ಹಾವೇರಿ: ರಭಸದ ಮಳೆ, ಗಾಳಿಗೆ ಹಾರಿದ ಛಾವಣಿ
ಹಾವೇರಿ: ಕಳೆದ ಮಂಗಳವಾರ ನಗರದಲ್ಲಿ ಸುರಿದ ಭಾರಿ ಮಳೆ, ಗಾಳಿಗೆ ಗುತ್ತಲ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತಕ್ಕೆ ಸೇರಿದ ಗೋದಾಮಿನ ಸುಮಾರು 250ಕ್ಕೂ ಅಧಿಕ ತಗಡುಗಳು ಹಾರಿಹೋಗಿ ಲಕ್ಷಾಂತರ ಮೌಲ್ಯ ಹಾನಿಯಾಗಿದೆ.
ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ ಸಂಬಂಧಿಸಿದ ಗೋದಾಮು ಸೋರುತ್ತಿದ್ದರಿಂದ ಇದಕ್ಕೆ ತಗಡಿನ ಮೇಲ್ಚಾವಣೆ ನಿರ್ಮಿಸಲಾಗಿತ್ತು. ಆದರೆ, ಗಾಳಿ ಮಳೆ ಸಂದರ್ಭದಲ್ಲಿ ಈ ತಗಡುಗಳು ಹಾರಿಹೋಗಿವೆ. ಕಳೆದ ಕೆಲ ವರ್ಷಗಳಿಂದ ಗೋದಾಮು ಸೋರುತ್ತಿತ್ತು. ಈ ಹಿನ್ನೆಲೆಯಲ್ಲಿ ಗೋದಾಮಿಗೆ 250 ಅಡಿ ಉದ್ದ ಮತ್ತು 80 ಅಡಿ ಅಗಲದ ತಗಡಿನ ಮೇಲ್ಚಾವಣಿ ನಿರ್ಮಾಣ ಮಾಡಲಾಗಿತ್ತು. ತಗಡಿನ ಜತೆಗೆ ಅದಕ್ಕೆ ಹಾಕಿದ ಕಬ್ಬಿಣ ಮತ್ತು ಸಿಮೆಂಟಿನ ಪಿಲ್ಲರ್ಗಳು ಸಹ ಕುಸಿದು ಬಿದ್ದಿದ್ದು, ಸುಮಾರು ರು. 8 ಲಕ್ಷ ಹಾನಿ ಸಂಭವಿಸಿದೆ ಎನ್ನಲಾಗಿದೆ. ಗಾಳಿಯ ರಭಸಕ್ಕೆ ತಗಡುಗಳು ಹಾವೇರಿ ಮತ್ತು ಹೊಸಪೇಟಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ರಸ್ತೆ ಸಂಚಾರಕ್ಕೆ ಕೆಲಕಾಲ ವ್ಯತ್ಯಯ ಉಂಟಾಗಿತ್ತು. ನಂತರ ಸ್ಥಳೀಯರು ತಗಡು ತೆಗೆದು ಸಂಚಾರಕ್ಕೆ ಅನುವು ಮಾಡಿದರು.