ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ನಾಶ
ಗುತ್ತಲ: ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ನಾಶವಾಗುತ್ತಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿರುವುದರಿಂದ ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಪ್ರತಿಯೊಬ್ಬರೂ ಮುಕ್ತವಾಗಬೇಕೆಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲೆಕ್ಕ ಪರಿಶೋಧಕ ಶಂಭುಲಿಂಗ ಹಿರೇಮಠ ಅಭಿಪ್ರಾಯಪಟ್ಟರು. ಸಮೀಪದ ಟಾಟಾ ಮಣ್ಣೂರು ಗ್ರಾಮದಲ್ಲಿ ಇತ್ತೀಚೆಗೆ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ವಿಜಯಲಕ್ಷ್ಮೀ ತಳವಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ವಿಪರೀತವಾಗಿ ಕಂಡು ಬರುತ್ತಿದ್ದು, ಪ್ರಜ್ಞಾವಂತರೇ ಹೆಚ್ಚು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಹೇಳಿದರು. ನಂತರ ಕಾಲೋನಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಆತ್ಮರಕ್ಷಣೆಗೆ ಮಹಿಳೆಯರು ಧೈರ್ಯಶಾಲಿಗಳಾಗಿ
ರಾಣಿಬೆನ್ನೂರು: ಮಹಿಳೆಯರು ತಮ್ಮ ಆತ್ಮ ರಕ್ಷಣೆಗಾಗಿ ಧೈರ್ಯಶಾಲಿಗಳಾದಾಗ ಮಾತ್ರ ನಿತ್ಯ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ತಡೆಯಲು ಸಾಧ್ಯವೆಂದು ಪೊಲೀಸ್ ಉಪ ಅಧೀಕ್ಷಕ ಶಿವಶಂಕರ ಗಡಾದ ಹೇಳಿದರು. ಕೆಎಲ್ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಹೆಣ್ಣು ಮಕ್ಕಳ ಪದವಿಪೂರ್ವ ಕಾಲೇಜು ಹಾಗೂ ರಾಜರಾಜೇಶ್ವರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೌರ್ಜನ್ಯಗಳ ನಿಯಂತ್ರಣಕ್ಕೆ ಪೊಲೀಸರೊಂದಿಗೆ ಸಹಕರಿಬೇಕು ಎಂದರು. ಕೆಎಲ್ಇ ಶಿಕ್ಷಣ ಸಂಸ್ಥೆ ಸ್ಥಾನಿಕ ಆಡಳಿತ ಮಂಡಳಿ ಉಪಾಧ್ಯಕ್ಷ ವಿ.ಪಿ. ಲಿಂಗನಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಪಟ್ಟಣಶೆಟ್ಟಿ ಇದ್ದರು.
ಸೈಕಲ್ ಸದ್ಬಳಕೆ ಮಾಡಿಕೊಳ್ಳಿ: ಕೋಳಿವಾಡ
ರಾಣಿಬೆನ್ನೂರು: ಶೈಕ್ಷಣಿಕಾಭಿವೃದ್ಧಿಗಾಗಿ ಸರ್ಕಾರದ ಯೋಜನೆಯಲ್ಲಿ ಉಚಿತವಾಗಿ ನೀಡುವ ಸೈಕಲ್ನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ದುರುಪಯೋಗ ಪಡಿಸಿಕೊಳ್ಳಬಾರದೆಂದು ಶಾಸಕ ಕೆ.ಬಿ. ಕೋಳಿವಾಡ ಹೇಳಿದರು. ನಗರದ ಗುತ್ತಲ ರಸ್ತೆಯಲ್ಲಿರುವ ವೀರಮದಕರಿ ನಾಯಕ ಹೆಣ್ಣು ಮಕ್ಕಳ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್ಗಳನ್ನು ವಿತರಿಸಿ ಮಾತನಾಡಿದರು. ಸಂಸ್ಥಾಪಕ ಅಧ್ಯಕ್ಷ, ನಿವೃತ್ತ ಶಿಕ್ಷಕರಾದ ಎಚ್.ಡಿ. ಬಡಕರಿಯಪ್ಪನವರ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಬಿಇಒ ಕೆ. ಲಕ್ಷ್ಮಣ, ಹೋಬಾ ನಾಯ್ಕ, ಪ್ರಕಾಶ ಜೈನ್, ವಿಷ್ಣು ಪೂಜಾರ, ಗೂಳಪ್ಪ ನರಸಗೊಂಡರ, ಬಾಬುಗೌಡ ಪಟೇಲ ಇತರರಿದ್ದರು.
ಪಡಿತರ ಖಾತ್ರಿ ಯೋಜನೆ ಜಾರಿಗೆ
ಹಾವೇರಿ: ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಡಿತರ ಖಾತ್ರಿ ಯೋಜನೆ ಫೆ. 1ರಿಂದ ಆರಂಭವಾಗಿದ್ದು, ಪಡಿತರ ಚೀಟಿದಾರರು ಪ್ರತಿ ತಿಂಗಳ 1ನೇ ತಾರೀಖಿನಿಂದಲೇ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ, ಗೋದಿ, ಸಕ್ಕರೆ ಪಡೆಯಬಹುದಾಗಿದೆ. ಪ್ರತಿ ತಿಂಗಳು 1ರಿಂದ 10ರ ವರೆಗೆ ಬೆಳಗ್ಗೆ 8ರಿದ ರಾತ್ರಿ 8ರ ವರೆಗೆ ನ್ಯಾಯಬೆಲೆ ಅಂಗಡಿಗಳು ಕಾರ್ಯ ನಿರ್ವಹಿಸುತ್ತವೆ. ರಾಷ್ಟ್ರೀಯ ರಜಾದಿನ ಹೊರತುಪಡಿಸಿ ದಿ. 11ರಿಂದ ತಿಂಗಳಾಂತ್ಯದವರೆಗೆ ಬೆಳಗ್ಗೆ 8ರಿಂದ ಮಧ್ಯಾಹ್ನ 12ರ ವರೆಗೆ, ಸಂಜೆ 4ರಿಂದ ರಾತ್ರಿ 8ರ ವರೆಗೆ ಮಂಗಳವಾರ ರಜಾದಿನ ಹೊರತುಪಡಿಸಿ ಕಾರ್ಯನಿರ್ವಹಿಸಲಿವೆ. ಸದರಿ ಯೋಜನೆ ಜಿಲ್ಲೆಯಲ್ಲಿ ಫೆ. 1ರಿಂದ ಎಲ್ಲ ತಾಲೂಕುಗಳಲ್ಲಿ ಯಶಸ್ವಿಯಾಗಿ ಜಾರಿಯಾಗಿದೆ. ಪಡಿತರ ವಿತರಣೆಯಲ್ಲಿ ದೂರುಗಳಿದ್ದಲ್ಲಿ 1967ಕ್ಕೆ ಕರೆ ಮಾಡಿ ದೂರು ನೀಡುವಂತೆ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ತಿಳಿಸಿದರು.
ಶಿಕ್ಷಣದಿಂದ ಕಲಿಕೆಯಲ್ಲಿ ಅಭಿವೃದ್ಧಿ: ಹೊರಟ್ಟಿ
ರಾಣಿಬೆನ್ನೂರು: ಹಿಂದಿನ ಕಾಲದ ಶಿಕ್ಷಣಕ್ಕೂ ಇಂದಿನ ಶಿಕ್ಷಣ ವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸವಿದ್ದು, ಪ್ರಸಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ತಾಂತ್ರಿಕ ಬದಲಾವಣೆಯಾಗಿರುವುದರಿಂದ ಮಕ್ಕಳು ಕಲಿಕೆಯಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಲು ಸಹಕಾರಿಯಾಗಿದೆ ಎಂದು ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹೇಳಿದರು. ಕರ್ನಾಟಕ ಮಾಧ್ಯಮಿಕ ಶಾಲೆ ನೌಕರರ ಸಂಘದ ತಾಲೂಕು ಘಟಕದಿಂದ ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ನಿವೃತ್ತ ನೌಕರರಿಗೆ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಚ್.ಎಂ. ನಂದಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸುಭಾಸ ವಿ. ಸಾವುಕಾರ ಇತರರಿದ್ದರು.
ನೂರಾರು ರೈತರಿಂದ ಅಣಕು ಪ್ರದರ್ಶನ
ಹಾವೇರಿ: ತಮಟೆ ಬಾರಿಸುತ್ತ ಚಟ್ಟದಲ್ಲಿ ಸಿದ್ದರಾಮಯ್ಯ ಪ್ರತಿಕೃತಿ ಮೆರವಣಿಗೆ, ಪ್ರತಿಕೃತಿ ದಹನ ವೇಳೆ ಮಡಕೆ ಒಡೆಯುವುದು, ಲಬೋ ಲಬೋ ಎಂದು ಕೂಗಿ ಕೇ ಕೇ ಹಾಕುವುದು ಸೇರಿದಂತೆ ಎಲ್ಲ ವಿಧಿ ವಿಧಾನಗಳೊಂದಿಗೆ ಅಣಕು ಶವಸಂಸ್ಕಾರ ಶನಿವಾರ ಜಿಲ್ಲೆಯ ನೂರಾರು ರೈತರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯಿತು. ಕಳಪೆ ಬಿಟಿ ಹತ್ತಿ ಬೀಜದಿಂದ ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶನಿವಾರ 6ನೇ ದಿನಕ್ಕೆ ಕಾಲಿರಿಸಿ ರೈತರು ವಿಶಿಷ್ಟ ಪ್ರತಿಭಟನೆ ಮೂಲಕ ಗಮನ ಸೆಳೆದರು.
ಭಾರತ ದೇಶದಲ್ಲಿ ಶಿಕ್ಷಣ ದುರುಪಯೋಗ: ನಿಜಗುಣ ಶ್ರೀ
ಗುತ್ತಲ: ಶಿಕ್ಷಣ ಕ್ಷೇತ್ರದಲ್ಲಿ ಭಾರತದ ಹಿರಿಮೆ ಹಿಮಾಲಯದಷ್ಟು ಎತ್ತರವಾಗಿದೆ. ಆದರೆ, ಅದೇ ಶಿಕ್ಷಣ ವಿವಿಧ ಉದ್ದೇಶಗಳಿಗಾಗಿ ದೇಶದಲ್ಲಿ ದುರುಪಯೋಗವಾಗುತ್ತಿದೆ ಎಂದು ಹತ್ತಿಮತ್ತೂರಿನ ವಿರಕ್ತಮಠದ ನಿಜಗುಣ ಸ್ವಾಮೀಜಿ ವಿಷಾದಿಸಿದರು. ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಗನಬಸವ ವಿದ್ಯಾನಿಕೇತನ ಕನ್ನಡ ಕಾನ್ವೆಂಟ್ ಶಾಲೆಯ 14ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಂಗನಬಸವ ಶ್ರೀಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವರ್ತಕರಾದ ಕೊಟ್ರಯ್ಯ ಕೋವಳ್ಳಿಮಠ, ಸಿಆರ್ಪಿ ಎಂ.ಬಿ. ಕೋಡಬಾಳ, ಫಕ್ಕೀರಯ್ಯ ಕುಲಕರ್ಣಿ ಮತ್ತಿತರರು ಇದ್ದರು.
