ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಸಮರ್ಪಕ ನೀರು ಪೂರೈಕೆ: ಪ್ರತಿಭಟನೆ

Lingaraj Badiger
Updated On : 29 Apr 2014, 12:16 pm

ಬ್ಯಾಡಗಿ:  ಹತ್ತು ದಿನಗಳಿಂದ ಕುಡಿಯುವ ನೀರು ಪೂರೈಸದಿರುವ ಗ್ರಾಪಂ ಕಾರ್ಯವೈಖರಿ ಖಂಡಿಸಿ ಖಾಲಿ ಕೊಡದೊಂದಿಗೆ ಮಹಿಳೆಯರು ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರಲ್ಲದೆ, ಸುಮಾರು ಎರಡು ತಾಸುಗಳಿಗೂ ಹೆಚ್ಚು ಕಾಲ ಪಿಡಿಒಗೆ ದಿಗ್ಭಂದನ ಹಾಕಿದ ಘಟನೆ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಸೋಮವಾರ ನಡೆಯಿತು.
ಪ್ಲಾಟ್ ಸೇರಿದಂತೆ ಇತರ ಭಾಗದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮಹಿಳೆಯರು ಗ್ರಾಮಸ್ಥರೊಂದಿಗೆ ಗ್ರಾಪಂ ಎದುರು ಖಾಲಿ ಕೊಡಗಳನ್ನಿಟ್ಟು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವಿರುದ್ಧ ಪ್ರತಿಭಟಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರುದ್ರಮ್ಮ ನಂದಿಹಳ್ಳಿ, ಕುಡಿಯುವ ನೀರು ಪೂರೈಸುವಲ್ಲಿ ನಿರ್ಲಕ್ಷ್ಯಕ್ಕೆ ಕಾರಣವೇನು? ಕಳೆದ ಮೂರು ವರ್ಷಗಳಿಂದ ಗ್ರಾಮಸ್ಥರು ನೀರಿಲ್ಲದೇ ಪರದಾಡುತ್ತಿದ್ದಾರೆ. ಕುಡಿಯುವ ನೀರಿಗೆ ಆದ್ಯತೆ ನೀಡುವುದಾಗಿ ಹೇಳಿ ಸರ್ಕಾರ ಕೋಟಿಗಟ್ಟಲೆ ಹಣ ವ್ಯಯಿಸುತ್ತಿದೆ. ಹೀಗಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಜನರು ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಹಾಗಿದ್ದರೆ ಸರ್ಕಾರದ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು. ಬೆಳಗಾಗುತ್ತಲೇ ಮನೆಗೆಲಸಗಳನ್ನು ಬಿಟ್ಟು ನೀರಿಗಾಗಿ ರೈತರ ಹೊಲಗಳಿಗೆ ಅಲೆಯಬೇಕಾಗಿದೆ. ಬೇಸಿಗೆ ಎಂದು ತಿಳಿದಿದ್ದರೂ ಪಂಚಾಯಿತಿಯಿಂದ ಯಾವುದೇ ಮುಂಜಾಗ್ರತಾ ಕ್ರಮ ಜರುಗಿಸಿಲ್ಲ. ಸರ್ಕಾರ ಜನರಿಗೆ ಕೇವಲ ಸುಳ್ಳು ಭರವಸೆ ನೀಡಿ ಮೋಸವೆಸಗಿದೆ. ಕೂಡಲೇ ನೈತಿಕ ಹೊಣೆಹೊತ್ತು ಅಧ್ಯಕ್ಷರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಆಗ್ರಹಿಸಿದರು. ನಾಗಮ್ಮ ದೊಡ್ಡಲಿಂಗಣ್ಣನವರ ಮಾತನಾಡಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಗ್ರಾಮಕ್ಕೆ ಶಾಶ್ವತ ಪರಿಹಾರ ಸಿಗುವ ಭರವಸೆಯಲ್ಲಿದ್ದ ಜನರಿಗೆ ನಿರಾಸೆಯಾಗಿದ್ದು, ಆಣೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸರ್ಕಾರ ಕೈಬಿಟ್ಟಿರುವುದರಿಂದ ಗ್ರಾಮದ ಜನರಿಗೆ ಪ್ಲೋರೈಡ್ ನೀರೇ ಗತಿ ಎಂದು ದೂರಿದರು.
