ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಆಡಳಿತ ವಿರೋಧಿ ಅಲೆ: ಹೆಚ್ಚು ಮತದಾನ

Lingaraj Badiger
Updated On : 19 Apr 2014, 11:34 am

ಹಾನಗಲ್ಲ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪರ ಹಾಗೂ ಕೇಂದ್ರ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವಿರೋಧಿ ಅಲೆಯಿಂದಾಗಿ ಹಾವೇರಿ ಲೋಕಸಭಾ ಕ್ಷೇತ್ರದಾದ್ಯಂತ ಶೇ. 10ರಷ್ಟು ಹೆಚ್ಚು ಮತದಾನವಾಗಿದ್ದು, ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ವಿಶ್ವಾಸ ವ್ಯಕ್ತಪಡಿಸಿದರು.
ಹಾನಗಲ್ಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಶೇ. 63.59 ರಷ್ಟಾಗಿದ್ದ ಮತದಾನ ಈ ಬಾರಿ ಶೇ 71.66 ರಷ್ಟಾಗಿದೆ. ಮತದಾನ ಹೆಚ್ಚಳಕ್ಕೆ ನನ್ನ ಪ್ರಕಾರ ಇದನ್ನು ಮೋದಿ ಅಲೆ ಎಂದು ವಿಶ್ಲೇಷಿಸುತ್ತೇನೆ ಎಂದರು. 10 ವರ್ಷ ಅವಧಿಯ ಯುಪಿಎ ಸರ್ಕಾರದ ವಿಫಲ, ದುರಾಡಳಿತ ನೀಡಿದ ಕಾಂಗ್ರೆಸ್ ಸರ್ಕಾರದ ವಿರೋಧಿ ಅಲೆ ಯುವ ಜನತೆಯನ್ನು ಕೆರಳಿಸಿದೆ.
ಹಾವೇರಿಯಲ್ಲಿ ಇತ್ತೀಚೆಗೆ ಜರುಗಿದ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ನೆರೆದ ಅಪಾರ ಜನಸ್ತೋಮವೇ ಸಾಕ್ಷಿಯಾಗಿದೆ.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಲಿದೆ ಎಂದು ತಿಳಿಸಿದರು. ಲೋಕಸಭಾ ಚುನಾವಣೆಗೆ ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯಗಳಿಗೆ ಪ್ರಚಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದು, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ. ತಮ್ಮ ಚುನಾವಣೆಯಲ್ಲಿ ಮತ ನೀಡಿ ಬೆಂಬಲಿಸಿದ ಮತದಾರರಿಗೆ, ಮುಖಂಡರಿಗೆ, ಕಾರ್ಯಕರ್ತರಿಗೆ, ನಮೋ ಬ್ರಿಗೇಡ್ ಸದಸ್ಯರಿಗೆ, ಪರೋಕ್ಷವಾಗಿ ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಮಾಜಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ಕಳೆದ ಚುನಾವಣೆಯಲ್ಲಿ 8,71,682 ಮತದಾನವಾಗಿತ್ತು. ಈ ಬಾರಿ 11,15,328 ಮತದಾನವಾಗಿದೆ. 2,43,646 ಹೆಚ್ಚು ಮತದಾರರು ಮತದಾನ ಮಾಡಿದ್ದಾರೆ. ಯುವ ಮತದಾರರು ರಾಷ್ಟ್ರಮಟ್ಟದಲ್ಲಿ ಬದಲಾವಣೆ ಬಯಸಿದ್ದರ ಪರಿಣಾಮ ಹೆಚ್ಚು ಮತದಾನಕ್ಕೆ ಕಾರಣವಾಗಿದೆ. ಯುವ ಮತದಾರರು ದೇಶಾದ್ಯಂತ ನರೇಂದ್ರ ಮೋದಿ ಪರ ಒಲವು ತೋರಿದ್ದಾರೆ ಎಂದರು. ಅತಿ ಹೆಚ್ಚು ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಪದ್ಮನಾಭ ಕುಂದಾಪುರ, ಎಪಿಎಂಸಿ ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ, ಸದಸ್ಯ ರಾಜಣ್ಣ ಪಟ್ಟಣದ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement