ಭಾರತ ಪೋಲಿಯೋ ಮುಕ್ತ ದೇಶ: ಅನಿಲ್
ಹಾವೇರಿ: 3 ವರ್ಷಗಳಲ್ಲಿ ಒಂದೇ ಒಂದು ಪೋಲಿಯೋ ಪ್ರಕರಣ ದಾಖಲಾಗದೇ ಭಾರತ ಇಂದು ಪೋಲಿಯೋ ಮುಕ್ತ ದೇಶವಾಗಿದೆ ಎಂದು ನ್ಯಾಷನಲ್ ಪೋಲಿಯೋ ಸರ್ವೆ ಯುನಿಟಿಯ ಡಾ. ಅನಿಲ ಬಿಳಮಲೆ ಹೇಳಿದರು. ಜಿಲ್ಲಾ ಕುಟುಂಬ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಗರದ ತಾಲೂಕು ಆರೋಗ್ಯ ಭವನದಲ್ಲಿ ಸಂಶಯಾಸ್ಪದ ಪೋಲಿಯೋ ತನಿಖೆ ಕುರಿತು ಶುಕ್ರವಾರ ಇಲಾಖೆ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪೋಲಿಯೋ ರೋಗದ ಕುರಿತು ದೇಶದಲ್ಲಿ ಹಲವು ವರ್ಷಗಳಿಂದ ಜಾಗೃತಿ ಮೂಡಿಸಿದ್ದರ ಪರಿಣಾಮ ಇಂದು ಭಾರತ ಪೋಲಿಯೋ ಮುಕ್ತ ದೇಶವಾಗಿಸಲು ಶ್ರಮಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಾಗಾರದಲ್ಲಿ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಪೋಲಿಯೋ ರೋಗದ ಬಗ್ಗೆ ವಿಡಿಯೋ ಚಿತ್ರೀಕರಣದ ಮೂಲಕ ತಿಳಿಯಪಡಿಸಿ, ರೋಗ ನಿರ್ಮೂಲನೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಘವೇಂದ್ರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಪೋಲಿಯೋ ರೋಗಕ್ಕೆ ತುತ್ತಾದ ರೋಗಿಗಳು ಕಂಡುಬಂದ ತಕ್ಷಣ ಇಲಾಖೆಯ ವೈದ್ಯರು 24 ಗಂಟೆಯೊಳಗೆ ಚಿಕಿತ್ಸೆ ನೀಡಬೇಕು. ಒಂದು ವಾರದೊಳಗೆ ಎಲ್ಲ ತಾಲೂಕುಗಳಿಂದ ಹಿರಿಯ ವೈದ್ಯಾಧಿಕಾರಿಗಳಿಗೆ ಪೋಲಿಯೋ ರೋಗದ ಕುರಿತು ಮಾಹಿತಿ ನೀಡಬೇಕು ಎಂದು ಆದೇಶಿಸಿದರು. ಕಾರ್ಯಾಗಾರದಲ್ಲಿ ಜಿಲ್ಲೆಯ ಏಳು ತಾಲೂಕುಗಳ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಡಾ. ಡಿ.ಬಿ. ಮೂಲಿಮನಿ ಸ್ವಾಗತಿಸಿದರು. ಎಂ.ಎಫ್. ಕುರವಳ್ಳಿ ನಿರೂಪಿಸಿದರು. ಡಾ. ಜಿಯಾನಂದ ವಂದಿಸಿದರು.