ಪಿಡಿಒ ಎತ್ತಂಗಡಿ ಮಾಡಿ: ಸಾವಕ್ಕ ನಾಯ್ಕರ ಮಾತನಾಡಿ, ಗ್ರಾಮದ ಹೊಸ ಬಡಾವಣೆಯನ್ನು ಗ್ರಾಪಂ ಆಡಳಿತ ಮಂಡಳಿ ಸಂಪೂರ್ಣ ನಿರ್ಲಕ್ಷಿಸಿದೆ. ಸುವರ್ಣ ಗ್ರಾಮ ಯೋಜನೆಯಡಿ ಗ್ರಾಮಕ್ಕೆ ಅನುದಾನ ಒದಗಿಸಿದ್ದರೂ ಪ್ಲಾಟ್‌ಗಳಲ್ಲಿನ ರಸ್ತೆಗಳು ಮಣ್ಣಿನಿಂದ ಕೂಡಿವೆ. ಮಳೆಗಾಲದಲ್ಲಿ ಸಹಜವಾಗಿ ನಡೆದಾಡಲು ಸಾಧ್ಯವಿಲ್ಲ. ರೈತರು ಕೂಲಿ ಕಾರ್ಮಿಕರು ಹೆಚ್ಚಾಗಿರುವ ಈ ಭಾಗದಲ್ಲಿ ಕೃಷಿ ಚಟುವಟಿಕೆ ಸ್ಥಗಿತಗೊಳ್ಳುವ ಭೀತಿಯಿದೆ. ತೆರಿಗೆ ಸಂಗ್ರಹ ಮಾಡುವ ಅಧಿಕಾರಿಗಳು ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಕರ್ತವ್ಯ ಲೋಪದ ಮೇಲೆ ಅಭಿವೃದ್ಧಿ ಅಧಿಕಾರಿಯನ್ನು ಎತ್ತಂಗಡಿ ಮಾಡುವಂತೆ ಆಗ್ರಹಿಸಿದರು.
ನೀರು ಪೂರೈಕೆ ಭರವಸೆ: ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ಪಿಡಿಒ ಪರಶುರಾಮ ಪೂಜಾರ, ಬೇಸಿಗೆಯ ದಿನಗಳಾಗಿದ್ದರಿಂದ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಹೀಗಾಗಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಪರ್ಯಾಯ ಕ್ರಮಕೈಗೊಳ್ಳಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದ್ದು, ಮಲೆನಾಡು ಅಭಿವೃದ್ಧಿ ಯೋಜನೆಯಡಿ ರು. 14 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಕೈಗೊಳ್ಳಲು ಅನುಮೋದನೆ ದೊರೆತಿದೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ದಿಗ್ಭಂಧನ ತೆರವುಗೊಳಿಸಿದರು.
ಗೌರವ್ವ ಕೊಲ್ಲಾಪುರ, ರತ್ನವ್ವ ಶಿರಗೂರು, ಗಂಗವ್ವ ಮರ್ದಾನಿ, ಶಿವಪ್ಪ ಎಲಿಗಾರ, ಗಂಗವ್ವ ಕರೇಮಣಿ, ಮಲ್ಲೇಶ ಉಜನಿ, ನಿಂಗಪ್ಪ ಕೋಣನವರ, ರಾಜು ಕಾಯ್ಕದ, ಮಲಕಪ್ಪ ಊದಗಟ್ಟಿ ಹನುಮಂತಪ್ಪ ಮಡ್ಡೇರ, ನಾಗಪ್ಪ ಬನ್ನಿಹಟ್ಟಿ, ಮಹದೇವಕ್ಕ ಕಾಯ್ಕದ ಹಾಗೂ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement