ಭಾರಿ ಮಳೆ, ಗಾಳಿ: ಜನಜೀವನ ಅಸ್ತವ್ಯಸ್ತ
ಶಿಗ್ಗಾಂವಿ: ಶಿಗ್ಗಾಂವಿಯಲ್ಲಿ ಶುಕ್ರವಾರ ಮತ್ತು ಶನಿವಾರ ಸಂಜೆ ಬಂದ ಭಾರೀ ಮಳೆ ಮತ್ತು ಬಿರುಗಾಳಿಯಿಂದ ಪಟ್ಟಣದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅಂದಾಜು ರು. 1.5 ಕೋಟಿಗೂ ಹೆಚ್ಚು ಹಾನಿ ಸಂಭವಿಸಿದೆ ಎಂದು ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಹೇಳಿದ್ದಾರೆ.
ಮಳೆ ಗಾಳಿಗೆ ಹಾನಿಗೀಡಾದ ಪ್ರದೇಶಗಳಿಗೆ ಪುರಸಭೆಯ ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು, ಭಾನುವಾರ ಪುರಸಭೆ ಸಭಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಏಕಾಏಕಿ ಪಟ್ಟಣದ ಅರ್ಧ ಭಾಗದಲ್ಲಿ ಕೇವಲ ಒಂದು ಗಂಟೆಗಳ ಕಾಲ ಆರ್ಭಟ ಮೆರೆದಿರುವ ವರುಣ, ಕೋಟ್ಯಂತರ ರುಪಾಯಿ ಹಾನಿ ಮಾಡಿ, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳಿಸಿದಂತಾಗಿದೆ. ಇದರಿಂದಾಗಿ ಪುರಸಭೆಗೆ ಸೇರಿದ ಸುಮಾರು ರು. 80 ಲಕ್ಷಕ್ಕೂ ಹೆಚ್ಚು ಆಸ್ತಿ ನಷ್ಟವಾಗಿದೆ ಎಂದರು.
ಪುರಸಭೆ ಆವರಣದ ಪಂಪ್ಹೌಸ್ ಮತ್ತು ವಾಹನ ಸೇರಿದಂತೆ ಕಟ್ಟಡದ ಮೇಲೆ ಮರ ಹಾಗೂ ವಿದ್ಯುತ್ ಕಂಬಗಳು ಬಿದ್ದ ಪರಿಣಾಮ ರು. 5 ಲಕ್ಷ ಹಾನಿ ಸಂಭವಿಸಿದೆ. 150ಕ್ಕೂ ಹೆಚ್ಚು ಸೋಡಿಯಂ, ಸಿಎಫ್ಎಲ್ ಬಲ್ಬ್ಗಳ ಬೀದಿದೀಪಗಳಿಗೆ ಹಾನಿಯಾಗಿದ್ದು, ಪಟ್ಟಣದ ಹೊರವಲಯದ ಆಶ್ರಯ ಬಡಾವಣೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆ ಭಾಗಶಃ ಹಾನಿಗೊಳಗಾಗಿವೆ ಎಂದರು. ಇಲ್ಲಿಯ ಜಯನಗರ, ಅಂಬೇಡ್ಕರ್ ನಗರ, ಸವಣೂರು ರಸ್ತೆ, ನವನಗರ, ಆಶ್ರಯ ಪ್ಲಾಟ್, ಹಳೆಪೇಟಿ, ಗುಳೇದ ಓಣಿ, ಹಳೆ ತಹಸೀಲ್ದಾರ್ ಕಚೇರಿ ರಸ್ತೆ ಹಾಗೂ ಕೆಇಬಿ ರಸ್ತೆ ಭಾಗದಲ್ಲಿ ಹೆಚ್ಚು ಹಾನಿ ಸಂಭವಿಸಿದ್ದು, 35ಕ್ಕೂ ಹೆಚ್ಚು ಮರ 150 ವಿದ್ಯುತ್ ಕಂಬ, ನಾಲ್ಕು ವಿದ್ಯುತ್ ಟಿಸಿಗಳಿಗೆ ಹಾನಿಯಾಗಿದ್ದು, ಅಂಬೇಡ್ಕರ್ ಮತ್ತು ಮೆಹಬೂಬ ನಗರದ ಪ್ರದೇಶದಲ್ಲಿ ನಾಲ್ಕು ಪ್ರಮುಖ ರಸ್ತೆಗಳು ಸಂಪೂರ್ಣ ಹಾಳಾಗಿವೆ ಎಂದರು. ಅಲ್ಲದೆ, ಅಂಬೇಡ್ಕರ್ ನಗರದಲ್ಲಿ ಕಾಲುವೆಗೆ ಹಾಕಿದ್ದ ನಾಲ್ಕು ಸಿಡಿ ಕೊಚ್ಚಿ ಹೋಗಿವೆ. ಇದರಿಂದ 70ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಈ ಪ್ರದೇಶದಲ್ಲಿ ಕಳೆದ ನಾಲ್ಕು ದಿನದ ಹಿಂದೆ ಕಾಲುವೆಗಳನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಿದ್ದರ ಪರಿಣಾಮ ಹೆಚ್ಚು ಅನಾಹುತವಾಗಿಲ್ಲ ಎಂದರು. ವಿಪ ಸದಸ್ಯ ಸೋಮಣ್ಣ ಬೇವಿನಮರದ ನೇತೃತ್ವದಲ್ಲಿ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ತುರ್ತು ಕಾರ್ಯ ಕೈಗೊಳ್ಳುವಂತೆ ಸೂಚಿಸಲಾಗಿದೆ. ಪುರಸಭಾ ಸದಸ್ಯರು ಸೇರಿದಂತೆ ಅಧಿಕಾರಿಗಳೊಡನೆ ಮತ್ತೊಂದು ಸುತ್ತಿನ ಪರಿಶೀಲನೆ ಕಾರ್ಯ ನಡೆಸಿ ನಷ್ಟ ಅನುಭವಿಸಿದ ನಾಗರಿಕರಿಗೆ ಧೈರ್ಯ ತುಂಬಿ ಅಗತ್ಯ ಬಿದ್ದಲ್ಲಿ ತುರ್ತು ಕಾರ್ಯಕ್ಕಾಗಿ ಪುರಸಭೆ ಸಿಬ್ಬಂದಿ ನಿಯೋಜಿಸುತ್ತಿರುವುದಾಗಿ ತಿಳಿಸಿದರು.
ಶ್ರೀಕಾಂತ ಬುಳಕ್ಕನವರ ಅಕ್ರೋಶ: ಹಾನಿಗೀಡಾಗಿ ನಷ್ಟ ಅನುಭವಿಸಿದ ಬಡ ಜನರಿಗೆ ಆಶ್ರಯದ ಧ್ವನಿಯಾಗಬೇಕಿದ್ದ ತಹಸೀಲ್ದಾರ್ ಎಸ್.ಎ. ಚೌಗಲೆ ಜನ ಕಣ್ಣೀರಿಡುತ್ತಿದ್ದರೂ ಅವರತ್ತ ತಿರುಗಿ ನೋಡುತ್ತಿಲ್ಲ. ಇಂತಹ ನಿಷ್ಕ್ರೀಯ ತಹಸೀಲ್ದಾರ್ ನಮಗೆ ಬೇಡ ಕೂಡಲೇ ಅವರನ್ನು ಬೇರೆಡೆ ವರ್ಗಾಯಿಸಬೇಕು ಎಂದು ಶ್ರೀಕಾಂತ ಬುಳ್ಳಕ್ಕನವರ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಪುರಸಭೆ ಉಪಾಧ್ಯಕ್ಷೆ ಶಂಕ್ರಮ್ಮ ಅಂದಲಗಿ, ಹಿರಿಯ ಸದಸ್ಯರಾದ ಸುಭಾಸ ಚವ್ಹಾಣ, ಪರಶುರಾಮ ಸೊನ್ನದ, ಸದಾಶಿವಪ್ಪ ಕಂಕನವಾಡ, ಬಿ.ಎಸ್. ನವಲಗುಂದ, ಶಬ್ಬೀರ್ ಮಖಾನದಾರ, ಫಕ್ಕೀರೇಶ ಶಿಗ್ಗಾಂವಿ, ಮಂಜುನಾಥ ಬಡ್ಡಿ, ರೂಪಾ ಬನ್ನಿಕೊಪ್ಪ, ಪಕ್ಕೀರಮ್ಮ ಅಡರಕಟ್ಟಿ, ಮುಖ್ಯಾಧಿಕಾರಿ ಪಿ.ಎಂ. ಚನ್ನಪ್ಪನವರ ಮತ್ತಿತರರು ಇದ್ದರು.