ಕಾಂಗ್ರೆಸ್ ಅಂಗವಿಕಲರ ಸರ್ಕಾರ
ಹಾವೇರಿ: ಕಾಂಗ್ರೆಸ್ ಒಂದು ಅಂಗವಿಕಲರ ಸರ್ಕಾರ. ಕಿವಿ ಕೇಳದ, ನಡೆಯಲು ಬಾರದ, ಕಣ್ಣು ಕಾಣದ ಸಚಿವರು ರಾಜ್ಯ ಸರ್ಕಾರದಲ್ಲಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸರ್ಕಾರ ಆಡಳಿತಕ್ಕೆ ಬಂದು 9 ತಿಂಗಳಾದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ವಿಧಾನಸಭೆಯಲ್ಲಿ ಸಚಿವರ ಹಾಜರಾತಿಯೂ ಸರಿಯಾಗಿಲ್ಲ. ಯಾವುದಾದರೂ ಪ್ರಶ್ನೆಯನ್ನು ಶಾಸಕರು ಕೇಳಿದರೆ ಅದಕ್ಕೆ ಉತ್ತರಿಸಬೇಕಾದ ಸಚಿವರು ಗೈರು ಹಾಜರಾಗಿರುತ್ತಾರೆ. ಕೆಲ ಸಚಿವರಿಗೆ ನಡೆದಾಡಲು ಬರುವುದಿಲ್ಲ. ಇನ್ನು ಕೆಲವರಿಗೆ ಹೇಳಿದ್ದು ಕೇಳುವುದೇ ಇಲ್ಲ. ಕೆಲವರಿಗೆ ಕಣ್ಣು ಸಹ ಕಾಣುವುದಿಲ್ಲ ಎಂದರು.
ಹಿಡಿಶಾಪ ಹಾಕುತ್ತಿದ್ದಾರೆ: ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗದವರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಕಬ್ಬಿಗೆ ಸೂಕ್ತ ಬೆಲೆ ಕೇಳಿದ ರೈತರನ್ನು ಜೈಲಿಗೆ ಕಳಿಸುತ್ತಿದೆ. ರೈತರನ್ನು ಜೈಲಿಗೆ ಕಳಿಸಿದ ಸರ್ಕಾರ ಅಧಿಕಾರದಲ್ಲಿ ಉಳಿಯುವುದು ಸಾಧ್ಯವಿಲ್ಲ. ಉತ್ತಮ ಆಡಳಿತ ನೀಡುತ್ತದೆ ಎಂದು ಯಾರು ನಂಬಿ ಕಾಂಗ್ರೆಸ್‌ನ್ನು ಆಯ್ಕೆ ಮಾಡಿ ಕಳಿಸಿದ್ದರೂ ಅವರೇ ಇಂದು ಸರ್ಕಾರಕ್ಕೆ ಹಿಡಿಶಾಪ ಹಾಕುವ ಸ್ಥಿತಿ ಬಂದಿದೆ ಎಂದು ದೂರಿದರು.
ಕಬ್ಬಿಗೆ ಸರ್ಕಾರವೇ ರು. 2,500 ದರ ನಿಗದಿ ಮಾಡಿದ್ದರೂ ಅದನ್ನು ಸಕ್ಕರೆ ಕಾರ್ಖಾನೆಗಳು ಪಾಲಿಸುತ್ತಿಲ್ಲ. ಆದರೂ ಸರ್ಕಾರ ಸುಮ್ಮನೆ ಕುಳಿತಿದೆ. ಪ್ರತಿ ಟನ್ ಕಬ್ಬಿನಿಂದ ಸರ್ಕಾರಕ್ಕೆ ರು. 3,700 ಆದಾಯವಿದ್ದು, ಅದರಲ್ಲಿ ರು. 1 ಸಾವಿರ ಪ್ರತಿ ಟನ್ ಕಬ್ಬಿಗೆ ಪ್ರೋತ್ಸಾಹ ಧನವನ್ನಾಗಿ ನೀಡಬೇಕು. ಪಡಿತರ ಮೂಲಕ ಉತ್ತರ ಕರ್ನಾಟಕದ ಕುಟುಂಬಗಳಿಗೆ ಅಕ್ಕಿ ಜತೆಗೆ ಜೋಳ ನೀಡಬೇಕು. ಇದರಿಂದ ಜೋಳ ಬೆಳೆಯುವ ರೈತರಿಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದರು.
ಬಿಟಿ ಬೆಳೆಹಾನಿಗೆ ಪರಿಹಾರ ಕೊಡಿ: ಕಳಪೆ ಬಿಟಿಹತ್ತಿ ಬೀಜದಿಂದ ಒಟ್ಟು ರು. 300 ಕೋಟಿಗಳಷ್ಟು ಬೆಳೆಹಾನಿ ಸಂಭವಿಸಿದ್ದು, ಸರ್ಕಾರ ಮಹಿಕೋ ಕಂಪನಿಯೊಂದಿಗೆ ಶಾಮೀಲಾಗಿ ಬರೀ ರು. 27 ಕೋಟಿಯಷ್ಟು ಬೆಳೆಹಾನಿಯಾಗಿರುವ ವರದಿ ನೀಡಿದೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ. ಬೆಳೆಹಾನಿಯಾಗಿರುವ ರೈತರ ಪ್ರತಿ ಎಕರೆಗೆ ರು. 15 ಸಾವಿರ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.
23ರಂದು ತುಮಕೂರನಲ್ಲಿ ಸಮಾವೇಶ: ಫೆ. 23ರಂದು ತುಮಕೂರಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದ್ದು, ಪ್ರತಿ ವಿಧಾನಸಭೆ ಕ್ಷೇತ್ರದಿಂದ 300 ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿಯೇ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗುತ್ತಿದೆ ಎಂದರು. ವಿಪ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಭೋಜರಾಜ ಕರೂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಡಾ. ಮಲ್ಲೇಶಪ್ಪ ಹರಿಜನ, ನಾಗೇಂದ್ರ ಕಟಕೋಳ, ಪ್ರಭು ಹಿಟ್ನಳ್ಳಿ, ಮಂಜುನಾಥ ಓಲೇಕಾರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಕೇಜ್ರಿವಾಲ್ ಅಗ್ಗದ ಪ್ರಚಾರ: ದೆಹಲಿ ಸಿಎಂ ಕೇಜ್ರಿವಾಲ್ ಅಗ್ಗದ ಪ್ರಚಾರಕ್ಕಾಗಿ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಸಿಎರಂಥ ಶ್ರೇಷ್ಠ ಹುದ್ದೆಯಲ್ಲಿದ್ದವರು ಅಗ್ಗದ ಪ್ರಚಾರಕ್ಕೆ ಮುಂದಾಗಿರುವುದು ವಿಷಾದಕರ. ಅವರಿಗೆ ತಾಕತ್ತು, ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ಪುರಾವೆಗಳಿದ್ದರೆ ನ್ಯಾಯಾಲಯಕ್ಕೆ ನೀಡಬೇಕು. ಅದು ಬಿಟ್ಟು ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ಮುಂದಾಗಿರುವುದು ದೇಶಕ್ಕೆ ಮಾರಕವಾಗಿದೆ ಎಂದರು.