20 ನಿಮಿಷ 20 ಸುದ್ದಿ
ಎಟಿಎಂ ಸ್ಥಗಿತ: ಗ್ರಾಹಕರ ಪರದಾಟ
ಹಿರೇಕೆರೂರು: ತಾಲೂಕಿನ ಹೋಬಳಿ ಕೇಂದ್ರವಾದ ರಟ್ಟಿಹಳ್ಳಿಯ ಸ್ಟೇಟ್ ಬ್ಯಾಂಕ್ ಎಟಿಎಂ ಕೇಂದ್ರ ಕಳೆದ ನಾಲ್ಕು ದಿನಗಳಿಂದ ಸ್ಥಗಿತಗೊಂಡಿದ್ದರಿಂದ ಗ್ರಾಹಕರು ಪರದಾಡುವಂತಾಗಿದೆ. ಏ. 16ರಿಂದ ಎಟಿಎಂ ಕಾರ್ಯ ಸ್ಥಗಿತಗೊಳಿಸಿದೆ. ಏ. 17ರಂದು ಚುನಾವಣಾ ನಿಮಿತ್ತ ರಜೆ, ಏ. 18ಗುಡ್ಪ್ರೈಡೇ ನಿಮಿತ್ತ ಬ್ಯಾಂಕ್ ರಜೆ ದಿನವಾಗಿದ್ದರಿಂದ ಕೆಲಸ ಮಾಡಿಲ್ಲ. ಶನಿವಾರ ಹಣ ಪಡೆಯಲು ಬ್ಯಾಂಕ್ನಲ್ಲಿ ಭಾರಿ ಜನದಟ್ಟಣೆ ಒಂದೆಡೆಯಾದರೆ, ಎಟಿಎಂ ಸಹ ಬಂದಾಗಿದೆ. ಈ ಕುರಿತು ಬ್ಯಾಂಕ್ನ ವ್ಯವಸ್ಥಾಪಕರನ್ನು ಸಂಪರ್ಕಿಸಿದರೆ ಕಳೆದ ನಾಲ್ಕು ದಿನಗಳ ಹಿಂದೆ ಹಣ ಹಾಕಿದ್ದೆವು. ಆದರೆ, ಆ ದಿನದಿಂದಲೇ ತಾಂತ್ರಿಕ ದೋಷದಿಂದಾಗಿ ಎಟಿಎಂ ಕೇಂದ್ರ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಬಾಗಿಲು ಹಾಕಿದ್ದಾಗಿ ತಿಳಿಸಿದರು. ಬ್ಯಾಂಕ್ನವರು ತಕ್ಷಣ ಎಟಿಎಂ ಯಂತ್ರ ದುರಸ್ತಿಗೊಳಿಸಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕೆಂದು ಗ್ರಾಹಕರು ಮನವಿ ಮಾಡಿದರು.
25ರಂದು ಗಾಡಾ ಓಡಿಸುವ ಸ್ಪರ್ಧೆ
ಬ್ಯಾಡಗಿ: ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಶಹರ ಘಟಕದ ಆಶ್ರಯದಲ್ಲಿ ರಾಜ್ಯಮಟ್ಟದ ಗಾಡಾ ಓಡಿಸುವ ಸ್ಪರ್ಧೆ ಏ. 25ರಂದು ನಡೆಯಲಿದೆ. ವಿಜೇತ ಜೋಡಿಗೆ ಒಂದು ಹೀರೋ ಬೈಕ್, ದ್ವಿತೀಯ 10 ಗ್ರಾಂ ಚಿನ್ನ ಹಾಗೂ ತೃತೀಯ 5 ಗ್ರಾಂ ಚಿನ್ನ, ಚತುರ್ಥ 10 ತೊಲೆ ಬೆಳ್ಳಿ ಸೇರಿದಂತೆ ಒಟ್ಟು 25 ಬಹುಮಾನಗಳಿರುತ್ತವೆ. ಸ್ಪರ್ಧೆಗಳು ಕದರಮಂಡಲಗಿ ರಸ್ತೆಯ ಜಿ.ಎಸ್. ಛತ್ರದ ಇವರ ಜಮೀನಿನಲ್ಲಿ ಜರುಗಲಿದ್ದು, ಹೆಚ್ಚಿನ ವಿವರಗಳಿಗಾಗಿ ಮಲಕಪ್ಪ ಹಾದರಗೇರಿ ಮೊ: 99802 00756, 99018 75401 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಾಳೆ ವಿದ್ಯುತ್ ವ್ಯತ್ಯಯ: ಸಹಕರಿಸಲು ಕೋರಿಕೆ
