ಇಂದು ಬಿಜೆಪಿಯಿಂದ ನಗರಸಭೆಗೆ ಮುತ್ತಿಗೆ
ಹಾವೇರಿ: ನಗರದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಏ. 29ರಂದು ಬೆಳಗ್ಗೆ 10 ಗಂಟೆಗೆ ಬಿಜೆಪಿ ವತಿಯಿಂದ ನಗರಸಭೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ಆದ್ದರಿಂದ ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬಿಜೆಪಿ ಶಹರ ಘಟಕದ ಅಧ್ಯಕ್ಷ ಗುಡ್ಡನಗೌಡ ಅಂದಾನಿಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಡಿವ ನೀರಿಗಾಗಿ ಪ್ರತಿಭಟನೆ
ಹಾವೇರಿ: ನಗರದಲ್ಲಿ ಕುಡಿಯವ ನೀರಿಗಾಗಿ ಹಾಹಾಕಾರ ಎದ್ದಿದ್ದು, ಎಲ್ಲೆಂದರಲ್ಲಿ ಪ್ರತಿಭಟನೆಗಳು ನಡೆಯುತ್ತಲಿವೆ. ಇದಕ್ಕೆ ಸಾಕ್ಷಿಯಾಗಿ ಸೋಮವಾರ ನಗರದ ದೇಸಾಯಿ ಗಲ್ಲಿ ಸಾರ್ವಜನಿಕರು ನಗರಸಭೆಗೆ ಮುತ್ತಿಗೆ ಹಾಕಿ ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಕಳೆದ ಕೆಲ ದಿನಗಳ ಹಿಂದೆ ದೇಸಾಯಿ ಗಲ್ಲಿಗೆ ನೀರು ಪೂರೈಕೆ ಸೇರಿದಂತೆ ಅನೇಕ ಪ್ರಮುಖ ಸಮಸ್ಯೆಗಳ ಕುರಿತು ವಾರ್ಡ್ ಸದಸ್ಯರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಬೋರ್‌ವೆಲ್‌ನಿಂದ ಬರುವ ನೀರು ಸಹ ಬರುತ್ತಿಲ್ಲ. ಈ ಕಾರಣದಿಂದ ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ಕಳೆದ 2 ದಿನಗಳ ಹಿಂದೆ ದೇಸಾಯಿ ಗಲ್ಲಿಯ 2ನೇ ಕ್ರಾಸ್‌ನಲ್ಲಿ ವ್ಯಕ್ತಿಯೋರ್ವ ತನ್ನ ಮನೆಯ ಮುಂದೆ ಮತ್ತೊಂದು ಬೋರ್‌ವೆಲ್ ಪೈಪು ಒಡೆದು ತನ್ನ ಮನೆಗೆ ಮಾತ್ರ ನೀರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾನೆ. ಇದರಿಂದ ಓಣಿಯ ಬೇರೆ ಮನೆಗಳಿಗೆ ನೀರು ಬಾರದಂತಾಗಿದೆ. ಪೈಪ್ ಒಡೆದ ಬಗ್ಗೆ ಜನತೆ ವಿಚಾರಿಸಿದರೆ ಅವಾಚ್ಯ ಶಬ್ದಗಳಿಂದ ಬೈಯುತ್ತಾನೆ. ತಕ್ಷಣ ಒಡೆದ ಪೈಪ್ ಸರಿಪಡಿಸಿ ಸಮರ್ಪಕ ಬೋರ್‌ವೆಲ್ ನೀರು ಪೂರೈಸಬೇಕು. ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಬಸಮ್ಮ ಹೊಸೂರ, ಪ್ರವೀಣ ಬಣಕಾರ, ಬಸವರಾಜ ಜಕಿನಕಟ್ಟಿ, ಶಿವಬಸವ ಸಾತೇನಹಳ್ಳಿ, ಪ್ರೇಮಕ್ಕ ಚವಡಿ, ರಮೇಶ ಗುಂಡೇರ, ಅಜಿತ್, ರಾಜಶೇಖರ, ಕಮಲಬಾಯಿ ಡಾಂಗೆ, ರಾಂಪೂರೆ, ವಿರುಪಾಕ್ಷಪ್ಪ ನವಲಿ ಸೇರಿದಂತೆ ಇತರರು ಇದ್ದರು.