ಜಿಪಂನಲ್ಲಿ ಪಾಲನೆಯಾಗದ ರೋಸ್ಟರ್
ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ನಿಗದಿಯಾಗಿದ್ದು, ಇದರಲ್ಲಿ ರೋಸ್ಟರ್ ಪಾಲನೆ ಆಗುತ್ತಿದೆಯೋ ಇಲ್ಲವೋ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆ ಪ್ರಕಟಿಸಿದ ರಾಜ್ಯದ ಎಲ್ಲ ಜಿಪಂಗಳ ಮೂರನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪಟ್ಟಿ ಇಂತಹದೊಂದು ಸಂಶಯವನ್ನು ಹುಟ್ಟು ಹಾಕಿದೆ.
ಇಲಾಖೆ ಹೊರಡಿಸಿದ ಮೂರನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಆದೇಶದಲ್ಲಿ ಹಾವೇರಿ ಜಿಪಂ ಅಧ್ಯಕ್ಷ ಸ್ಥಾನ ಹಿಂದುಳಿದ 'ಅ' ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಎರಡನೇ ಅವಧಿಯಲ್ಲಿಯೂ ಇದೇ ಮೀಸಲಾತಿ ಇದ್ದುದರಿಂದ ಮೂರನೇ ಅವಧಿಯ ಮೀಸಲಾತಿಗೂ ಅದೇ ಪುನರಾವರ್ತನೆಯಾಗಿದೆ. ಇದಕ್ಕಿಂತ ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ ಜಿಪಂ ಉಪಾಧ್ಯಕ್ಷ ಸ್ಥಾನಗಳ ಮೊದಲ ಅವಧಿಯಿಂದ ಹಿಡಿದು ಮೂರನೇ ಅವಧಿವರೆಗೆ ಹಾವೇರಿ ಜಿಪಂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮಾತ್ರ ಮೀಸಲುಗೊಳಿಸಲಾಗಿದೆ.
ಇಲಾಖೆ ಪ್ರಕಟಿಸಿದ ಪಟ್ಟಿಯಲ್ಲಿ ಹಾವೇರಿ ಜಿಪಂನಲ್ಲಿ ಅಷ್ಟೇ ಅಲ್ಲದೇ, ರಾಜ್ಯದ ಏಳೆಂಟು ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿಯೂ ಸಹ ಯಾವುದೇ ಬದಲಾವಣೆ ಇಲ್ಲದೇ ಹಿಂದಿನ ಮೀಸಲಾತಿಯ ಮುಂದುವರಿದ ಭಾಗದಂತೆ ಕಂಡು ಬರುತ್ತದೆ.
ಬಹುತೇಕರಿಗೆ ಅವಕಾಶವಿಲ್ಲ: ಲಿಂಗ ಭೇದಕ್ಕೆ ಅವಕಾಶ ನೀಡಬಾರದು, ಮಹಿಳೆಯರಿಗೂ ಸಮಾನ ಅವಕಾಶ ನೀಡಬೇಕೆನ್ನುವ ಉದ್ದೇಶದಿಂದ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಶೇ. 50ರಷ್ಟು ಮೀಸಲಾತಿ ಜಾರಿಗೆ ತಂದಿದೆ. ಅದು ಅಲ್ಲದೇ ಎಲ್ಲ ಸಮುದಾಯಗಳಿಗೂ ಅಧಿಕಾರ ಸಿಗಬೇಕು ಎನ್ನುವ ಸದುದ್ದೇಶದಿಂದ ಐದು ವರ್ಷದ ಜಿಪಂ ಅವಧಿಯಲ್ಲಿ 20 ತಿಂಗಳಿಗೊಂದು ಅವಧಿಯಂತೆ ಮೂರು ಅವಧಿಗಳನ್ನು ಮಾಡಿದೆ. ಆದರೆ, ಈ ಎಲ್ಲ ಆಶಯಗಳಿಗೆ ವಿರುದ್ಧ ಎಂಬಂತೆ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿ ಮಾಡಲಾಗಿದೆ. ಹಾವೇರಿ ಜಿಪಂನಲ್ಲಿ 5 ವರ್ಷದ ಮೂರು ಅವಧಿಯಲ್ಲಿ ಮೊದಲ ಅವಧಿ ಅಧ್ಯಕ್ಷ ಸ್ಥಾನ ಎಸ್ಟಿಗೆ ಮೀಸಲಾಗಿದ್ದರೆ, ಎರಡು ಮತ್ತು ಮೂರನೇ ಅವಧಿ ಹಿಂದುಳಿದ 'ಅ' ವರ್ಗಕ್ಕೆ ಮೀಸಲಾಗಿದೆ.