ನಾಳೆ ಯಾತ್ರಿ ನಿವಾಸ ಉದ್ಘಾಟನೆ
ಹಾವೇರಿ: ಪ್ರವಾಸೋದ್ಯಮ ಇಲಾಖೆ, ಹಾವೇರಿ ಹಾಗೂ ನಿರ್ಮಿತಿ ಕೇಂದ್ರದ ಆಶ್ರಯದಲ್ಲಿ ಸವಣೂರು ನಗರದ ದೊಡ್ಡಹುಣಸೇ ಕಲ್ಮಠ ಆವರಣದಲ್ಲಿ ನಿರ್ಮಿಸಿರುವ ನೂತನ ಯಾತ್ರಿ ನಿವಾಸದ ಉದ್ಘಾಟನಾ ಸಮಾರಂಭ ಫೆ. 3ರಂದು ಬೆಳಗ್ಗೆ 11 ಗಂಟೆಗೆ ಜರುಗಲಿದೆ. ದೊಡ್ಡಹುಣಸೇ ಕಲ್ಮಠದ ಚನ್ನಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಶಾಸಕ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಸವಣೂರು ಪುರಸಭೆ ಅಧ್ಯಕ್ಷರಾದ ಮೆಹಬೂಬ ಸೌದಾಗರ ಅವರು ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಕ್ಕರೆ, ಮುಜರಾಯಿ, ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ, ಸಂಸದ ಪ್ರಹ್ಲಾದ ಜೋಶಿ, ವಿಪ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಸೋಮಣ್ಣ ಬೇವಿನಮರದ, ನಾಗರಾಜ ಛಬ್ಬಿ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಉಪಾಧ್ಯಕ್ಷೆ ಶೋಭಾ ನಿಸ್ಸೀಮಗೌಡ್ರ, ತಾಪಂ ಅಧ್ಯಕ್ಷ ರಮೇಶ ಅರಗೋಳ ಭಾಗವಹಿಸುವರೆಂದು.
ಒಗ್ಗಟ್ಟಿನಿಂದ ದೇಶ ಕಟ್ಟಬೇಕು: ಉಪನ್ಯಾಸಕ ಎನ್. ಹರೀಶ್
ಬ್ಯಾಡಗಿ: ಗಾಂಧೀಜಿಯ ಚಿಂತನೆಗೆ ಅನುಯಾಯಿಗಳಾಗುವ ಮೂಲಕ ರಾಷ್ಟ್ರಪ್ರೇಮದ ಕಲ್ಪನೆಯೊಂದಿಗೆ ಒಗ್ಗಟ್ಟಿನಿಂದ ದೇಶ ಕಟ್ಟಬೇಕಾಗಿದೆ ಎಂದು ಉಪನ್ಯಾಸಕ ಎನ್. ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಎಸ್ಜೆಜೆಎಂ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸರ್ವೋದಯ ಕಾರ್ಯಕ್ರಮವನ್ನುದ್ದೆಶಿಸಿ ಅವರು ಮಾತನಾಡಿದರು. ಎನ್. ಬಸವಣ್ಣೆಪ್ಪ ಮಾತನಾಡಿದರು. ಎನ್.ಡಿ. ಮಾಚೇನಹಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್. ಮೂಲಿ, ಎನ್.ಎಲ್. ಬೆನ್ನೂರ, ತುಮರಿಕೊಪ್ಪದ, ಡಿ.ಬಿ. ಕುಸಗೂರ, ಶಮಶುದ್ದೀನ್ಖಾನ್, ಉಮೇಶ ಖಾರದ, ರಾಜಶೇಖರ್ ಲಿಂಗದಳ್ಳಿ ಮತ್ತಿತರರು ಇದ್ದರು.
