ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮೋದಿ ನೋಡಲು ಜನಸಾಗರ

Lingaraj Badiger
Updated On : 14 Apr 2014, 11:23 am

ಹಾವೇರಿ:  ಹಾವೇರಿ ನಗರ ಭಾನುವಾರ ಕೇಸರಿಮಯವಾಗಿತ್ತು. ರಣ ಬಿಸಿಲಿನಲ್ಲೂ ಮೋದಿ ಭಾಷಣ ಕೇಳಲು ಜನಸಾಗರವೇ ಹರಿದುಬಂದಿತ್ತು. ಎಲ್ಲರ ಬಾಯಲ್ಲೂ ಮೋದಿ.. ಮೋದಿ..ಮೋದಿ...
ಇಲ್ಲಿಯ ಹಾನಗಲ್ಲ ರಸ್ತೆಯ ಹೊಲವೊಂದರಲ್ಲಿ ಬಿಜೆಪಿ ಏರ್ಪಡಿಸಿದ್ದ ಭಾರತ ವಿಜಯ ರ್ಯಾಲಿ ಹಾಗೂ ಕ್ಷೇತ್ರದ ಅಭ್ಯರ್ಥಿ ಶಿವಕುಮಾರ ಉದಾಸಿ ಪ್ರಚಾರ ಸಭೆ ಸಂಪೂರ್ಣ ಮೋದಿ ಕೇಂದ್ರಿತವಾಗಿತ್ತು. ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಮೋದಿ ವೇದಿಕೆಗೆ ಆಗಮಿಸುವ ವೇಳೆಗೆ 3 ಗಂಟೆಯಾಗಿತ್ತು. ಆದರೆ, ವಿವಿಧೆಡೆಯಿಂದ ಮೋದಿ ಭಾಷಣ ಕೇಳಲು ಬೆಳಗ್ಗೆಯಿಂದಲೇ ಜನ ಆಗಮಿಸುತ್ತಿದ್ದರು. ಕಾರ್ಯಕ್ರಮ ನಡೆಯುವ ವೇಳೆಗೆ ಲಕ್ಷಾಂತರ ಜನ ಜಮಾಯಿಸಿದ್ದರು.
ನೀರಿಗೆ ನೂಕುನುಗ್ಗಲು: ಮಧ್ಯಾಹ್ನದ ರಣ ಬಿಸಿಲಿನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನ ಬೆಂದು ಬಸವಳಿದಿದ್ದರು. ಆದರೆ ಮಜ್ಜಿಗೆ ಹಾಗೂ ನೀರಿನ ಪ್ಯಾಕೆಟ್‌ಗಳನ್ನು ಅಲ್ಲಲ್ಲಿ ವಾಹನದ ಮೂಲಕ ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ಮಜ್ಜಿಗೆ ಹಾಗೂ ನೀರಿನ ಪ್ಯಾಕೆಟ್‌ಗಳನ್ನು ಮೇಲಿನಿಂದ ತೂರುತ್ತಿದ್ದರೆ, ಅದನ್ನು ಪಡೆಯಲು ಜನ ಮುಗಿ ಬೀಳುತ್ತಿದ್ದರು. ಮಹಿಳೆಯರು, ವೃದ್ಧರಾದಿಯಾಗಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ತಲೆ ಮೇಲೆ ಪೇಪರ್, ಕರವಸ್ತ್ರ ಹಾಕಿಕೊಂಡು ಭಾಷಣ ಕೇಳುತ್ತಿದ್ದರು. ಮೈಯಿಂದ ಬೆವರು ಇಳಿಯುತ್ತಿದ್ದರೂ ಲೆಕ್ಕಿಸದೇ ಮೋದಿ ಭಾಷಣವನ್ನು ಆಸಕ್ತಿಯಿಂದ ಕೇಳುತ್ತಿದ್ದರು.
ಖಾಕಿ ಭದ್ರತೆ: ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು. ಬಸ್ ನಿಲ್ದಾಣದ ಬಳಿಯಿಂದ ಕಾರ್ಯಕ್ರಮದ ಸ್ಥಳದವರೆಗೆ ಹೆಜ್ಜೆಹೆಜ್ಜೆಗೂ ಖಾಕಿಧಾರಿಗಳು ನಿಂತಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ತಪಾಸಣೆ ನಡೆಸಿಯೇ ಒಳಗೆ ಬಿಡಲಾಗುತ್ತಿತ್ತು.
ಮೋದಿ ಭಾಷಣಕ್ಕೂ ಪೂರ್ವದಲ್ಲಿ ಪ್ರಮುಖ ನಾಯಕರು ಮಾತನಾಡುವಾಗಲೂ ಮೋದಿ.. ಎಂದು ಜನ ಕೂಗುತ್ತಿದ್ದರು. ನಂತರ ಮೋದಿ ಭಾಷಣ ಆರಂಭಿಸುತ್ತಿದ್ದಂತೆ ಕರತಾಡನ, ಕೇಕೆ ಮುಗಿಲು ಮುಟ್ಟಿದವು. ಬಿಜೆಪಿ ನಾಯಕರು ಮೋದಿ ಅವರಿಗೆ ಕಂಬಳಿ ಹೊದಿಸಿದ್ದು ವಿಶೇಷವಾಗಿತ್ತು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement