ಕಳಪೆ ಕಾಮಗಾರಿ: ಜನತೆ ಆಕ್ರೋಶ
ಬ್ಯಾಡಗಿ: ಡಾಂಬರೀಕರಣ ಮಾಡಿದ ರಸ್ತೆ ಒಂದೇ ದಿನದಲ್ಲಿ ಕಿತ್ತುಹೋದ ಪರಿಣಾಮ ಆಕ್ರೋಶಗೊಂಡ ಸಾರ್ವಜನಿಕರು ರಸ್ತೆಯನ್ನೇ ಕಿತ್ತು ಪುರಸಭೆ ಅಧಿಕಾರಿಗಳೆದುರು ಪ್ರದರ್ಶಿಸಿದ ಘಟನೆ ಪಟ್ಟಣದ ಸಂಗಮೇಶ್ವರ ನಗರದಲ್ಲಿ ಬುಧವಾರ ನಡೆಯಿತು.
ಪಟ್ಟಣದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಳಪೆ ಕಾಮಗಾರಿ ವಿರುದ್ಧ ತಿರುಗಿ ಬಿದ್ದಿರುವ ಸಾರ್ವಜನಿಕರು ಇಂದು ಸಹ ಅಂತಹದ್ದೊಂದು ಪ್ರಕರಣ ಬೆಳಕಿಗೆ ತರುವ ಮೂಲಕ ಪುರಸಭೆಯ ಮತ್ತೊಂದು ಮುಖಕ್ಕೆ ಸಾಕ್ಷಿಯಾದರು.
ವಾರ್ಡ್ ನಂ.21 ಹಾಗೂ 22ರಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರನ ಕಳಪೆ ಕಾಮಗಾರಿಗೆ ಸಾರ್ವನಿಕರು ಮಂಗಳಾರತಿ ಮಾಡಿದರು. ಈ ಸಂದರ್ಭ ಮಾತನಾಡಿದ ಶ್ರೀನಿವಾಸ್ ಕುರುಕುಂದಿ, ನಿನ್ನೆ ಸಂಜೆ ಮಳೆ ಸುರಿಯುತ್ತಿದ್ದರೂ ಅದರಲ್ಲೇ ಡಾಂಬರೀಕರಣ ಮಾಡಲು ಮುಂದಾದಾಗ ಸಾರ್ವಜನಿಕರೆಲ್ಲರೂ ವಿರೋಧ ವ್ಯಕ್ತಪಡಿಸಿದ್ದೇವೆ. ಹೀಗಿದ್ದರೂ ಕ್ಯಾರೇ ಎನ್ನದ ಗುತ್ತಿಗೆದಾರ ರಘು ಬಸವರಾಜ ಮಳ್ಳಪ್ಪನವರ ಮಾತ್ರ ಡಾಂಬರೀಕರಣ ಮಾಡಿದ್ದಾರೆ. ಅದಕ್ಕೂ ಮುನ್ನ ಒಂದು ಬಾರಿಯೂ ರೂಲ್ ಮಾಡಿಲ್ಲ. ಈ ಕುರಿತು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ ಎಂದರು.
