ಸಮರೋಪಾದಿಯಲ್ಲಿ ಟಿಸಿ ದುರಸ್ತಿ
ಶಿಗ್ಗಾಂವಿ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಬಿರುಗಾಳಿ ಸಹಿತ ಮಳೆಯ ಅವಗಡಕ್ಕೆ ಸಿಲುಕಿ ನೆಲಕ್ಕಪ್ಪಳಿಸಿದ ವಿದ್ಯುತ್ ಕಂಬ ಮಾರ್ಗ ಹಾಗೂ ಪರಿವರ್ತಕ ಕೇಂದ್ರಗಳ ದುರಸ್ತಿ ಕಾಮಗಾರಿಗಳನ್ನು ಹೆಸ್ಕಾಂ ಅಧಿಕಾರಿಗಳು ಹಾಗೂ ವಿವಿಧ ವಿದ್ಯುತ್ ಗುತ್ತಿಗೆದಾರರಿಂದ ಸಮರೋಪಾದಿಯಲ್ಲಿ ನಡೆಯುತ್ತಿರುವುದನ್ನು ಸಾರ್ವಜನಿಕರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕುಮಾರ ಆಚಾರ್ಯ ಮಾತನಾಡಿ, ಹೆಸ್ಕಾಂ ಅಧೀಕ್ಷಿತ ಎಂಜಿನಿಯರ್ ಹಾಗೂ ಕಾರ್ಯ ನಿರ್ವಾಹಕ ಎಂಜಿನಿಯರ್ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಕೆಲಸ ಕೈಗೊಂಡಿದ್ದು ಈ ಕಾರ್ಯಕ್ಕೆ ನಿಸ್ವಾರ್ಥದಿಂದ ಕೈಜೋಡಿಸಿದ ಸ್ಥಳೀಯ ವಿದ್ಯುತ್ ಗುತ್ತಿಗೆದಾರರ ಸಂಘ ಹೆಸ್ಕಾಂ ಸಿಬ್ಬಂದಿ ವರ್ಗದ ಹಾಗೂ ಸಾರ್ವಜನಿಕರ ಸ್ಪಂದನೆ ಸ್ಮರಿಸಿದರು.
ಎರಡು ಮೂರು ದಿನಗಳಲ್ಲಿ ಶಿಗ್ಗಾಂವಿ ಶಹರ ಹಾಗೂ ಗ್ರಾಮೀಣ ಭಾಗಗಳಲ್ಲಿ ದುರಸ್ತಿ ಕೆಲಸ ಪೂರ್ಣಗೊಳಿಸಿ ಸಮರ್ಪಕ ವಿದ್ಯುತ್ ಪೂರೈಸಲಾಗುವುದು ಎಂದರು. ಈ ಸಂದರ್ಭ ಹುಲಗೂರ ಶಾಖಾಧಿಕಾರಿ ಬಸವರಾಜ ಬಂಡಿವಡ್ಡರ, ಶಿಗ್ಗಾಂವಿ ಶಾಖಾಧಿಕಾರಿ ಪ್ರಕಾಶ ಬಂಕಾಪುರ, ಕೆ.ವಿ. ಕುಲಕರ್ಣಿ, ಬಂಕಾಪುರ ಶಾಖಾಧಿಕಾರಿ ಶಿವಾನಂದ ಹಾದಿಮನಿ, ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ ಮಣ್ಣಣವರ, ಎನ್.ಎಸ್. ಹಿರೇಮಠ, ಜೆ.ಎಸ್. ಹಿರೇಮಠ, ಸುರೇಶ ಬಿಸನಳ್ಳಿ, ಮೋಹನ್ ಗೊಂದಕರ, ಗುತ್ತಿಗೆದಾರರ ಕಾರ್ಮಿಕರು ಹಾಗೂ ಹೆಸ್ಕಾಂ ಸಿಬ್ಬಂದಿ ಇದ್ದರು.