ಹಾವೇರಿ: ತಾಲೂಕಿನ ಗುತ್ತಲದ 110 ಕೆವಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಏ. 21ರಂದು ಈ ಕೇಂದ್ರದಿಂದ ಹೊರ ಹೋಗುವ ಹೊಸರಿತ್ತಿ, ನೀರಲಗಿ ಹಾಗೂ ಮೈಲಾರ ವಿದ್ಯುತ್ ವಿತರಣಾ ಕೇಂದ್ರ ಹಾಗೂ ಗುತ್ತಲದಿಂದ ಹೊರಡುವ ಎಲ್ಲ ಫೀಡರ್ಗಳಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗುವುದು. 33 ಕೆವಿ ಹೊಸರಿತ್ತಿ, ನೀರಲಗಿ, ಮೈಲಾರ, ಗುತ್ತಲ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಗುತ್ತಲ ಪಟ್ಟಣ, ಹಾವೇರಿ ಹಾಗೂ ಲಕ್ಷ್ಮೇಶ್ವರ ನೀರು ಸರಬರಾಜು ಸ್ಥಾವರಗಳಿಗೆ ಹಾಗೂ ಸದರಿ ಎಲ್ಲ ಫೀಡರ್ಗಳಿಂದ ವಿದ್ಯುತ್ ಪೂರೈಕೆಯಾಗುವ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ವಿದ್ಯುತ್ ಮಾರ್ಗಗಳಿಂದ ವಿದ್ಯುತ್ ಪೂರೈಕೆ ಪಡೆಯುತ್ತಿರುವ ಎಲ್ಲ ಗ್ರಾಮಗಳ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಹಾವೇರಿ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ವೈ. ಪ್ರಶಾಂತ ವಿನಂತಿಸಿದ್ದಾರೆ.
ಮೇ 2ರಂದು ಬಸವಗೋಷ್ಠಿ, ಸಾಮೂಹಿಕ ವಿವಾಹ
ಬ್ಯಾಡಗಿ: ಬಸವೇಶ್ವರ ಜಯಂತಿ ಅಂಗವಾಗಿ ತಾಲೂಕಿನ ಬಿಸಲಹಳ್ಳಿ ಗ್ರಾಮದ ಶ್ರೀ ಹೊಳಿ ಬಸವೇಶ್ವರ ಮಠದ ಆಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಬಸವಗೋಷ್ಠಿ ಕಾರ್ಯಕ್ರಮಗಳು ಮೇ 2ರಂದು ನಡೆಯಲಿವೆ. ಈ ಕುರಿತು ತಿಳಿಸಿರುವ ಸಮಿತಿಯು, ಸಾಮೂಹಿಕ ವಿವಾಹದಲ್ಲಿ ಮದುವೆ ಆಗಬಯಸುವವರಿಗೆ ಅಗತ್ಯವಾದ ಸಲಕರಣೆಗಳನ್ನು ಸಮಿತಿ ಒದಗಿಸಲಿದ್ದು, ಕ್ರಮವಾಗಿ 18 ಮತ್ತು 21 ವಯಸ್ಸು ದಾಟಿದ ಆಸಕ್ತ ವಧು-ವರರು (ಅಗತ್ಯ ವಯಸ್ಸಿನ ದಾಖಲೆಗಳನ್ನು ಸಲ್ಲಿಸತಕ್ಕದ್ದು) ಏ. 25 ರೊಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು. ಸಾನ್ನಿಧ್ಯವನ್ನು ಹರಿಹರದ ಪಂಚಮಸಾಲಿ ಪೀಠದ ಜಗದ್ಗುರು ಸಿದ್ಧಲಿಂಗಶ್ರೀಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ಸ್ಥಳೀಯ ಮಠದ ರೇವಣಸಿದ್ದೇಶ್ವರಶ್ರೀಗಳು ವಹಿಸಲಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ರೇವಣಸಿದ್ಧೇಶ್ವರಶ್ರೀಗಳು-9164533730 ಅಥವಾ ಶೇಖರಗೌಡ ಗೌಡ್ರ-9972440185 ಇವರನ್ನು ಸಂಪರ್ಕಿಸಬಹುದಾಗಿದೆ.
