ಭ್ರಷ್ಟಾಚಾರ ತೊಡೆಯಲು ಮೋದಿ ಪ್ರಧಾನಿಯಾಗಲಿ: ಪ್ರಮೀಳಾ ನೇಸರ್ಗಿ
ಹಾವೇರಿ: ದೇಶದಲ್ಲಿ ಮನೆ ಮಾಡಿರುವ ಭಷ್ಟಾಚಾರವನ್ನು ಬುಡಸಮೇತ ಕಿತ್ತುಹಾಕಲು, ದೇಶದ ಜನತೆಗೆ ಉತ್ತಮ ಆಡಳಿತ ನೀಡಲು ನರೇಂದ್ರ ಮೋದಿ ಭಾರತದ ಪ್ರಧಾನಿಯಾಗುವುದು ಅಗತ್ಯವಿದೆ ಎಂದು ರಾಜ್ಯದ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಹಾಗೂ ಖ್ಯಾತ ವಕೀಲೆ ಪ್ರಮೀಳಾ ನೇಸರ್ಗಿ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ನಡೆದ ವಕೀಲರ ಸಂವಾದ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ 10 ವರ್ಷ ಆಡಳಿತ ನಡೆಸಿದ ಯುಪಿಎ ಸರ್ಕಾರ ದೇಶವನ್ನು ಲೂಟಿ ಮಾಡುವುದರಲ್ಲಿಯೇ ಕಾಲಹರಣ ಮಾಡಿದೆ.
ಪ್ರಧಾನಿ ಮನಮೋಹನ್ಸಿಂಗ್ ಸೋನಿಯಾ ಗಾಂಧಿ ಕೈಗೊಂಬೆಯಂತೆ ವರ್ತಿಸುವ ಮೂಲಕ ಭ್ರಷ್ಟರ ರಕ್ಷಣೆ ಮಾಡಿರುವುದು ನಾಚಿಗೇಡು ಸಂಗತಿ. ಈ ಎಲ್ಲ ದುರಂತಕ್ಕೆ ಏನೊಂದನ್ನೂ ಅರಿಯದ ಮುಗ್ಧ ಮತದಾರರು ಕಾಂಗ್ರೆಸ್ಗೆ ಮತ ನೀಡಿರುವುದೇ ಕಾರಣ ಎಂದರು.
ಜನಸಾಮಾನ್ಯರ ನಾಡಿಮಿಡಿತ ಅರಿತ, ಸರ್ವರ ಒಳಿತನ್ನು ಬಯಸುವ ಹಾಗೂ ಎಲ್ಲರ ಶ್ರೇಯೋಭಿವೃದ್ಧಿ ಬಗ್ಗೆ ಸದಾ ಚಿಂತಿಸುವ ಮೋದಿ ಅವರ ಕೈ ಬಲಪಡಿಸಬೇಕು. ಸಾಹಿತಿಗಳಿಗಿಂತ ವಕೀಲರೇ ನಿಜವಾದ ತುಂಬಾ ಬುದ್ಧಿಜೀವಿಗಳು. ಇದೇ ಕಾರಣಕ್ಕಾಗಿಯೇ ವಕೀಲರನ್ನು ಮುಖ್ಯವಾಹಿನಿಯಲ್ಲಿ ಗುರುತಿಸುತ್ತಾರೆ. ಎಲ್ಲ ತಿಳಿದವರು ಭ್ರಷ್ಟರ ಕೈಗೆ ಅಧಿಕಾರ ನೀಡದೇ, ದೇಶದ ಹಿತಚಿಂತನೆ ಬಗ್ಗೆ ಯೋಚಿಸುವ, ಜನಪರ ಕಾಳಜಿವುಳ್ಳ ಶಿವಕುಮಾರ ಉದಾಸಿ ಅವರಿಗೆ ಮತದಾನ ಮಾಡಬೇಕು ಎಂದರು.
