ನೀರಿಗಾಗಿ ರಸ್ತೆಗಿಳಿದು ಪ್ರತಿಭಟನೆ
ಹಾವೇರಿ: ಕುಡಿಯುವ ನೀರಿಗಾಗಿ ಜನರು ಪ್ರತಿಭಟನೆ ಮಾಡುವುದು ಮಾಮೂಲಿ. ಆದರೆ, ಇಲ್ಲಿ ನೀರಿನ ಸಮಸ್ಯೆ ಎಷ್ಟಿದೆ ಎಂದರೆ, ಜನರೊಂದಿಗೆ ಜಾನುವಾರುಗಳೂ ರಸ್ತೆಗಿಳಿದು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಗರದ ಇಜಾರಿ ಲಕಮಾಪುರದಲ್ಲಿ ನಡೆಯಿತು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಆಕಳು, ಎಮ್ಮೆಗಳು ಜನರೊಂದಿಗೆ ರಸ್ತೆಯಲ್ಲೇ ನಿಂತು ಸಂಚಾರಕ್ಕೆ ತಡೆ ಒಡ್ಡಿದವು. ಕಳೆದ 20 ದಿನಗಳಿಂದ ತಮ್ಮ ವಾರ್ಡಿಗೆ ನೀರು ಪೂರೈಕೆಯಾಗಿದ್ದರಿಂದ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿ, ಸಮೀಪದ ಜಿಎಚ್ ಕಾಲೇಜಿನ ಬಳಿ ಹೆದ್ದಾರಿ ತಡೆದು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಮೇಲೆ ಎತ್ತಿನ ಸಮೇತ ಬಂಡಿ ಇಟ್ಟು ಸಂಚಾರಕ್ಕೆ ತಡೆ ಒಡ್ಡಿದರು. ಖಾಲಿ ಕೊಡ ಪ್ರದರ್ಶಿಸಿ, ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ನಗರಸಭೆ ವಿರುದ್ಧ ಘೋಷಣೆ: ಹೆದ್ದಾರಿ ಬಂದ್ ಮಾಡಿದ್ದರಿಂದ ಸ್ಥಳಕ್ಕೆ ತಕ್ಷಣ ಪೊಲೀಸ್ ಅಧಿಕಾರಿಗಳು ಆಗಮಿಸಿ ಸಮಸ್ಯೆ ಆಲಿಸಿದರು. ಪೌರಾಯುಕ್ತ ಶಿವಕುಮಾರಯ್ಯ ಅವರೂ ಆಗಮಿಸಿದರು. ಈ ಸಂದರ್ಭ ಪ್ರತಿಭಟನಾನಿರತರು ನಗರಸಭೆ ವಿರುದ್ಧ ಘೋಷಣೆ ಹಾಕಿದರು. ಹಣ ಮಂಜೂರಾಗಿದೆ, ಬೋರ್‌ವೆಲ್ ಹಾಕಿಸುತ್ತೇವೆ ಎಂದು ಪೌರಾಯುಕ್ತರು ಸಮಾಧಾನ ಪಡಿಸಲು ಯತ್ನಿಸಿದರೂ ಜನ ಕೇಳಲಿಲ್ಲ. ನಿಮ್ಮ ಹಣ ನಮಗೆ ಬೇಕಿಲ್ಲ, ಮೊದಲು ನೀರು ಕೊಡಿ. ನಗರಸಭೆ ಅಧ್ಯಕ್ಷರ ಚಿತಾವಣೆಯಿಂದಲೇ ನಮ್ಮ ವಾರ್ಡಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿದರು. ಅಧ್ಯಕ್ಷರೇ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದರು.
ನಗರಸಭೆ ಸದಸ್ಯ ಗುಡ್ಡನಗೌಡ ಅಂದಾನಿಗೌಡ್ರ ಮಾತನಾಡಿ, ಕಳೆದ 20 ದಿನಗಳಿಂದ ಇಜಾರಿಲಕಮಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆಯಾಗಿಲ್ಲ. ಜಾನುವಾರುಗಳಿಗೆ ಮೀಸಲಿರುವ ಕೆರೆಯೂ ಒತ್ತುವರಿಯಾಗಿ, ನೀರು ಬತ್ತಿದೆ. ನಗರಸಭೆಗೆ ತುರ್ತು ಕುಡಿಯವ ನೀರು ಕಾಮಗಾರಿಗೆ ಹಣ ಮಂಜೂರಾಗಿದ್ದರೂ ನಮ್ಮ ವಾರ್ಡಿಗೆ ಒಂದೂ ಬೋರ್‌ವೆಲ್ ನೀಡಿಲ್ಲ. ಇಂಥ ತಾರತಮ್ಯ ಮಾಡುವುದು ಸರಿಯಲ್ಲ ಎಂದರು.
ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷ ಐ.ಯು. ಪಠಾಣ, ನೀವು ತಿಳಿಸಿದ ಸ್ಥಳದಲ್ಲಿ ಎರಡು ಬೋರ್‌ವೆಲ್ ಹಾಕಿಸಿಕೊಡಲಾಗುವುದು. ಮಂಗಳವಾರ ಬೆಳಗ್ಗೆ ನೀರು ಪೂರೈಸಲಾಗುವುದು. ವಿದ್ಯುತ್ ಸಮಸ್ಯೆಯಿಂದಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಆದ್ದರಿಂದ ಜನತೆ ಸಹಕರಿಸಬೇಕು ಎಂದರು.
ದುಂಡಿ ಬಸವೇಶ್ವರ ದೇವಸ್ಥಾನ ಬಳಿ ಪ್ರತಿಭಟನೆ ನಡೆಸುತ್ತಿದ್ದಲ್ಲಿಗೆ ಅವರು ತೆರಳಿ ವಿನಂತಿಸಿದರು. ಕೆರೆ ಒತ್ತುವರಿ ತೆರವುಗೊಳಿಸಿ, ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದುಕೊಳ್ಳಲಾಯಿತು. ನಿಂಗನಗೌಡ ಕಲ್ಲನಗೌಡ್ರ, ಲಿಂಗನಗೌಡ ಅಂದಾನಿಗೌಡ್ರ, ಶಾಂತಪ್ಪ ಕೋಳೆನೂರ, ಶಿವನಗೌಡ ಅಂದಾನಗೌಡ್ರ, ಚಂದ್ರು ನವಲಿ, ಶಂಕ್ರಪ್ಪ ನವಲಿ, ನಾಗಣ್ಣ, ವೀರೇಶ ಕೋಡಿಹಳ್ಳಿ, ಮಂಜುನಾಥ ತಳವಾರ ಇದ್ದರು.