ಪ್ರಾಣಿಗಳ ಮೇಲೆ ದಯೆ ಇರಲಿ
ಶಿಗ್ಗಾಂವಿ: ಪ್ರಾಣಿಗಳಿಗೆ ದಯೆ ತೋರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಪ್ರಾಣಿಗಳು ಪರಿಸರದ ಅವಿಭಾಜ್ಯ ಅಂಗ. ಅವುಗಳನ್ನು ನಾವು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಡಾ. ಎಸ್.ಎಂ. ಶಿವಪ್ರಕಾಶ ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರನ ಅಂಗಸಂಸ್ಥೆ ಪಶುಸಂಗೋಪನಾ ಪಾಲಿಟೆಕ್ನಿಕ್ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಹಾವೇರಿ, ಕರ್ನಾಟಕ ಪಶುವೈದ್ಯಕೀಯ ಪರಿಷತ್ತು, ಬೆಂಗಳೂರು, ಕರ್ನಾಟಕ ಪಶುವೈದ್ಯರ ಸಂಘ, ಹಾವೇರಿ ಮತ್ತು ಧಾರವಾಡ ಹಾಲು ಒಕ್ಕೂಟ ಇವರ ಆಶ್ರಯದಲ್ಲಿ ವಿಶ್ವ ಪಶುವೈದ್ಯಕೀಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಾವೇರಿಯ ಉಪನಿರ್ದೇಶಕ ಡಾ. ಎಸ್.ಜಿ. ಕೋನಾಪುರ, ಪ್ರಾಣಿ ಕಲ್ಯಾಣ ವಿಷಯಾಧಾರಿತ ವಿಶ್ವ ಪಶುವೈದ್ಯಕೀಯ ದಿನಾಚರಣೆಯನ್ನು ಕೊಂಡಾಡಿದರು. ಪಾಲಿಟೆಕ್ನಿಕ್ ಪ್ರಾಚಾರ್ಯ ಡಾ. ಶಿವಕುಮಾರ ರಡ್ಡೇರ ಮಾತನಾಡಿ, ವಿಶ್ವ ಪಶುವೈದ್ಯಕೀಯ ದಿನಾಚರಣೆಯ ಮಹತ್ವ ಮತ್ತು ಔಚಿತ್ಯದ ಬಗ್ಗೆ ವಿವರಿಸಿದರು. ಪಾಲಿಟೆಕ್ನಿಕ್‌ನಲ್ಲಿ ಪಶುವೈದ್ಯರಿಗೆ ಮತ್ತು ರೈತರಿಗೆ ನೀಡಲಾಗುವ ವಿವಿಧ ಸೇವೆಗಳ ಬಗ್ಗೆ ವಿವರ ನೀಡಿದರು.
ಈ ಸಂದರ್ಭದಲ್ಲಿ ಪ್ರಾಣಿ ಕಲ್ಯಾಣ ವಿದ್ಯಮಾನಗಳು ಮತ್ತು ದೃಷ್ಟಿಕೋನ ವಿಷಯದ ಮೇಲೆ ಜಿಲ್ಲಾಮಟ್ಟದ ತಾಂತ್ರಿಕ ಸಮ್ಮೇಳನ ಏರ್ಪಡಿಸಲಾಗಿತ್ತು. ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯದ ಡಾ. ಎಸ್.ಬಿ. ಪ್ರಸನ್ನರವರು ಪ್ರಾಣಿ ಕಲ್ಯಾಣದ ವಿಷಯಗಳು, ಕಾಯ್ದೆಗಳು ಮತ್ತು ಜಾಗತಿಕ ಪರಿಸ್ಥಿತಿಯ ಬಗ್ಗೆ ಉಪನ್ಯಾಸ ನೀಡಿದರು. ಪಶುಸಂಗೋಪನಾ ಪಾಲಿಟೆಕ್ನಿಕ್‌ನ ಡಾ. ಚೇತನ ಕೆ.ಪಿ.ಯವರು ಉಪನ್ಯಾಸದಲ್ಲಿ ಪ್ರಾಣಿ ಕಲ್ಯಾಣದಲ್ಲಿ ಪಶುವೈದ್ಯರ ಪಾತ್ರದ ಬಗ್ಗೆ ಹೇಳಿದರು.
ಹಾವೇರಿ ಜಿಲ್ಲೆಯ 45 ಪಶುವೈದ್ಯರು, ಪಶುಸಂಗೋಪನಾ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸೇರಿದಂತೆ 120 ಜನರು ಪಾಲ್ಗೊಂಡಿದ್ದರು. ಡಾ. ಶಂಭುಲಿಂಗಪ್ಪ, ಬಿ.ಜಿ, ಡಾ. ಗಿರೀಶ ಬಿ.ಸಿ. ಕಾರ್ಯಕ್ರಮ ನಡೆಸಿಕೊಟ್ಟರು. ಸವಣೂರಿನ ಸಹಾಯಕ ನಿರ್ದೇಶಕ ಡಾ. ಬಸವರಾಜ ಜಲ್ಲೇರ ವಂದಿಸಿದರು.