ದೇಶದ ಉದ್ದಗಲಕ್ಕೂ ಮೋದಿ ಗಾಳಿ
ಹಾವೇರಿ: ದೇಶದ ಉದ್ದಗಲಕ್ಕೂ ಮೋದಿ ಗಾಳಿ ಬೀಸುತ್ತಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗುವುದು ನಿಶ್ಚಿತ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಹಾವೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಭಾರತ ವಿಜಯ ರ್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಂದು ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರೀತಿಯಲ್ಲಿ ಇಂದು ಕೂಡ ಯುವ ಜನತೆ ಮೋದಿ ಬೆಂಬಲಕ್ಕೆ ನಿಂತು ದೇಶದ ರಕ್ಷಣೆಗೆ ಪಣ ತೊಟ್ಟಿದ್ದಾರೆ. ಕಾಂಗ್ರೆಸ್ ಸರ್ವನಾಶ ಆಗಲಿದೆ. ಭ್ರಷ್ಟಾಚಾರ ಮುಕ್ತ, ಸಮರ್ಥ ನಾಯಕತ್ವಕ್ಕಾಗಿ ಮೋದಿ ಅಗತ್ಯವಾಗಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಮಾತನಾಡಿ, 10 ವರ್ಷಗಳಲ್ಲಿ ಭಾರತವನ್ನು ನಿರ್ನಾಮ ಮಾಡಿದ್ದೇ ಕಾಂಗ್ರೆಸ್ ಸಾಧನೆ. ಭ್ರಷ್ಟಾಚಾರ ನಡೆಸಿ ದೇಶದ ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡಿದೆ. ಆದ್ದರಿಂದ ಜನ ಬದಲಾವಣೆ ಬಯಸುತ್ತಿದ್ದು, ಅದು ನರೇಂದ್ರ ಮೋದಿ ಅವರಿಂದ ಸಾಧ್ಯ ಎಂಬುದನ್ನು ಅರಿತಿದ್ದಾರೆ ಎಂದರು.
ಕ್ಷೇತ್ರದ ಅಭ್ಯರ್ಥಿ ಶಿವಕುಮಾರ ಉದಾಸಿ ಮಾತನಾಡಿ, ಜನತೆ ಕಾಂಗ್ರೆಸ್ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಆ ಪಕ್ಷದವರಿಗೂ ತಮ್ಮ ನಾಯಕತ್ವದ ಮೇಲೆ ವಿಶ್ವಾಸ ಇಲ್ಲದಂತಾಗಿದೆ. ಕೃಷಿಯನ್ನು ಉದ್ಯಮವನ್ನಾಗಿ ಮಾಡದೇ, ರೈತರನ್ನು ಸಂಕಷ್ಟಕ್ಕೆ ದೂಡಿದೆ. ಬೆಳೆ ವಿಮೆಯಲ್ಲೂ ಏಕರೂಪದ ನೀತಿಯಿಲ್ಲ. ಯುವಕರಿಗೆ ಉದ್ಯೋಗ ಮರೀಚಿಕೆಯಾಗಿದೆ. ಇದಕ್ಕೆಲ್ಲ ಉತ್ತರ ಬೇಕಾದರೆ ಮೋದಿ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ದೇಶದ ಸ್ವಾಭಿಮಾನ ಎತ್ತಿ ಹಿಡಿಯುವ ವ್ಯಕ್ತಿ ಇಂದು ಪ್ರಧಾನಿಯಾಗಬೇಕಿದೆ. ಭ್ರಷ್ಟಾಚಾರದ ಮೂಲಕ ಖಜಾನೆ ಖಾಲಿ ಮಾಡಿರುವ ಯುಪಿಎ ಸರ್ಕಾರವನ್ನು ಬದಲಾಯಿಸುವ ತೀರ್ಮಾನ ಕೈಗೊಳ್ಳಬೇಕಿದೆ. ಭಾರತ ಮಾತೆಯ ರಕ್ಷಣೆಗಾಗಿ ಪ್ರತಿಯೊಬ್ಬರೂ ಮೋದಿ ಅವರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಮಾಜಿ ಸಚಿವ ಸಿ.ಎಂ. ಉದಾಸಿ, ಶಾಸಕ ಯು.ಬಿ. ಬಣಕಾರ, ಎಂಎಲ್ಸಿ ಸೋಮಣ್ಣ ಬೇವಿನಮರದ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ನೆಹರು ಓಲೆಕಾರ, ಕಳಕಪ್ಪ ಬಂಡಿ, ಜಿ. ಶಿವಣ್ಣ, ರಾಮಣ್ಣ ಲಮಾಣಿ, ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ, ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಭಾರತಿ ಜಂಬಗಿ ಇದ್ದರು.