ಅಭಿವೃದ್ಧಿ ಕಾಮಗಾರಿಗಳಿಂದ ಪಕ್ಷಿ ಸಂಖ್ಯೆ ಕುಸಿತ
ಹಾವೇರಿ: ಅಭಿವೃದ್ಧಿ ನೆಪದಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿಗಳಿಂದ ಕೆಲ ಪ್ರದೇಶಗಳಲ್ಲಿ ಪಕ್ಷಿಗಳ ಸಂಖ್ಯೆ ಕುಂಠಿತಗೊಳ್ಳುತ್ತಿದ್ದು, ಪ್ರಾಂತವಾರು ಪಕ್ಷಿಗಳು ಕಂಡುಬರುವ ಬಗ್ಗೆ ಮಾಹಿತಿ ದಾಖಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸೃಷ್ಟಿಸಿದ ಪಕ್ಷಿ ವೆಬ್ಸೈಟ್ ಬಳಕೆದಾರ ಸ್ನೇಹಿ ಆಗಿದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿ ಪ್ರೊ. ಹರೀಶ್ ಭಟ್ ಅಭಿಪ್ರಾಯಪಟ್ಟರು.
ನಗರದ ಕೆಎಲ್ಇ ಸಂಸ್ಥೆಯ ಜಿ.ಎಚ್. ಕಾಲೇಜಿನ ರೆಡ್ಕ್ರಾಸ್ ಘಟಕ, ಪ್ರಾಣಿಶಾಸ್ತ್ರ ವಿಭಾಗ ಹಾಗೂ ಪರಿಸರ ವೇದಿಕೆ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಕ್ಷಿ ಪ್ರಪಂಚ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾಡು ಸೃಷ್ಟಿ ಹಾಗೂ ಮಾನವನಿಗೆ ಆಹಾರ ಲಭ್ಯವಾಗುವುದು ಪಕ್ಷಿಗಳಿಂದ ಎಂಬ ಸಾಮಾನ್ಯ ಜ್ಞಾನ ಬಹಳಷ್ಟು ಜನರಿಗೆ ಗೊತ್ತಿಲ್ಲ. ಜಗತ್ತಿನಾದ್ಯಂತ 9 ಸಾವಿರ ಪಕ್ಷಿ ಪ್ರಬೇಧಗಳಿದ್ದು, ಶೇ. 20ರಷ್ಟು ಪಕ್ಷಿಗಳು ವಲಸೆ ಬರುತ್ತಿವೆ. ಇವೆಲ್ಲವುಗಳ ಬಗ್ಗೆ ಸ್ಥಳೀಯವಾಗಿ ವೈಜ್ಞಾನಿಕ ದಾಖಲಾತಿ ಅವಶ್ಯ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಆಸಕ್ತರು, ಪಕ್ಷಿ ವೀಕ್ಷಕರು ಸಕ್ರಿಯವಾಗಿ ಪಾಲ್ಗೊಳ್ಳಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು. ಭಾರತೀಯ ವಿಜ್ಞಾನ ಮಂದಿರದ ಮತ್ತೋರ್ವ ವಿಜ್ಞಾನಿ ಪ್ರೊ. ಜಮದಗ್ನಿ ಮಾತನಾಡಿ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸರಳವಾದ ವೆಬ್ಸೈಟ್ ನಿರ್ಮಾಣ ಮಾಡಲಾಗಿದೆ. ಈ ವೆಬ್ಸೈಟ್ ಇನ್ನೂ ಸ್ವಲ್ಪ ಸರಳೀಕರಣಗೊಳಿಸಿ ಸ್ಥಾನಿಕ ಹಳ್ಳಿಗಾಡಿನ ಪಕ್ಷಿಗಳ ಲಭ್ಯತೆ ಬಗ್ಗೆ ಮಾಹಿತಿ ಸಂಗ್ರಹಿಸಬೇಕಾಗಿದೆ ಎಂದು ಅಭಿಪ್ರಾಯಿಸಿದರು. ಪರಿಸರ ವೇದಿಕೆ ಅಧ್ಯಕ್ಷೆ ಮಾಧುರಿ ದೇವಧರ ಸ್ವಾಗತಿಸಿದರು. ಡಾ.ಬಿ.ಸಿ. ಬನ್ನೂರ ಅಧ್ಯಕ್ಷತೆ ವಹಿಸಿದ್ದರು. ಹನುಮಂತಗೌಡ ಗೊಲ್ಲರ ನಿರ್ವಹಿಸಿದರು. ಡಾ.ಎನ್.ಆರ್. ಬಿರಸಾಲ ವಂದಿಸಿದರು. ಭಾರತೀಯ ವಿಜ್ಞಾನ ಮಂದಿರದ ಸಂಶೋಧನಾ ವಿದ್ಯಾರ್ಥಿಗಳಾದ ಶೇಷ ರಾಘವ, ವರುಣ ಗೌತಮ, ಸಾಗರಸಿಂಹ, ಅಕ್ಷಯ ಉತ್ತಮ ನಂಬಿ, ಆರ್. ಯೋಗಿಂದ್ರರಾವ್, ಮನೋಜಕುಮಾರ, ಸುರೇಶಕುಮಾರ, ಉತ್ತರ ಕರ್ನಾಟಕದ 50ಕ್ಕೂ ಹೆಚ್ಚು ಪಕ್ಷಿ ವೀಕ್ಷಕರು, ಆಸಕ್ತರು ಭಾಗವಹಿಸಿದ್ದರು.