ಮಾಯಾವತಿ ಮುಂದಿನ ಪ್ರಧಾನಿ: ಹಾಲಪ್ಪ
ಹಾನಗಲ್ಲ: ಈ ಬಾರಿಯ ಲೋಕಸಭೆ ಚುನಾವಣಾ ಫಲಿತಾಂಶ ದೇಶಕ್ಕೆ ಮಹತ್ವದ ಪರಿವರ್ತನೆ ನೀಡಲಿದ್ದು, ಬಹುಜನ ಸಮಾಜವಾದಿ ಪಾರ್ಟಿಯ ಮಾಯಾವತಿ ಪ್ರಧಾನಿ ಹುದ್ದೆಗೇರಲಿದ್ದಾರೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಹುಜನ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಹಾಲಪ್ಪ ತಿಮ್ಮೇನಹಳ್ಳಿ ಭರವಸೆ ವ್ಯಕ್ತಪಡಿಸಿದರು.
ಶನಿವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮತದಾರರ ಬಳಿಗೆ ತೆರಳಿ ಮತಯಾಚಿಸಿ ನಂತರ ಮಾತನಾಡಿ, ದೇಶದಲ್ಲಿ ಶ್ರೀಮಂತ-ಬಡವರ ಮಧ್ಯದಲ್ಲಿ ವರ್ಗ ಸಂಘರ್ಷ ನಡೆಯುತ್ತಿದೆ. ಬಿಎಸ್‌ಪಿ ನಿರಂತರವಾಗಿ ಶೋಷಿತರು, ತುಳಿತಕ್ಕೊಳಗಾದ ಜನಾಂಗದ ಏಳ್ಗೆಗೆ ಶ್ರಮಿಸುತ್ತಿದೆ.
ಇಂತಹ ಹೋರಾಟದ ಹಿನ್ನೆಲೆಯ ಉತ್ತರ ಪ್ರದೇಶ ಮುಖ್ಯಮಂತ್ರಿ ದಲಿತ ಮಹಿಳೆ ಮಾಯಾವತಿ ಈ ಬಾರಿಗೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಬಿಎಸ್‌ಪಿ ಸಂಘಟನೆ ಬಲಿಷ್ಠವಾಗಿದೆ ಎಂದರು.
ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಮರೆಣ್ಣನವರ, ಕಾರ್ಯದರ್ಶಿ ವಿಜಯಕುಮಾರ ವಿರಕ್ತಮಠ, ಹಾನಗಲ್ಲ ತಾಲೂಕು ಘಟಕದ ಅಧ್ಯಕ್ಷ ಎನ್.ಟಿ. ಮಂಜುನಾಥ ಸೇರಿದಂತೆ ಇತರರು ಇದ್ದರು.
--
ಜನತೆಗೆ ಕಾಂಗ್ರೆಸ್ ಸ್ಪಂದನೆ
ಬ್ಯಾಡಗಿ: ಸಾಮೂಹಿಕ ಜವಾಬ್ದಾರಿ ತೋರುವ ಮೂಲಕ ಮತದಾರನ ಭಾವನೆಗಳಿಗೆ ಸ್ಪಂದಿಸುವುದೇ ಕಾಂಗ್ರೆಸ್ ಸಂಸ್ಕೃತಿ. ಕಾರ್ಯಕರ್ತರ ಶ್ರಮವನ್ನು ಒರೆಗಲ್ಲಿಗೆ ಹಚ್ಚುವ ಚುನಾವಣೆ ಇದಾಗಿದ್ದು, 5 ದಿವಸ ಎಚ್ಚರ ತಪ್ಪಿನಡೆದರೆ 5 ವರ್ಷ ಪರಿತಪಿಸಬೇಕಾಗುತ್ತದೆ ಎಂದು ಎಐಸಿಸಿ ವೀಕ್ಷಕ ಮತ್ತು ದೆಹಲಿ ಎಪಿಎಂಸಿ ಅಧ್ಯಕ್ಷ ಕಮಲಕಾಂತ್ ಶರ್ಮಾ ಕಾರ್ಯಕರ್ತರಿಗೆ ಎಚ್ಚರಿಸಿದರು. ಶಾಸಕ ಬಸವರಾಜ ಶಿವಣ್ಣನವರ ನಿವಾಸದಲ್ಲಿ ಭಾನುವಾರ ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಸಲೀಂ ಅಹ್ಮದ್ ಗೆಲ್ಲುವ ಅಭ್ಯರ್ಥಿಯಾಗಿದ್ದು ಅವರಿಂದ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಅಭಿವೃದ್ಧಿ ಕಾರ್ಯಗಳಾಗಬೇಕಾಗಿದೆ. ಹಳ್ಳಿಯಿಂದ ದೆಹಲಿ ವರಿಷ್ಠರವರೆಗೂ ನೇರವಾದ ಸಂಪರ್ಕ ಇವರುವಂತಹ ವ್ಯಕ್ತಿ. ಇಂತವರನ್ನು ಬೆಂಬಲಿಸದಿದ್ದರೆ ಕಾಂಗ್ರೆಸ್ ಜತೆಗೆ ಕ್ಷೇತ್ರದ ಮತದಾರರು ಪರಿತಪಿಸಬೇಕಾಗುತ್ತದೆ ಎಂದರು. ವೀಕ್ಷಕ ಡಿ. ಬಸವರಾಜ ಮಾತನಾಡಿ, ಕಾರ್ಯಕರ್ತರು ಸಲೀಂಅಹ್ಮದ್ ಅವರ ಗೆಲುವಿಗೆ ಹಗಲಿರುಳೆನ್ನದೇ ಶ್ರಮಿಸಬೇಕಾಗಿದೆ ಎಂದರು. ಶಾಸಕ ಬಸವರಾಜ ಶಿವಣ್ಣನವರ, ಮುಖಂಡರಾದ ಎಸ್.ಆರ್.ಪಾಟೀಲ, ಎಸ್.ಸಿ. ಶಿಡೇನೂರ, ಹುಸೇನಸಾಬ್ ದೊಡಮನಿ, ಸುರೇಶಗೌಡ ಪಾಟೀಲ, ದಾನಪ್ಪ ಚೂರಿ, ರಮೇಶ ಸುತ್ತಕೋಟಿ, ಶಂಭನಗೌಡ ಪಾಟೀಲ, ಹುಚ್ಚನಗೌಡ ಲಿಂಗನಗೌಡ್ರ, ಚಂದ್ರಣ್ಣ ಸೊಟ್ಟೆಮ್ಮನವರ, ರುದ್ರಪ್ಪ ಹೊಂಕಣ, ಮಾರುತಿ ಅಚ್ಚಿಗೇರಿ, ಮಂಜನಾಥ ಭೋವಿ, ದುರ್ಗೇಶ ಗೋಣೆಮ್ಮನವರ ಇನ್ನಿತರರು ಇದ್ದರು.