ಗಾಳಿ, ಮಳೆಯಿಂದ ಅಪಾರ ಹಾನಿ
ಹಿರೇಕೆರೂರು: ತಾಲೂಕಿನ ಚಿನ್ನಮುಳಗುಂದ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಮಳೆ ಹಾಗೂ ಭಾರಿ ಗಾಳಿ, ಸಿಡಿಲಿನಿಂದಾಗಿ ಅಪಾರ ಹಾನಿಯಾದ ವರದಿಯಾಗಿದೆ. ಗ್ರಾಮದ ಗಿರಿಯಪ್ಪ ಈಟೇರ ಎಂಬುವವರಿಗೆ ಸೇರಿದ ಗ್ರೀನ್ ಹೌಸ್ಗೆ ಹೊದಿಸಿದ್ದ ಮೇಲ್ಛಾವಣೆ ಗಾಳಿಗೆ ಹಾರಿಹೋಗಿ ಅದರಲ್ಲಿದ್ದ ಎಲೆಕೋಸು ಮಡಿಯಲ್ಲಿ ಹಾಕಿದ ಬೀಜ ಸಸಿಯಾಗುವ ಮೊದಲೇ ಹಾನಿಗೀಡಾಗಿದೆ. ಪರಮೇಶಪ್ಪ ಚನ್ನಪ್ಪ ಸ್ಥಾವರದ ಎಂಬುವವರಿಗೆ ಸೇರಿದ ನಿರ್ಮಾಣ ಹಂತದ ಫಾರಂ ಹೌಸ್ ಮೇಲ್ಛಾವಣಿಗೆ ಅಳವಡಿಸಿದ್ದ 130 ತಗಡಿನ ಸೀಟುಗಳಲ್ಲಿ 100 ಸೀಟುಗಳು ಗಾಳಿ ರಭಸಕ್ಕೆ ನೆಲಕ್ಕುರುಳಿವೆ. ಗುರುಶಾಂತಪ್ಪ ರಾಗೇರ ಎಂಬುವವರಿಗೆ ಸೇರಿದ ಟೊಮೋಟೊ ಮತ್ತು ಹಾಗಲ ಮೆಸ್ ಸಹ ನೆಲಕ್ಕುರಳಿ ಬೆಳೆ ಹಾನಿಗೊಳಗಾಗಿದೆ. ವಿಜಯ ಕಲ್ಲತ್ತಿ ಎಂಬುವವರಿಗೆ ಸೇರಿದ ಮೆಣಸಿನ ಬೆಳೆ ಮತ್ತು ಟೊಮೋಟೊ ನೆಲಕಚ್ಚಿವೆ. ನಿರ್ಮಾಣ ಹಂತದ ಗ್ರಾಪಂ ಕಟ್ಟಡ ಮೇಲ್ಮಹಡಿಯ ಛಾವಣಿ ಗಾಳಿಗೆ ಹಾರಿಹೋಗಿದೆ. ಇದಲ್ಲದೆ ಗ್ರಾಮದ ವಿವಿಧ ಕಡೆ ಬೆಳೆ ಹಾಗೂ ಹುಲ್ಲಿನ ಬಣವೆಗಳು ಹಾನಿಗೊಳಗಾದ ಘಟನೆ ಜರುಗಿದೆ. ಮುಂಗಾರು ಮಳೆಯ ಆಗಮನದ ನಿರೀಕ್ಷೆಯಲ್ಲಿದ್ದ ರೈತರಿಗೆ ತಾಲೂಕಿನ ವಿವಿಧೆಡೆ ಅಕಾಲಿಕ ಮಳೆ ಹಾಗೂ ಗಾಳಿಯ ಹಾನಿಯಿಂದಾಗಿ ದಿಕ್ಕು ತೋಚದಂತಾಗಿದೆ.
ಮುಖ್ಯ ರಸ್ತೆಯಲ್ಲೇ ಬಿಡಿವಸ್ತು ಮಾರಾಟದ ಬಿಡಾರ
ಮುಖ್ಯ ರಸ್ತೆಯಲ್ಲೊಂದು ಸಂತೆಯ ಮಾಡಿ ಅಪಘಾತಕ್ಕೆ ಅಂಜಿದೊಡೆಂತಯ್ಯ ಶರಣೆ ಅಕ್ಕಮಹಾದೇವಿ ಅವರ ವಚನದ ಸಾಲುಗಳಿಗೆ ಹೋಲುವಂತಾಗಿದೆ ಪಟ್ಟಣದ ಮಖ್ಯರಸ್ತೆ.
