ಕ್ಷೇತ್ರದಲ್ಲಿ ಮೋದಿ ಮೋಡಿ ನಡೆಯದು
ಹಾವೇರಿ: ನರೇಂದ್ರ ಮೋದಿ ಹಾವೇರಿಯಲ್ಲಿ ಭಾನುವಾರ ಕಾಂಗ್ರೆಸ್ ವಿರುದ್ಧ ಮಾಡಿರುವ ಟೀಕೆಗಳಿಗೆ ಯಾವುದೇ ಅರ್ಥವಿಲ್ಲ. ಕಾಂಗ್ರೆಸ್ ದೇಶದ ಶಾಂತಿ, ನೆಮ್ಮದಿಗೆ ತನ್ನದೇ ಆದ ಕೊಡುಗೆ ನೀಡಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿ ಜನರ ಪ್ರೀತಿ ವಿಶ್ವಾಸ ಹೊಂದಿದೆ. ಪಕ್ಷಕ್ಕೆ ತ್ಯಾಗ, ಬಲಿದಾನದ ಇತಿಹಾಸವಿದೆ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ನಗರದಲ್ಲಿ ಸಲೀಂ ಅಹ್ಮದ್ ಪರ ಮತಯಾಚಿಸಿ ಮಾತನಾಡಿದ ಅವರು, ಎರಡು ತತ್ವಗಳ ಆಧಾರದ ಮೇಲೆ ಚುನಾವಣೆ ನಡೆದಿದೆ. ಬಿಜೆಪಿ ಕೋಮುವಾದ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ಜನತೆ ಜಾತ್ಯತೀತ ನಿಲುವಿನ ಕಾಂಗ್ರೆಸ್ ಬೆಂಬಲಿಸುತ್ತಾರೆ. ಮೋದಿಯವರು ಕಾಂಗ್ರೆಸ್ ಬಗ್ಗೆ ಹಗುರವಾಗಿ ಮಾತನಾಡಿದ್ದು, ಅವರ ಸಂಸ್ಕೃತಿ ತೋರಿಸುತ್ತದೆ ಎಂದು ಹೇಳಿದರು.
10 ವರ್ಷಗಳಲ್ಲಿ ದೇಶದಲ್ಲಿ ಅಧಿಕಾರ ನಡೆಸಿದ ಯುಪಿಎ ಸರ್ಕಾರ ಅನೇಕ ಆದರ್ಶಗಳೊಂದಿಗೆ ಪ್ರಗತಿವಾದದ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಿದೆ. ಅಲ್ಪಸಂಖ್ಯಾತರ ಮಂತ್ರಾಲಯವನ್ನು ಕೇಂದ್ರ ಸರ್ಕಾರ ಸ್ಥಾಪಿಸಿದೆ. ಪ್ರತಿ ವರ್ಷ ಕೋಟ್ಯಂತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ. ಎಲ್ಲಾ ವರ್ಗದ ಜನರ ಹಿತ ಕಾಯುವಲ್ಲಿ ಯುಪಿಎ ಸರ್ಕಾರ ಶ್ರಮಿಸಿದೆ. ಮತದಾರರು ಕಾಂಗ್ರೆಸ್ ಬೆಂಬಲಿಸುತ್ತಿದ್ದು, ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸೋಲಿನ ಭೀತಿಯಿಂದ ಬಿಜೆಪಿಯವರು ನರೇಂದ್ರ ಮೋದಿಯನ್ನು ಹಾವೇರಿಗೆ ಕರೆತಂದು ಪ್ರಚಾರ ಭಾಷಣ ಮಾಡಿಸಿದ್ದಾರೆ. ಜನರು ಪ್ರಜ್ಞಾವಂತರಿದ್ದಾರೆ. ಹಾವೇರಿಯಲ್ಲಿ ಮೋದಿಯವರ ಮೋಡಿ ನಡೆಯದು ಎಂದು ಅವರು ಹೇಳಿದರು.