ಮತದಾರರಿಗೆ ಸಚಿವ ದೇಶಪಾಂಡೆ ಕೃತಜ್ಞತೆ
ಕಾರವಾರ: ಹೆಚ್ಚಿನ ಪ್ರಮಾಣದಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಶಾಂತಿಯುತವಾಗಿ ಮತದಾನ ನೆರವೇರಲು ಸಹಕರಿಸಿದ ರಾಜ್ಯದ ಎಲ್ಲ ಮತದಾರರಿಗೂ ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಧನ್ಯವಾದ ಹೇಳಿದ್ದಾರೆ.
ರಾಜ್ಯದಲ್ಲಿ ಎಲ್ಲಿಯೂ ಗಲಾಟೆ ಹಾಗೂ ಹಿಂಸಾಚಾರಕ್ಕೆ ಅವಕಾಶ ನೀಡದೆ ದೇಶಕ್ಕೆ ಮಾದರಿಯಾಗುವಂತೆ ಮತದಾನ ಮಾಡಿದ ಜನತೆಗೆ, ಚುನಾವಣಾ ಪ್ರಕ್ರಿಯೆಗೆ ಸೂಕ್ತ ರೀತಿಯ ಸ್ಪಂದಿಸಿದ ರಾಜಕೀಯ ಪಕ್ಷಗಳಿಗೆ, ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿದ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳಿಗೆ, ಕಾನೂನು ಸುರಕ್ಷತೆ ಕಾಪಾಡಿದ ಪೊಲೀಸ್ ಇಲಾಖೆಗೆ ಅವರು ಕೃತಜ್ಞತೆ ಅರ್ಪಿಸಿದ್ದಾರೆಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಅರಣ್ಯ ಇಲಾಖೆ ದಾಳಿ: ಸಾಗವಾನಿ ತುಂಡುಗಳ ವಶ
ಕುಮಟಾ: ಇಲ್ಲಿಯ ಕತಗಾಲ ವಲಯ ಅರಣ್ಯ ವಾಪ್ತಿಯ ಕೋಡಂಬಳ್ಳಿಯಲ್ಲಿ ಓಮಿನಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿರುವ ಸಾಗವಾನಿ ತುಂಡುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಶನಿವಾರ ವಶಪಡೆಸಿಕೊಂಡಿದ್ದಾರೆ. ಬೆಳಗಿನ ಜಾವ ಸಾಗವಾನಿ ನೆಡುತೋಪದಲ್ಲಿ ಸುಮಾರು 25,000 ಮೌಲ್ಯದ ಮರಗಳ ತುಂಡುಗಳನ್ನು ಮಾರುತಿ ಓಮಿನಿ ಸಂಖ್ಯೆ ಕೆಎ-31 ಎ-5716 ರಲ್ಲಿ ಸಾಗಿಸಲು ಪ್ರಯತ್ನಿಸುತ್ತಿದ್ದ ಶಿರಸಿ ಉಪಳೇಕೊಪ್ಪದ ವಿಘ್ನೇಶ್ವರ ಗೋವಿಂದ ನಾಯ್ಕ ಹಾಗೂ ಕರಿಯಾ ರಾಮಾ ಛಲವಾದಿಯನ್ನು ಗುನ್ನೆ ಮಾಲು ಸಹಿತ ವಶಪಡಿಸಿಕೊಳ್ಳಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ರಮೇಶ್, ಕುಮಟಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್.ಟಿ. ಹೆಗಡೆ, ಕತಗಾಲ ವಲಯ ಅರಣ್ಯಾಧಿಕಾರಿ ಸುರೇಶ್ ತೇಲಿ ಮಾರ್ಗದರ್ಶನದಲ್ಲಿ ಕತಗಾಲ ವಲಯ ಶಿಡ್ಡಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಪಿ.ಟಿ. ಅಗೇರ್, ಸಿಬ್ಬಂದಿ ವಾಹನ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.
ಅರೇಅಂಗಡಿ: ಇಂದು 'ಚಿಗುರು-ಬೇರು'
ಹೊನ್ನಾವರ: ಶ್ರೀ ಕರಿಕಾನ ಪರಮೇಶ್ವರಿ ಮ್ಯೂಸಿಕ್ ಟ್ರಸ್ಟ್ನ 13ನೇ ವಾರ್ಷಿಕೋತ್ಸವ ಹಾಗೂ ಕಲಭಾಗ ಗೋವಿಂದ ಹೆಗಡೆ ಸಂಸ್ಮರಣೆ ಚಿಗುರು-ಬೇರು, ಗಾನ-ರಸ ಏ. 20ರಂದು ಮಧ್ಯಾಹ್ನ 3 ಗಂಟೆಗೆ ತಾಲೂಕಿನ ಅರೇಅಂಗಡಿಯ ಎಸ್ಕೆಪಿ ಜ್ಯೂನಿಯರ್ ಕಾಲೇಜಿನಲ್ಲಿ ನಡೆಯಲಿದೆ. ಮಧ್ಯಾಹ್ನ 3.30ರಿಂದ ಎಸ್ಕೆಪಿ ಮ್ಯೂಸಿಕ್ ಟ್ರಸ್ಟ್ ವಿದ್ಯಾರ್ಥಿಗಳಿಂದ ಗಾಯನ-ವಾದನ ಹಾಗೂ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ನಿವೃತ್ತ ಪ್ರಾಚಾರ್ಯ ಎ.ಎಸ್. ಮೇಸ್ತ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಎಸ್.ಜಿ. ಖೈರನ್ ಪಾಲ್ಗೊಳ್ಳಲಿದ್ದಾರೆ. ಗದಗ ತರುವಾಯ ಕಿರಣ ಹಾನಗಲ್ಲ ಅವರಿಂದ ಗಾಯನ ನಡೆಯಲಿದ್ದು, ಗೋಪಾಲಕೃಷ್ಣ ಹೆಗಡೆ ಕಲಭಾಗ ತಬಲಾ ಸಾಥ್ ಹಾಗೂ ಗೌರೀಶ ಯಾಜಿ ಕೂಜಳ್ಳಿ ಸಂವಾದಿನಿ ಸಾಥ್ ನೀಡಲಿದ್ದಾರೆ.
ಇಂದು ಬಾಲೆಹೊಸೂರು ದಿಂಗಾಲೇಶ್ವರ ಮಠದ ಜಾತ್ರೆ
ಲಕ್ಷ್ಮೇಶ್ವರ: ಸಮೀಪದ ಬಾಲೆಹೊಸೂರು ದಿಂಗಾಲೇಶ್ವರ ಮಠದ ಜಾತ್ರಾ ಮಹೋತ್ಸವ ನಿಮಿತ್ತ ಏ. 20ರ ಸಂಜೆ 5ಕ್ಕೆ ರಥೋತ್ಸವ ಜರುಗಲಿದೆ. ಜಾತ್ರೆಗಾಗಿ ಬೃಹತ್ ಪ್ರಮಾಣದ ದಾಸೋಹ ಮನೆ ಸಿದ್ಧವಾಗಿದೆ. ಮೇ 23, 24, 25ರಂದು ಮಠದ ನೂತನ ಕಟ್ಟಡಗಳ ಲೋಕಾರ್ಪಣೆ ನೆರವೇರಲಿದೆ. ಏ. 20ರಿಂದ ಒಂದು ತಿಂಗಳು ಶರಣ ಚರಿತಾಮೃತ ಪ್ರವಚನ ನಿತ್ಯ ಸಂಜೆ 6ರಿಂದ ಜಮಖಂಡಿ ಓಲೇಮಠದ ಡಾ. ಚನ್ನಬಸವ ಶ್ರೀಗಳಿಂದ ನಡೆಯಲಿದೆ. ಏ. 20ರಂದು ಮಹಾನುಭಾವ ಮಾದರ ಚನ್ನಯ್ಯ ಕುರಿತು ಪ್ರವಚನ ಜರುಗಲಿದೆ. ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಶ್ರೀ ಸಾನ್ನಿಧ್ಯ ವಹಿಸುವರು. ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀ ಅಧ್ಯಕ್ಷತೆ ವಹಿಸುವರು. ಮಾನಿಹಳ್ಳಿ ಪುರವರ್ಗಮಠದ ಮಳೆಯೋಗೀಶ್ವರ ಶಿವಾಚಾರ್ಯ ಶ್ರೀ ನೇತೃತ್ವ ವಹಿಸುವರು.
