೆ. ಅದೇ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ವಾಹನ ನಿಲುಗಡೆಗೆ ವ್ಯವಸ್ಥೆ: ವಿಐಪಿಗಳಿಗೆ, ವಿವಿಐಪಿಗಳಿಗೆ ವೇದಿಕೆಯ ಬಲಬದಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ವಿಐಪಿಗಳಿಗೆ, ವಿವಿಐಪಿಗಳಿಗೆ ವಾಹನ ನಿಲುಗಡೆಗೆ ಪಾಸ್ ನೀಡಲಾಗಿದ್ದು, ಭಾರತ ವಿಜಯ ರ್ಯಾಲಿಗೆ ಆಗಮಿಸುವ ಸಾರ್ವಜನಿಕರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಗದಗದಿಂದ ಬರುವ ವಾಹನಗಳಿಗೆ ಹಾನಗಲ್ ರಸ್ತೆ ವೈಭವಲಕ್ಷ್ಮೀ ಪಾರ್ಕ್ ಹಾಗೂ ಪಕ್ಕದ ಜಮೀನಿನಲ್ಲಿ, ಹಾನಗಲ್ಲನಿಂದ ಬರುವ ವಾಹನಗಳಿಗೆ ಕಾರ್ಯಕ್ರಮ ನಡೆಯುವ ಬಲಗಡೆ ಜಮೀನಿನಲ್ಲಿ, ಬ್ಯಾಡಗಿ, ರಾಣಿಬೆನ್ನೂರ, ಹಿರೇಕೆರೂರನಿಂದ ಬರುವ ವಾಹನಗಳಿಗೆ ಕೆರಿಮತ್ತಿಹಳ್ಳಿ ಸರ್ವೀಸ್ ರಸ್ತೆ ಪಕ್ಕದಲ್ಲಿ ಹಾಗೂ ಹಾವೇರಿ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರಿಗೆ ಹೆಗ್ಗೇರಿ ರಸ್ತೆ ಪಕ್ಕದ ಜಮೀನಿನಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.