ಭ್ರಷ್ಟಾಚಾರ ನಿರ್ಮೂಲನೆಗೆ ಕಾನೂನು ಜ್ಞಾನ ಅವಶ್ಯ
ರೋಣ: ಸಮಾಜದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಪ್ರತಿಯೊಬ್ಬರಿಗೂ ಕಾನೂನು ಜ್ಞಾನ ಅವಶ್ಯವಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಜಿ.ಡಿ. ಮಹಾವರಕರ ಹೇಳಿದರು.
ಅವರು ಈಚೆಗೆ ತಾಲೂಕಿನ ಸವಡಿ ಗ್ರಾಮದ ಗ್ರಾಮದೇವತೆ ಸಭಾಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಮತ್ತು ಜನಜಾಗೃತಿ ವೇದಿಕೆ ಇವರ ಆಶ್ರಯದಲ್ಲಿ ಜರುಗಿದ ಸಾರ್ವಜನಿಕರಿಗಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರಿಯಾದ ಕಾನೂನು ತಿಳಿವಳಿಕೆ ಕೊರತೆಯಿಂದ ಇತ್ತಿಚಿನ ದಿನಗಳಲ್ಲಿ ಅಪರಾಧ ಕೃತ್ಯ ಹೆಚ್ಚುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದ ಯೋಜನೆಗಳು ಜನತೆಗೆ ಸಮರ್ಪಕವಾಗಿ ತಲುಪುವಲ್ಲಿ ವಿಳಂಭವಾಗುತ್ತಿವೆ. ಇದಕ್ಕೆ ಜನತೆಯಲ್ಲಿ ಯೋಜನೆಗಳ ಕುರಿತು ಮಾಹಿತಿ ಇರಲಾರದು. ಆದ್ದರಿಂದ ಜನತೆ ಮೊದಲು ಜಾಗೃತರಾಗಿ, ಕಾನೂನು ಅರಿವು ಹೊಂದಬೇಕು. ಇದರಿಂದ ಯಾವ ಯೋಜನೆಗಳು ಯಾರಿಗೆ ತಲುಪಬೇಕು ಎಂಬುದರ ಬಗ್ಗೆ ತಿಳಿಯುತ್ತದೆ. ಅಲ್ಲದೆ ಸಮಾಜದಲ್ಲಿ ಯಾವದೇ ರೀತಿಯ ಅಹಿತಕರ ಘಟನೆ ಜರುಗದಂತೆ ಕಾನೂನು ಎಚ್ಚರಿಸುತ್ತದೆ. ಪ್ರತಿಯೊಬ್ಬರೂ ಕಾನೂನು ಜ್ಞಾನ ಹೊಂದಬೇಕು ಎಂಬ ಉದ್ದೇಶದಿಂದ ಕಾನೂನು ಪ್ರಾಧಿಕಾರಿ ಉಚಿತವಾಗಿ ಸಲಹೆ ನೀಡುತ್ತಿದೆ. ಅದರ ಪ್ರಯೋಜನ ಜನತೆ ಪಡೆದುಕೊಳ್ಳಬೇಕು ಎಂದರು. ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಂ. ನಂಜೇಗೌಡ ಮಾತನಾಡಿ, ಸಾಮಾನ್ಯ ಜನತೆಗೆ ಕಾನೂನು ಅರಿವು ಮತ್ತು ನೆರವು ದೊರಕಿಸುವ ಉದ್ದೇಶವನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಜನತಾ ನ್ಯಾಯಾಲಯದ ಮೂಲಕ ಪ್ರಕರಣಗಳು ಇದ್ದಲ್ಲಿಗೆ ಹೋಗಿ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಜನರು ಜಾಗೃತರಾಗಿ ಕಾನೂನು ಕುರಿತು ತಿಳಿವಳಿಕೆ ಅಗತ್ಯ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವಾಗಲು ಎಲ್ಲರೂ ನ್ಯಾಯ ಸಮ್ಮತವಾಗಿ ನಡೆದುಕೊಳ್ಳಬೇಕು ಎಂದರು. ಜನಜಾಗೃತಿ ವೇದಿಕೆ ಅಧ್ಯಕ್ಷ ಸಂಗಮೇಶ ಜೋಗರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ರಾಜ್ ಕಾಯ್ದೆ ಕುರಿತು ನ್ಯಾಯವಾದಿ ಆರ್.ಎಸ್. ಮುಗಳಿ ಉಪನ್ಯಾಸ ನೀಡಿದರು. ಸರ್ಕಾರಿ ಸಹಾಯಕ ಅಭಿಯೋಜಕ ನಾರಾಯಣ ಆರಿ, ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಂ. ಡಂಬಳ, ಎಂ.ಎಚ್. ಮುಲ್ಲಾ, ಆರ್.ಎಸ್. ಕಟ್ಟಿ, ಆರ್.ಎಸ್. ಸಂಗನಾಳ, ರಾಜೇಂದ್ರ ಉದ್ದಾರ, ಉಮೇಶ ಸಾಲಿಮಠ, ಶರಣು ಪರಡ್ಡಿ ಮುಂತಾದವರು ಉಪಸ್ಥಿತರಿದ್ದರು. ಶ್ರೀಮತಿ ಗಾಣಗೇರ ನಿರೂಪಿಸಿದರು. ಆರ್.ಎಸ್. ಕಟ್ಟಿ ಸ್ವಾಗತಿಸಿ, ವಂದಿಸಿದರು.