ಕಾರವಾರ: 24ರಂದುರಕ್ತದಾನ ಶಿಬಿರ
ಕಾರವಾರ: ಮಾನವ ಏಕತಾ ದಿವಸದ ಅಂಗವಾಗಿ ಏ. 24 ರಂದು ಸಂತ ನಿರಂಕಾರಿ ಮಂಡಳಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ನಂದನಗದ್ದಾದ ತೇಲಂಗ ರಸ್ತೆಯ ಗಣಪತಿ ದೇವಸ್ಥಾನದ ಹತ್ತಿರ ಸಂತ ನಿರಂಕಾರಿ ಸತ್ಸಂಗ ಭವನದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಶಿಬಿರದ ಯಶಸ್ವಿಗಾಗಿ ಸಂತ ನಿರಂಕಾರಿ ಮಂಡಳಿಯಿಂದ ಸಂತ ನಿರಂಕಾರಿ ಸತ್ಸಂಗ ಭವನದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರವಾರದ ಭಾರತೀಯ ರೆಡ್ ಕ್ರಾಸ್ನ ಸದಸ್ಯೆ ಫೈರೋಜಾ ಬೇಗಂ ಎನ್. ಶೇಖ್ ರಕ್ತದಾನದ ಮಹತ್ವ ಹಾಗೂ ಅದರ ಪ್ರಯೋಜನದ ಕುರಿತು ಉಪನ್ಯಾಸ ನೀಡಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವೈಸ್ಚೇರ್ಮನ್ ನಜೀರ್ ಅಹಮದ್ ಯು. ಶೇಖ್ ಉಪಸ್ಥಿತರಿದ್ದರು. ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಚಾಲಕ ಮನೋಜ ಕೆಳಸ್ಕರ್ 9880578107 ಸಂಪರ್ಕಿಸಬಹುದು.
24ರಂದು ಗಣಪತಿ ದೇವಸ್ಥಾನ ಪ್ರತಿಷ್ಠಾಪನಾ ಕಾರ್ಯಕ್ರಮ
ಯಲ್ಲಾಪುರ: ಪಟ್ಟಣದ ರವೀಂದ್ರನಗರದಲ್ಲಿ ಎಪಿಎಂಸಿ ಎದುರಿನ ವಿಶಾಲ ಪರಿಸರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಶಕ್ತಿಗಣಪತಿ ದೇವಸ್ಥಾನದ ಪ್ರತಿಷ್ಠಾನ ಮಹೋತ್ಸವ ಏ. 24ರಿಂದ 27ರ ವರೆಗೆ ನಡೆಯಲಿದೆ. ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶ್ರೀ ಶಂಕರ ಪರಮೇಶ್ವರ ಭಟ್ಟ ಕಟ್ಟೆ ಹಾಗೂ ಕೃಷ್ಣ ಭಟ್ಟ ಗಿಡಗಾರಿ ಆಚಾರ್ಯತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಏ. 25, 26ರಂದು ಧಾರ್ಣಿಕ ಕಾರ್ಯಕ್ರಮಗಳು ಮುನ್ನಡೆಯಲಿದ್ದು, ಏ. 27ರಂದು ಮುಂಜಾನೆ ಸ್ವರ್ಣವಲ್ಲಿ ಶ್ರೀಗಳಿಂದ ಬ್ರಹ್ಮ ಕಲಾಭಿಷೇಕ ಜರುಗಲಿದ್ದು, ಧ್ವಜಾವರೋಹಣ, ಶ್ರೀಗುರು ಪಾದಪೂಜಾ, ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ಮುಂತಾದವು ನಡೆಯಲಿವೆ. ಅಪರಾಹ್ನ 4ಕ್ಕೆ ಶ್ರೀಗಳ ಆಶೀರ್ವಚನ ನಡೆಯಲಿದೆ. ರಾತ್ರಿ 9ಕ್ಕೆ ಖ್ಯಾತ ಕಲಾವಿದರಿಂದ ಯಕ್ಷಗಾನ ಪ್ರದರ್ಶನವಿದೆ ಎಂದು ಶ್ರೀ ಶಕ್ತಿಗಣಪತಿ ದೇವಸ್ಥಾನದ ಆಡಳಿತ ಮಂಡಳಿ, ಸ್ಪಂದನಾ ಯುವಕ ಸಂಘ, ಆದರ್ಶ ಮಹಿಳಾ ಸಂಘದ ಪ್ರಕಟಣೆ ತಿಳಿಸಿದೆ.