ಮಂಜುನಾಥ ಪೂಜಾರ ಮಾತನಾಡಿ, ವಾರ್ಡ್ ಸದಸ್ಯೆ ದ್ರಾಕ್ಷಾಯಣಮ್ಮ ಪಾಟೀಲ ಅವರಿಗೆ ದೂರು ಸಲ್ಲಿಸಿದರೂ ಗುತ್ತಿಗೆದಾರನ ಮೇಲೆ ಕ್ರಮ ಜರುಗಿಸುವಲ್ಲಿ ವಿಫಲವಾಗಿದ್ದಾರೆ. ಇದರಿಂದ ವಾರ್ಡ್ ಸದಸ್ಯರು ಗುತ್ತಿಗೆದಾರನ ಜೊತೆ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಬೇಕಲ್ಲದೇ ಮತ್ತೊಮ್ಮೆ ಡಾಂಬರೀಕರಣ ಮಾಡಿಸುವಂತೆ ಆಗ್ರಹಿಸಿದರು. ಮಹ್ಮದ್ ಜಿನ್ನಾ ಹಲಗೇರಿ ಮಾತನಾಡಿದರು. ಕಾಮಗಾರಿ ಪರಿಶೀಲನೆಗೆ ಹಿರಿಯ ತಾಂತ್ರಿಕ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಬರುವ ಆಡಳಿತ ಮಂಡಳಿ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದಲ್ಲದೇ ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡುವ ಮೂಲಕ ಮುಖ್ಯಾಧಿಕಾರಿಯು ಆಕ್ರೋಶಭರಿತ ಸಾರ್ವಜನಿಕರನ್ನು ಸಮಾಧಾನ ಪಡಿಸಿದರು. ಅಲ್ತಾಫ್ ಆಡೂರ, ಪಾಂಡು ಸುತಾರ, ಶಫಿಸಾಬ್ ದೇಸೂರ, ರಾಜು ಅಂಗಡಿ, ಖಾದರ್ ಆಡೂರ ಇದ್ದರು.ನಬಿಸಾಬ್
ಕ್ರಮ ಜರುಗಿಸುವ ಭರವಸೆ
ಸ್ಥಳಕ್ಕಾಗಮಿಸಿದ ಪುರಸಭೆ ಮುಖ್ಯಾಧಿಕಾರಿ ವೀರೇಶಕುಮಾರ ಹಾಗೂ ಕಿರಿಯ ಅಭಿಯಂತರ ನಿರ್ಮಲನಾಯ್ಕ್, ಡಾಂಬರೀಕರಣ ನಡೆದ ಸ್ಥಳಕ್ಕೆ ಗುತ್ತಿಗೆದಾರನನ್ನು ಕರೆಸಿಕೊಂಡರಲ್ಲದೇ, ಸಾರ್ವಜನಿಕರಿಗೆ ನೀವೇ ಉತ್ತರಿ ಸುವಂತೆ ತಾಕೀತು ಮಾಡಿದರು. ಸಮಜಾಯಿಷಿ ನೀಡಲು ಗುತ್ತಿಗೆದಾರ ರಘು ಮಳ್ಳಪ್ಪನವರ ಮುಂದಾದಾಗ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು.
ರಸ್ತೆ ತಡೆದು ಜನತೆ ಪ್ರತಿಭಟನೆ
ಶಿಗ್ಗಾಂವಿ: ಪಟ್ಟಣದಲ್ಲಿ ಮಂಗಳವಾರ ಹಳೆ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಕಲ್ಲು ಮಣ್ಣು ಹಾಕಿ ರೋಡ್ ಬಂದ್ ಮಾಡಿದ್ದರಿಂದ ಅಕ್ರೋಶಗೊಂಡ ಪಟ್ಟಣದ ಆಟೋ ಚಾಲಕರು ಹಾಗೂ ತಾಲೂಕು ಜಯಕರ್ನಾಟಕ ಸಂಘಟನಾ ಅಧ್ಯಕ್ಷ ದುರಗಪ್ಪ ವಡ್ಡರ ನೇತೃತ್ವದಲ್ಲಿ ಕಾರ್ಯಕರ್ತರು ಸುಮಾರು 2 ಗಂಟೆಗೂ ಅಧಿಕ ಸಮಯ ರಸ್ತೆತಡೆ ನಡೆಸಿ, ಪ್ರತಿಭಟಿಸಿದ ಘಟನೆ ಜರುಗಿತು.