ಒಂದು ಬಾರಿಯೂ ಪೂರ್ಣ ಪ್ರಮಾಣದಲ್ಲಿ ಮಹಿಳೆಯರಿಗೆ, ಎಸ್ಸಿ, ಸಾಮಾನ್ಯ ವರ್ಗಕ್ಕೆ, ಹಿಂದುಳಿದ 'ಬ' ವರ್ಗಕ್ಕೆ ಅಧ್ಯಕ್ಷರಾಗುವ ಅವಕಾಶ ಸಿಗುವುದೇ ಇಲ್ಲ.
ಇನ್ನು ಉಪಾಧ್ಯಕ್ಷ ಸ್ಥಾನವನ್ನು ಮೂರು ಅವಧಿಗೂ ಸಾಮಾನ್ಯ ಮಹಿಳೆಗೆ ಮೀಸಲು ಇಟ್ಟದ್ದರಿಂದ ಪುರುಷರಿಗೆ, ಎಸ್ಸಿ, ಎಸ್ಟಿ, ಹಿಂದುಳಿದ ಓಬಿಸಿ ವರ್ಗದ ಮಹಿಳೆ, ಪುರುಷರಿಗೆ ಒಂದು ಬಾರಿಯೂ ಉಪಾಧ್ಯಕ್ಷರಾಗುವ ಅವಕಾಶ ದೊರೆಯುವುದೇ ಇಲ್ಲ.
ಮೀಸಲಾತಿ ನಿಗದಿ ಅವೈಜ್ಞಾನಿಕ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಇಡೀ ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ರೋಸ್ಟರ್ ಪಾಲನೆ ಮಾಡುತ್ತದೆ. ಇದರಲ್ಲಿ ಕೆಲವೊಂದು ಜಿಪಂಗಳ ಮೀಸಲಾತಿಯಲ್ಲಿ ಯಾವುದೇ ರೋಸ್ಟರ್ ಪಾಲನೆಯಾಗುವುದೇ ಇಲ್ಲ. ಮೇಲ್ನೋಟಕ್ಕೆ ಇದೊಂದು ಸಂಪೂರ್ಣ ಅವೈಜ್ಞಾನಿಕ ಎನಿಸುತ್ತದೆ ಎಂದು ಹೇಳುತ್ತಾರೆ ರಾಣಿಬೆನ್ನೂರು ತಾಲೂಕಿನ ಹಲಗೇರಿ ಜಿಪಂ ಸದಸ್ಯ ಸಂತೋಷ ಪಾಟೀಲ. 2012 ಅಕ್ಟೋಬರ್ 11ರಂದು ಹೈಕೋರ್ಟ್ ನೀಡಿರುವ ನಿರ್ದೇಶನದಂತೆ ಮೀಸಲಾತಿ ಸಿದ್ಧಪಡಿಸಲಾಗಿದೆ ಎಂದು ಇಲಾಖೆ ನಿರ್ದೇಶಕರು ಹೇಳುತ್ತಾರೆ. ಆದರೆ, ಒಂದೇ ಸಮುದಾಯಕ್ಕೆ ಪದೇ ಪದೇ ಮೀಸಲಾತಿ ನಿಗದಿ ಪಡಿಸುವುದರಿಂದ ಬೇರೆ ಸಮುದಾಯಗಳಿಗೆ ಅನ್ಯಾಯವಾಗಲಿದೆ.
ಇದೇ ಮೀಸಲಾತಿ ಮುಂದುವರಿದರೆ ಅನ್ಯಾಯಕ್ಕೊಳಗಾಗುವ ಸಮುದಾಯದ ಸದಸ್ಯರುಗಳು ಮತ್ತೆ ನ್ಯಾಯಾಲಯದ ಮೆಟ್ಟಿಲು ಏರುವ ಸಾಧ್ಯತೆ ಇರುತ್ತದೆ.
ಆಗ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ವಿಳಂಬವಾಗುವುದರ ಜತೆಗೆ ಅಧಿಕಾರಾವಧಿ ಮುಗಿದ ಅಧ್ಯಕ್ಷರಿಗೆ ಯಾವುದೇ ಅಧಿಕಾರ ಇರದ ಕಾರಣ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳಲಿವೆ ಎನ್ನುತ್ತಾರೆ ಅವರು.