ಮಹಾವೀರ ಜಯಂತಿ: ದಾಸೋಹ ಸೇವಾ ಕಾರ್ಯಕ್ರಮ
ಗದಗ: ನಗರದ ಜ. ತೋಂಟದಾರ್ಯ ಮಠದ ಮುಂಭಾಗದಲ್ಲಿರುವ ವಿಮಲ್ ಟ್ರೇಡರ್ಸ್ನ ವತಿಯಿಂದ ಮಹಾವೀರ ಜಯಂತಿ ಅಂಗವಾಗಿ ಈಚೆಗೆ ಪ್ರಸಾದ ದಾಸೋಹ ಸೇವಾ ಕಾರ್ಯಕ್ರಮ ನಡೆಯಿತು. ಜ. ತೋಂಟದಾರ್ಯ ಪ್ರಸಾದ ನಿಲಯದ ಸಹಕಾರದೊಂದಿಗೆ ನಡೆದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ನಮ್ಮ ಗದಗ ಫೌಂಡೇಶನ್ ಸಂಘಟನೆ ಅಧ್ಯಕ್ಷ ಉತ್ತಮಚಂದ ಜೈನ, ಕಾರ್ಯದರ್ಶಿ ಅಶೋಕ ಕಬ್ಬಿಣದ, ಖಜಾಂಚಿ ವಿನೋದ ಪಟೇಲ್, ಮನೋಹರ ಸಾಸ್ವಿಹಳ್ಳಿ, ಸುನೀಲ ತೆಂಬದಮನಿ, ರೆಹಮಾನ್ ಅಣ್ಣಿಗೇರಿ, ಅಬ್ದುಲ್ಗಫಾರ ಗಡಾದ, ಚೆನ್ನಪ್ಪಗೌಡ ತೇಜಿಗೌಡ್ರ ಇತರರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಕಾಶ ಶಹಾ ಮಾತನಾಡಿದರು. ಈ ಸಂದರ್ಭದಲ್ಲಿ 600ಕ್ಕೂ ಅಧಿಕ ಜನರು ಪ್ರಸಾದ ಕಾರ್ಯಕ್ರಮ ಯಶಸ್ವಿಗೊಳಿಸಿದರು.
28, 29ರಂದು ಕೌನ್ಸೆಲಿಂಗ್
ಗದಗ: ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರ ರಾಣಿ ಚನ್ನಮ್ಮ, ಅಟಲ್ ಬಿಹಾರಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ಫಲಿತಾಂಶವನ್ನು ಜಿಲ್ಲೆಯ ಎಲ್ಲ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿಗಳಲ್ಲಿ ಹಾಗೂ ಶಾಲೆಗಳಲ್ಲಿ ಪ್ರಕಟಿಸಲಾಗಿದೆ. ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕ ಆಧರಿಸಿ, ಜಾತಿವಾರು, ಲಿಂಗವಾರು ಹಾಗೂ ಮೀಸಲಾತಿಗನುಗುಣವಾಗಿ ಜಿಲ್ಲೆಯ 7 ಮೊರಾರ್ಜಿ ದೇಸಾಯಿ ವಸತಿ ಶಾಲೆ 3 ಕಿತ್ತೂರು ರಾಣಿ ಚನ್ನಮ್ಮ ಹಾಗೂ 1 ವಾಜಪೇಯಿ ವಸತಿ ಶಾಲೆಗಳಿಗೆ ಒಟ್ಟು 630 ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಏ. 28 ಹಾಗೂ 29ರಂದು ಬೆಳಗ್ಗೆ 8.30 ನರಸಾಪುರ-ಬೆಟಗೇರಿಯ ಶಿವರತ್ನ ಕ್ಯಾಂಪಸ್ನಲ್ಲಿ ಕೌನ್ಸೆಲಿಂಗ್ ಜರುಗಲಿದೆ. ಅರ್ಹ ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, 5ನೇ ತರಗತಿ ಅಂಕಪಟ್ಟಿ, ಅಂಗವಿಕಲ ಪ್ರಮಾಣ ಪತ್ರ, ವಿಶೇಷ ದುರ್ಬಲ ವರ್ಗಕ್ಕೆ ಸೇರಿದ ಬಗ್ಗೆ ಪ್ರಮಾಣ ಪತ್ರಗಳ ಮೂಲ ಹಾಗೂ ಒಂದು ಸೆಟ್ ಝೆರಾಕ್ಸ್ ಪ್ರತಿಯನ್ನು ಕೌನ್ಸೆಲಿಂಗ್ಗೆ ಹಾಜರಾದ ಸಮಯದಲ್ಲಿ ಕಡ್ಡಾಯವಾಗಿ ಪರಿಶೀಲನೆಗೆ ಸಲ್ಲಿಸಬೇಕು. ಸಲ್ಲಿಸಲು ವಿಫಲರಾದಲ್ಲಿ ಅಭ್ಯರ್ಥಿತನ ಪರಿಗಣಿಸಲ್ಲ. ಕೌನ್ಸೆಲಿಂಗ್ ಪತ್ರ ತಲುಪದೇ ಇದ್ದಲ್ಲಿ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿ ಅಥವಾ ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ಪ್ರಕಟಣೆ ತಿಳಿಸಿದೆ.
ಪರಿಶ್ರಮ, ಪ್ರಾಮಾಣಿಕ ಪ್ರಯತ್ನದಿಂದ ಗುರಿ ಮುಟ್ಟಿ
ನರೇಗಲ್ಲ: ಪರಿಶ್ರಮ, ಪ್ರಾಮಾಣಿಕ ಪ್ರಯತ್ನದಿಂದ ನಿಮ್ಮ ಗುರಿ ಮುಟ್ಟಿದರೆ ನೀವು ದೇಶದ ದೊಡ್ಡ ಆಸ್ತಿಯಾಗುತ್ತೀರಿ ಎಂದು ಪ್ರಾಚಾರ್ಯ ಎಸ್.ವಿ. ಸಂಕನೂರ ಹೇಳಿದರು. ಅವರು ಈಚೆಗೆ ಸ್ಥಳೀಯ ಅನ್ನದಾನೀಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಕಾಲೇಜಿನಲ್ಲಿ ಸಾಂಘಿಕ ಹಾಗೂ ವಿವಿಧ ಚಟುವಟಿಕೆ ಸಮಾರೋಪ ಸಮಾರಂಭ ಹಾಗೂ ಅಂದಾನಗೌಡ್ರ ಪೊಲೀಸ್ ಪಾಟೀಲ ಅವರ ಪುಣ್ಯ ದಿನಾಚರಣೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿ ಚೇರ್ಮನ್ ಡಾ. ಕೆ.ಬಿ. ಧನ್ನೂರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಅಭಿನವ ಅನ್ನದಾನ ಶ್ರೀಗಳು ಆಶೀರ್ವಚನ ನೀಡಿದರು. ಡಾ. ಸೊಪ್ಪಿಹಿರೇಮಠ, ಎ.ಬಿ. ಪಾಟೀಲ, ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಎ. ಪಾಟೀಲ ಇದ್ದರು. ಪ್ರಾ. ಡಾ. ಅರವಿಂದ ಸಜ್ಜನ ಸ್ವಾಗತಿಸಿದರು. ಎಸ್.ಎಚ್. ಕುಲಕರ್ಣಿ ನಿರೂಪಿಸಿದರು.