ವಕೀಲರ ಸಂಘದ ಜಿಲ್ಲಾ ಸಂಚಾಲಕ ಕೆ.ಎನ್. ಕೊರಬ್ಯಾನಮಠ, ಸಹ ಸಂಚಾಲಕ ಕುಮಾರ ಎಳೆಹೊಳಿ, ಬಿಜೆಪಿ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ, ಸಿದ್ದರಾಜ ಕಲಕೋಟಿ, ಸಂಕಪ್ಪ ಮಾರನಾಳ, ಭಾರತಿ ಜಂಬಗಿ, ಗುಡ್ಡನಗೌಡ ಅಂದಾನಿಗೌಡ್ರ, ವಕೀಲರಾದ ಶೈಲಾ ಅಂಕಲಗಿ ಇತರರು ಇದ್ದರು.
ಸಿ.ಎಂ. ಇಬ್ರಾಹಿಂ ಮಾತು ಅವರ ಯೋಗ್ಯತೆಗೆ ಕೈಗನ್ನಡಿ
ಗದಗ: ಸಿ.ಎಂ. ಇಬ್ರಾಹಿಂ ಮಾತುಗಳು ಅವರ ಯೋಗ್ಯತೆಗೆ ಹಿಡಿದ ಕನ್ನಡಿಯಾಗಿವೆ. ಅವರು ಇನ್ನೊಬ್ಬರ ಬಗ್ಗೆ ಹೀಯಾಳಿಸಿ ಮಾತನಾಡುವುದರಿಂದ ದೊಡ್ಡವರಾಗುವುದಿಲ್ಲ. ನೆರೆದಿದ್ದ ಕಾರ್ಯಕರ್ತರು ಕೇಕೇ ಹಾಕಬಹುದು, ಆದರೆ ಅವೆಲ್ಲಾ ಮತಗಳಾಗುವುದಿಲ್ಲ ಎಂದು ಬಿಜೆಪಿ ಮಹಿಳಾ ನಾಯಕಿ ಪ್ರಮೀಳಾ ನೇಸರ್ಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಬ್ರಾಹಿಂ ಒಬ್ಬ ಕೀಳು ಭಾಷೆ ಬಳಕೆ ಮಾಡುವ ಹೊಲಸು ನಾಲಿಗೆ ಮನುಷ್ಯ. ಅವರನ್ನು ನಾನು ಮನುಷ್ಯನೆಂದೇ ಪರಿಗಣಿಸುವುದಿಲ್ಲ. ಅವರು ತಮ್ಮ ಮಗ ಹಾಗೂ ಸೊಸೆಯೊಂದಿಗೆ ಹೇಗೆ ನಡೆದುಕೊಂಡಿದ್ದಾರೆ ಎನ್ನುವುದನ್ನು ಹಾಗೂ ಜೈಲಿನಲ್ಲಿ ಕಳೆದ ದಿನಗಳ ಸಂದರ್ಭದಲ್ಲಿ ಅಲ್ಲಿನ ಇನ್ನಿತರ ವಿಚಾರಣಾಧೀನ ಖೈದಿಗಳು ಇವರ ಕುರಿತು ಹಿರಿಯ ಅಧಿಕಾರಿಗಳಿಗೆ ಏನು ದೂರು ನೀಡಿದ್ದರು ಎನ್ನುವ ಬಗ್ಗೆ ಅವರೇ ಮನನ ಮಾಡಿಕೊಂಡು ಇನ್ನೊಬ್ಬರ ಬಗ್ಗೆ ಮಾತನಾಡಲಿ, ಕೇವಲ ಹೀಯಾಳಿಸಿ, ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ ಎಂದರು. ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಸಿ.ಎಸ್. ಮುತ್ತಿನಪೆಂಡಿಮಠ, ಎಸ್.ವಿ. ಸಂಕನೂರ, ಎಂ.ಎಂ. ಹಿರೇಮಠ ಸುದ್ದಿಗೋಷ್ಠಿಯಲ್ಲಿದ್ದರು.