ಸಮರ್ಪಕ ವಿದ್ಯುತ್ಗೆ ರೈತರ ಆಗ್ರಹ, ಮನವಿ
ಹಿರೇಕೆರೂರು: ಏಳು ತಾಸು ನಿರಂತರ ತ್ರಿಫೇಸ್ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಕಾರ್ಯಕರ್ತರು ಹೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡ ಸಿದ್ಧನಗೌಡ ಪಾಟೀಲ ಮಾತನಾಡಿ, ಹಿರೇಕೆರೂರು ತಾಲೂಕಿನಲ್ಲಿ ಈ ಹಿಂದೆ ಹಗಲು 6 ಗಂಟೆ ತ್ರಿಫೇಸ್, 12 ಗಂಟೆ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು. ನಂತರ ಇಂಧನ ಸಚಿವರ ಆದೇಶದಂತೆ 1 ಗಂಟೆ ಹೆಚ್ಚುವರಿ ಮಾಡಿ 7 ಗಂಟೆ ತ್ರಿಫೇಸ್ಗೆ ಆದೇಶಿಸಿದ್ದರೂ ಹೆಸ್ಕಾಂನವರು ಕೇವಲ ಹಗಲು 4 ಗಂಟೆ ತ್ರಿಫೇಸ್, ರಾತ್ರಿ 3 ಗಂಟೆ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಜನ ಹಾಗೂ ಜಾನುವಾರಿಗೆ ಕುಡಿಯುವ ನೀರಿಗೆ ಹಾಗೂ ರೈತರು ಬಿತ್ತನೆ ಮಾಡಿದ ನೀರಾವರಿ ಬೆಳೆಗಳು ಇದೀಗ ಕೊನೆಯ ಹಂತದಲ್ಲಿದ್ದು ನೀರಿನ ಅವಶ್ಯಕತೆಯಿರುತ್ತದೆ. ಆದ್ದರಿಂದ ಹುಬ್ಬಳ್ಳಿಯ ಹೆಸ್ಕಾಂನವರು ಎಂಡಿಯವರ ಆದೇಶದ ಪ್ರಕಾರ 7 ಗಂಟೆ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಬೇಕು. ಇಲ್ಲದಿದ್ದಲ್ಲಿ ತಾಲೂಕು ರೈತ ಸಂಘ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಹದೇವ ಇಂಗಳಿಗಿಯವರಿಗೆ ಸಲ್ಲಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ, ಎಸ್.ಬಿ. ಗವಿಯಪ್ಪನವರ ಕಾರ್ಯಕರ್ತರಾದ ಮಹೇಶ ಕೂಟ್ಟೂರ, ಚಂದ್ರು ಜೋಗಿಹಳ್ಳಿ, ಬಸವರಾಜ ಶಿರಗಂಬಿ, ಸಿದ್ದಪ್ಪ ಬಿದಿರಿಕಟ್ಟಿ, ಈರನಗೌಡ ಪಾಟೀಲ, ನಾಗಪ್ಪ ತೋಟಮ್ಮನವರ, ಶಿವಯೋಗಿ, ರವಿ ಕೊಪ್ಪದ ಮತ್ತಿತರರು ಇದ್ದರು.