ಬೇಸಿಗೆ ಶಿಬಿರ ಮಕ್ಕಳ ಮನೋವಿಕಾಸಕ್ಕೆ ನಾಂದಿ
ಗದಗ: ಮಕ್ಕಳ ಮನೋವಿಕಾಸ, ಜ್ಞಾನಾಭಿವೃದ್ಧಿ ಮತ್ತು ಸೃಜನಶೀಲತೆಗೆ ಬೇಸಿಗೆ ತರಬೇತಿ ಶಿಬಿರಗಳು ಸಹಕಾರಿ ಎಂದು ಡಿಡಿಪಿಐ ಬಿ.ವಿ. ರಾಜೇಂದ್ರ ಪ್ರಸಾದ ಹೇಳಿದರು. ಅವರು ಶನಿವಾರ ಇಲ್ಲಿನ ರಾಜೇಶ್ವರಿ ಕಲಾ ಕುಟೀರ ಸಹಯೋಗದಲ್ಲಿ ಬೆಟಗೇರಿ ಇನ್ನರ್ವ್ಹೀಲ್ ಕ್ಲಬ್ ಮಕ್ಕಳಿಗಾಗಿ ಏರ್ಪಡಿಸಿದ್ದ ಚಿಣ್ಣರ ಚಿಲಿಪಿಲಿ, ಉಚಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಬೇಸಿಗೆ ಬಿಡುವಿನ ವೇಳೆಯಲ್ಲಿ ಕಾಲಹರಣ ಮಾಡದೆ ಮುಂದಿನ ವರ್ಗದ ಪೂರಕ ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಾ ವರವಿ ಅಧ್ಯಕ್ಷತೆ ವಹಿಸಿದ್ದರು. ಅಕ್ಕನ ಬಳಗದ ಅಧ್ಯಕ್ಷೆ ಕಸ್ತೂರಿ ಹಿರೇಗೌಡ್ರ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಕವಿತಾ ದಂಡಿನ, ರಾಜೇಶ್ವರಿ ಕಲಾ ಕುಟೀರದ ಮುಖ್ಯಸ್ಥ ಗಜಾನನ ವೇರ್ಣೇಕರ, ಸವಿತಾ, ವಿದ್ಯಾ, ಶಾಂತಾ, ವಿಜಯಲಕ್ಷ್ಮಿ, ರೇಷ್ಮಾ, ಜಬೀನಾ ರೋಣದ, ಮಾಲಾ ಇದ್ದರು.
ಸೌಂದರ್ಯ ವರ್ಧಕ ಬಳಕೆ: ಚರ್ಮರೋಗ ಸಾಧ್ಯತೆ
ಗದಗ: ರಾಸಾಯನಿಕ ಯುಕ್ತ ಸೌಂದರ್ಯ ವರ್ಧಕಗಳ ಬಳಕೆಯಿಂದ ಸಹಜ ಮತ್ತು ನೈಜ ಸೌಂದರ್ಯಕ್ಕೆ ಧಕ್ಕೆ ಉಂಟಾಗಿ ಚರ್ಮ ವ್ಯಾದಿ ಬರುವ ಸಾಧ್ಯತೆಗಳಿವೆ. ಇಂಥ ಉತ್ಪನ್ನಗಳಿಂದ ದೂರವಿರಬೇಕೆಂದು ಚರ್ಮರೋಗ ತಜ್ಞ ಡಾ. ತುಕಾರಾಮ ಸೂರಿ ಸಲಹೆ ನೀಡಿದರು. ಶುಕ್ರವಾರ ಗದಗ ರೋಟರಿ ಐಕೇರ್ ಸೆಂಟರ್ ಬೆಟಗೇರಿ ಇನ್ನರ್ ವ್ಹೀಲ್ ಕ್ಲಬ್ ಏರ್ಪಡಿಸಿದ್ದ ಚರ್ಮರೋಗ ಉಚಿತ ತಪಾಸಣೆ ನೆರವೇರಿಸಿ ಮಾತನಾಡಿದರು. ಬಿಸಿಲು, ಮಳೆ ಮತ್ತು ಚಳಿಯಿಂದಾಗಿ ಚರ್ಮಕ್ಕೆ ಪರಿಣಾಮ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಹೆಚ್ಚಾಗಿ ನೀರು ಕುಡಿಯಬೇಕೆಂದು ಸಲಹೆ ನೀಡಿದರು. ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಾ ವರವಿ ಅಧ್ಯಕ್ಷತೆ ವಹಿಸಿದ್ದರು. ಸವಿತಾ ಪಾಟೀಲ ಪ್ರಾರ್ಥಿಸಿದರು. ಯಶೋಧರಾ ಪಾಟೀಲ ನಿರ್ವಹಿಸಿದರು. ಸುಲೋಚನಾ ಐಹೋಳಿ ವಂದಿಸಿದರು.