ಬಿಡಿವಸ್ತು ಮಾರಾಟಗಾರರ ಹಾವಳಿಗೆ ನಲುಗಿರುವ ಮುಖ್ಯ ರಸ್ತೆಯಲ್ಲಿ ಸುಗಮ ಸಂಚಾರ ಅಸಾಧ್ಯವಾಗಿದೆ. ಸ್ಥಳೀಯ ಪುರಸಭೆ ಹಾಗೂ ಲೋಕೊಪಯೋಗಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಪ್ರತಿ ಶನಿವಾರ ಮುಖ್ಯ ರಸ್ತೆ ಸಂತೆಯಾಗಿ ಪರಿವರ್ತನೆಗೊಳ್ಳುತ್ತಿರುವುದೇ ಇದಕ್ಕೆ ಕಾರಣವಾಗಿದೆ. ತರಕಾರಿ ಸೇರಿದಂತೆ ಬಿಡಿ ವಸ್ತುಗಳ ಮಾರಾಟಗಾರರು ಶನಿವಾರ ಮಾತ್ರ ತಪ್ಪದೇ ಹಾಜರಾಗುತ್ತಾರೆ. ಮುಖ್ಯರಸ್ತೆ ಎಂಬ ಸಾಮಾನ್ಯಜ್ಞಾನ ಇಲ್ಲದೇ ರೋಡಿಗಿಳಿದು ರಾಜಾರೋಷವಾಗಿ ವ್ಯಾಪಾರ ನಡೆಸುತ್ತಾರೆ. ಮುಖ್ಯರಸ್ತೆ ಅಂಚಿನಲ್ಲಿ ಬಂದು ತಂಬುಗಳನ್ನು (ಟೆಂಟ್ ಹಾಕುವ) ಮೂಲಕ ಕೆಲವರು ಚೂಪಾದ ಗುದ್ದಲಿ, ಮಚ್ಚು, ಸಲಕೆ ಇನ್ನಿತರ ಕಬ್ಬಿಣದ ಸಲಾಕೆಗಳಿಂದ ನಿರ್ಮಿಸಿದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ.
ಶನಿವಾರದ ಸವಾಲು: ಶನಿವಾರ ಬಂತೆಂದರೆ ವಾಹನ ಸವಾರರು ಒಂದು ದೊಡ್ಡ ಸವಾಲನ್ನೇ ಎದುರಿಸಬೇಕಾಗಿದೆ. ಮೊದಲೇ ಕಿಷ್ಕಿಂದೆಯಾಗಿರುವ ಮುಖ್ಯರಸ್ತೆಯಲ್ಲಿ ವಾಹನ ಚಾಲಕರು ಮಾತ್ರ ಮೈಯೆಲ್ಲ ಕಣ್ಣಾಗಿಸಿಕೊಂಡು ವಾಹನ ಚಾಲನೆ ಮಾಡುವಂತಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಕಟ್ಟಿಟ್ಟ ಬುತ್ತಿ. ಬೃಹತ್ ಸರಕುಗಳನ್ನು ಹೊತ್ತು ತರುವ ಲಾರಿ ಚಾಲಕರ ಗೋಳಂತೂ ಹೇಳತೀರದು. ಕನ್ನಡಭಾಷೆ ತಿಳಿಯದ ಹೊರ ರಾಜ್ಯಗಳಿಂದ ಆಗಮಿಸುವ ಚಾಲಕರಿಗಂತೂ ಬಿಡಿ ವಸ್ತು ಮಾರಾಟಗಾರರು ಮುಖ್ಯರಸ್ತೆಯನ್ನು ತಾವೇ ಖರೀದಿಸಿದಂತೆ ಅವಾಚ್ಯ ಶಬ್ದಗಳ ನಿಂದಿಸುವುದು ಸರ್ವೇ ಸಾಮಾನ್ಯ.
ಇನ್ನೆಷ್ಟು ದಿನ ಸಹಿಸಬೇಕು?: ಪಟ್ಟಣದ ಮುಖ್ಯರಸ್ತೆಯನ್ನು ಅಗಲೀಕರಣಗೊಳಿಸುವುದು ಇಲ್ಲಿನ ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿದೆ. ಇಚ್ಚಾಶಕ್ತಿ ಕೊರತೆಯಿಂದ ಇಂದಿಗೂ ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಮೆಣಸಿನಕಾಯಿ ವ್ಯಾಪಾರಕ್ಕೆ ನಿತ್ಯ ಸಾವಿರಾರು ಬೃಹತ್ ವಾಹನಗಳು ಮುಖ್ಯರಸ್ತೆ ಮೂಲಕವೇ ಸಂಚರಿಸುತ್ತಿವೆ. ಆದರೆ, ಅಕ್ಕಪಕ್ಕದ ಸ್ಥಳ ಅತಿಕ್ರಮಣದಿಂದಾಗಿ ವಾಹನಗಳ ಸುಗಮ ಸಂಚಾರ ಅಸಾಧ್ಯದ ಮಾತಾಗಿದೆ. ಮುಖ್ಯರಸ್ತೆಯಲ್ಲಿ ಹಾಯ್ದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ-136 ಅಕ್ಕಪಕ್ಕದಲ್ಲಿನ ಅತಿಕ್ರಮಣ ತೆರವುಗೊಳಿಸಿ ರಸ್ತೆ ಅಗಲೀಕರಣಗೊಳಿಸಿ ದ್ವಿಮುಖ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಇನ್ನೆಷ್ಟು ದಿವಸ ಸಾರ್ವಜನಿಕರು ಇದನ್ನು ಸಹಿಸಿಕೊಂಡಿರಬೇಕು ಎನ್ನುತ್ತಾರೆ ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಸುರೇಶ್ ಛಲವಾದಿ.
ಮುಂದಿನವಾರ ತೆರವು: ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಪುರಸಭೆ ಕಿರಿಯ ಅಭಿಯಂತರ, ಸಂತೆಯಲ್ಲಿ ವಿಶಾಲ ಪ್ರದೇಶವಿದ್ದರೂ ಅಲ್ಲಿ ವ್ಯಾಪಾರಕ್ಕೆ ತೆರಳುತ್ತಿಲ್ಲ. ಬರುವ ಶನಿವಾರ ಮುಖ್ಯರಸ್ತೆಯಲ್ಲಿ ಯಾವುದೇ ಬಿಡಿವಸ್ತು ಮಾರಾಟಗಾರರ ಅಂಗಡಿಗಳನ್ನು ಹಚ್ಚಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.