ಹಲವಾರು ತಿಂಗಳುಗಳಿಂದ ಹಳೆ ಬಸ್ನಿಲ್ದಾಣದಿಂದ ಹೊಸ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ ಕಾಮಗಾರಿಯನ್ನು ಪುರಸಭೆಯ ನಗರೋತ್ಥಾನ ಯೋಜನೆಯಡಿಯಲ್ಲಿ ನಡೆಯುತ್ತಿದ್ದು ಸರಿಯಾಗಿ ರಸ್ತೆ ನಿರ್ಮಾಣ ಮಾಡುತ್ತಿಲ್ಲ. ಕಡಿಮೆ ಪ್ರಮಾಣದ ಸಿಮೆಂಟ್ ಹಾಕಿ ಹೆಚ್ಚಿನ ಮರಳು ಹಾಗೂ ಕಡಿಯನ್ನು ಕಳಪೆಯಾಗಿ ಮಾಡಿ, ಸಿಮೆಂಟ್ ಕೆಲಸವಾದರೂ ಅದಕ್ಕೆ ಸರಿಯಾಗಿ ನೀರನ್ನು ಹಾಕದೇ ದಾರಿ ಮಧ್ಯದಲ್ಲಿದ್ದ ವ್ಯಾಪಾರ ಮಳಿಗೆ, ದೊಡ್ಡ ದೊಡ್ಡ ಕಿರಾಣಿ ಅಂಗಡಿಗಳಿಗೆ ಗ್ರಾಹಕರಿಗೆ ಕಷ್ಟವಾಗಿ ಪರಿಣಿಮಿಸಿದ್ದು, ನಿತ್ಯ ಒಂದಿಲ್ಲೊಂದು ರೀತಿಯಿಂದ ಸಾರ್ವಜನಿಕರಿಗೆ ಹಾಗೂ ದಾರಿ ಹೋಕರಿಗೆ ಕಿರಿ ಕಿರಿಯಾಗುತ್ತಿದ್ದರೂ ಸಂಬಂಧಪಟ್ಟವರು ಇತ್ತ ಗಮನಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ.
ಆಟೋ ಚಾಲಕರು ಹಾಗೂ ಜಯಕರ್ನಾಟಕ ಸಂಘಟನಾ ಕಾರ್ಯಕರ್ತರು ರಸ್ತೆತಡೆ ನಡೆಸಿ, ಸವಣೂರು ಉಪ ವಿಭಾಗಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಅವರಿಗೆ ಮನವಿ ಅರ್ಪಿಸಿದರು. ನಂತರ ವಿಪ ಸದಸ್ಯ ಸೋಮಣ್ಣ ಬೇವಿನಮರದರ ನೇತೃತ್ವದಲ್ಲಿ ಆಟೋ ಚಾಲಕರು ಹಾಗೂ ಜಯಕರ್ನಾಟಕ ಸಂಘಟನಾ ಕಾರ್ಯಕರ್ತರ ಜತೆಗೆ ಕಾಮಗಾರಿ ವೀಕ್ಷಣೆ ಮಾಡಿದ ತಾಲೂಕು ಕಾರ್ಯನಿರ್ವಾಹಕಾಧಿಕಾರಿ ಸಂಭಂದಪಟ್ಟ ಅಧಿಕಾರಿಗಳ ಜತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಪುರಸಭೆ ಸದಸ್ಯರಾದ ಸುಭಾಸ ಚೌಹಾಣ, ಫಕ್ಕಿರೇಶ ಶಿಗ್ಗಾಂವಿ, ಶಿವಪ್ರಕಾಶ ಸುರಗೀಮಠ, ಪರಶುರಾಮ ಸೊನ್ನದ ಹಾಗೂ ಆಟೋ ಚಾಲಕ ಸಂಘದ ಅಧ್ಯಕ್ಷ ಗುರನಗೌಡ ದುಂಡಿಗೌಡ್ರ, ಎಲ್ಲ ಆಟೋ ಚಾಲಕರು, ಪ್ರಮುಖರಾದ ಜಯಣ್ಣ ಹೆಸರೂರ, ಜಗದೀಶ ಬನ್ನಿಕೊಪ್ಪ, ಜಯಕರ್ನಾಟಕ ಸಂಘದ ಸದಸ್ಯರಾದ ಹನುಮಂತಪ್ಪ ಬಂಡಿವಡ್ಡರ, ರವಿ ಓಲೇಕಾರ, ಈರಪ್ಪ ಹಳ್ಳೆಪ್ಪನವರ, ಗದಿಗೆಪ್ಪ ಶಿಂಗಾಪುರ ಅನೇಕರು ಉಪಸ್ಥಿತರಿದ್ದರು.