ಸಾಮೂಹಿಕ ವಿವಾಹ ಉತ್ತಮ
ಗುತ್ತಲ: ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದಾಗಿದೆ ಎಂದು ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರಸ್ವಾಮೀಜಿ ಹೇಳಿದರು. ಅವರು ಹೊಸರಿತ್ತಿ ಸಮೀಪದ ಅಕ್ಕೂರ ಗ್ರಾಮದ ಪಂಚದೇವಸ್ಥಾನ ಆವರಣದಲ್ಲಿ ಗುರುವಾರ ನಡೆದ ಶರಣ ಬಸವೇಶ್ವರ ಪುರಾಣ ಮಹಾಮಂಗಲೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.
ಸಾಮಾಜಿಕ ಜೀವನದಲ್ಲಿ ಮದುವೆ ಮಹತ್ವವವನ್ನು ಪಡೆದುಕೊಂಡಿದೆ. ಅಲ್ಲದೇ, ಮದುವೆಯಾದ ಮೇಲೆ ಸುಖ, ದಾಂಪತ್ಯ ಸಾಗಿಸುವುದರ ಜತೆಗೆ ಕುಟುಂಬದ ನಿರ್ವಹಣೆಯಲ್ಲಿ ಸತಪತಿಗಳು ಒಂದಾಗಿ ಬಾಳಬೇಕೆಂದರು.
ಸಾನ್ನಿಧ್ಯವಹಿಸಿದ್ದ ಸಿದ್ಧರಾಮೇಶ್ವರ ಶ್ರೀಗಳು ಮಾತನಾಡಿ, ಮಾನವ ಜೀವಿಗೊಂದು ಮದುವೆ ಹೊಸ ಜೀವನ ನೀಡುತ್ತದೆ. ಮದುವೆಯ ಬಂಧನದಲ್ಲಿ ಸಿಲುಕಿದ ಸತಪತಿ ಹೊಂದಾಣಿಕೆ ಜೀವನ ನಡೆಸುವುದರ ಮುಖಾಂತರ ಸಮಾಜದಲ್ಲಿ ಉತ್ತಮ ಬದುಕು ಸಾಗಿಸಬೇಕೆಂದು ಕರೆ ನೀಡಿದರು. ಶಾಂತವೀರಯ್ಯ ಶಾಸ್ತ್ರಿಗಳು ಬಂಗಾರಿಮಠ, ಹೊಳೆಯಪ್ಪ ಗವಾಯಿಗಳು, ವಿಜಯಕುಮಾರ ಮರೋಳ, ಹಾಗೂ ಅಕ್ಕೂರ ಗ್ರಾಮದ ನಾಗರಿಕರು ಭಾಗವಹಿಸಿದ್ದರು. ಸಾಮೂಹಿಕ ವಿವಾಹದಲ್ಲಿ 16 ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿರಿಸಿದವು.