ಮತದಾನ ಬಹಿಷ್ಕಾರ ಹಿಂಪಡೆದ ಗ್ರಾಮಸ್ಥರು
ಹಾವೇರಿ: ರಾಣಿಬೆನ್ನೂರು ತಾಲೂಕಿನ ಮುಷ್ಠೂರು ಗ್ರಾಮದ ನಾಗರಿಕರು ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ತೆರಳಿದ ಅಧಿಕಾರಿಗಳ ತಂಡ, ಸ್ಥಳೀಯರೊಂದಿಗೆ ಸಂವಾದ ನಡೆಸಿ ಬಹಿಷ್ಕಾರ ಹಿಂತೆಗೆದುಕೊಳ್ಳುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.
ಇಲ್ಲಿನ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ಜಿಲ್ಲಾಧಿಕಾರಿಗೆ ಪತ್ರ ನೀಡಿದ್ದರು. ಇಲ್ಲದಿದ್ದರೆ ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ ಮಂಜುನಾಥ ನಾಯಕ ಅವರು ಮುಷ್ಠೂರು ಗ್ರಾಮಕ್ಕೆ ತೆರಳಿ ಜನರೊಂದಿಗೆ ಸಂವಾದ ನಡೆಸಿ ಸಮಸ್ಯೆ ಬಗೆಹರಿಸುವಂತೆ ಸ್ವೀಪ್ ಸಮಿತಿ ಅಧ್ಯಕ್ಷ ಕೆ.ಬಿ. ಅಂಜನಪ್ಪ ಮತ್ತು ರಾಣಿಬೆನ್ನೂರು ತಹಸೀಲ್ದಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದ್ದರು. ಏ. 15ರಂದು ಸಂಜೆ 6 ಗಂಟೆಗೆ ಮುಷ್ಠೂರಿಗೆ ತೆರಳಿದ ಅಧಿಕಾರಿಗಳ ತಂಡ ಸಾರ್ವಜನಿಕರೊಂದಿಗೆ ಬಹಿರಂಗ ಸಂವಾದ ನಡೆಸಿತು.
ಮುಷ್ಠೂರು ಗ್ರಾಮದ ನಾಗರಿಕರ ಪರವಾಗಿ ರವಿಂದ್ರಗೌಡ ಪಾಟೀಲ, ಗ್ರಾಮದ ಸ್ಥಳಾಂತರ, ನಿವೇಶನ ಹಾಗೂ ರಸ್ತೆ ಸಮಸ್ಯೆ, ಹಕ್ಕು ಪತ್ರ ವಿತರಣೆ, ನೀರು, ವಿದ್ಯುತ್ ಸೇರಿದಂತೆ 11 ಸಮಸ್ಯೆಗಳನ್ನು ಅಧಿಕಾರಿಗಳ ಎದುರು ಮಂಡಿಸಿದರು. ಸಮಸ್ಯೆ ಇತ್ಯರ್ಥಕ್ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ. ಆಂಜನಪ್ಪ ಭರವಸೆ ನೀಡಿದರು. ತಹಸೀಲ್ದಾರ್ ಹನುಮಂತಪ್ಪ ಬಡದಾಳೆ ಹಾಗೂ ತಾಪಂ ಇಒ ಕೃಷ್ಣಮೂರ್ತಿ ಮತ ಚಲಾಯಿಸಬೇಕೆಂದು ಮನವಿ ಮಾಡಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ. ಐ.ಎ. ಲೋಕಾಪುರ ಮಾತನಾಡಿದರು. ನಾವೆಲ್ಲರೂ ಮತದಾನದ ಬಹಿಷ್ಕಾರವನ್ನು ಹಿಂದಕ್ಕೆ ಪಡೆದು ಮತ ತಪ್ಪದೇ ಚಲಾಯಿಸುತ್ತೇವೆಂದು ಗ್ರಾಮಸ್ಥರು ಘೋಷಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಕೆ.ಎಚ್. ವಿಜಯಕುಮಾರ್, ವಾರ್ತಾಧಿಕಾರಿ ಎಂ. ಜುಂಜಣ್ಣ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.