ನಲಿ-ಕಲಿಯಿಂದ ಕಲಿಕೆ ಪ್ರಗತಿ: ಬಳ್ಳಾರಿ
ಶಿಗ್ಗಾಂವಿ: ರಾಜ್ಯದಲ್ಲಿ ಪ್ರಥಮ ಬಾರಿಗೆ ಉರ್ದು ನಲಿ-ಕಲಿ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು, ರಾಜ್ಯಕ್ಕೆ ಕೈಗನ್ನಡಿಯಾಗಿದೆ. ಇಂಥ ಕಾರ್ಯಕ್ರಮದಿಂದ ಶಿಕ್ಷಕರಿಂದ ಮಕ್ಕಳಿಗೆ ಸಂತಸದಾಯಕ ಕಲಿಕೆಗೆ ಅನುಕೂಲಕರ ವಾತಾವರಣ ನಿರ್ಮಿಸುವಲ್ಲಿ ಸಹಕಾರಿ ಎಂದು ಉಪನಿರ್ದೇಶಕ (ಅಭಿವೃದ್ಧಿ) ಎಂ.ಡಿ. ಬಳ್ಳಾರಿ ಹೇಳಿದರು. ಬಂಕಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಕೊಟ್ಟಿಗೇರಿಯಲ್ಲಿ ಶಿಗ್ಗಾಂವಿ-ಸವಣೂರು ತಾಲೂಕಿನ ಎಲ್ಲ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗಳ ಉರ್ದು ನಲಿ-ಕಲಿ ಶಿಕ್ಷಕರಿಗೆ ನಲಿ-ಕಲಿ ಸಂವಾದ ಕಾರ್ಯಕ್ರಮಕ್ಕೆ ಜಿಲ್ಲಾ ಶಿಕ್ಷಣ, ತರಬೇತಿ ಸಂಸ್ಥೆ ಪ್ರಾಚಾರ್ಯ ಎಂ.ಡಿ. ಬಳ್ಳಾರಿ, ಉಪನ್ಯಾಸಕರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೃತಕ ಕಾಲು ಜೋಡಣೆ ಉಚಿತ ಶಿಬಿರ
ಹಾವೇರಿ: ಭಗವಾನ್ 1008ನೇ ಮಿನಾಥಸ್ವಾಮಿ ಲಘು ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ ನಿಮಿತ್ತ ಇತ್ತೀಚೆಗೆ ನಗರದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಉಚಿತ ಕೃತಕ ಕಾಲು ಜೋಡಣೆ ಶಿಬಿರ ನಡೆಯಿತು. ಬೆಂಗಳೂರಿನ ಕೇಸರಿಚಂದ ಪೂನಂಚಂದ ಸೇಥಿ ಚ್ಯಾರಿಟೆಬಲ್ ಟ್ರಸ್ಟ್, ಕರ್ನಾಟಕ ಮಾರ್ವಾಡಿ ಯುಥ್ ಫೆಡರೇಶನ್, ಪ.ಪು. ಮುನಿ ಶ್ರೀ 108 ಸಂಭವನಂದಿ ಮಹಾರಾಜ ಟ್ರಸ್ಟ್, ಭಾರತೀಯ ಜೈನ್ ಮಿಲನ್ ಹಾಗೂ ದಾವಣಗೆರೆ ಮತ್ತು ಹಾವೇರಿ ಜೈನ್ ಮಿಲನ್ ಆಶ್ರಯದಲ್ಲಿ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಘವೇಂದ್ರಸ್ವಾಮಿ ಉದ್ಘಾಟಿಸಿದರು. ಭರತ ಜೈನ್, ಮದನಕುಮಾರ ಜೈನ್, ಮಾಣಿಕಚಂದ್ ಲಾಡರ್, ಮಹಾವೀರ ಕಳಸೂರ ಇದ್ದರು.
ಮಕ್ಕಳ ಸುಪ್ತ ಪ್ರತಿಭೆ ಗುರುತಿಸಿ: ಮಾಲತಿ ಪೋಳ
ಹಾವೇರಿ: ಕರ್ನಾಟಕ ಬಾಲ ವಿಕಾಸ ಅಕಾಡೆಮಿ- 2009ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಹಲವಾರು ವಿನೂತನ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಧಾರವಾಡ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಯೋಜನಾಧಿಕಾರಿ ಮಾಲತಿ ಪೋಳ ಹೇಳಿದರು. ಇತ್ತೀಚೆಗೆ ನಗರದ ಹೊಸಮಠದಲ್ಲಿ ಧಾರವಾಡ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಹಾವೇರಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಹೊಸಮಠದ ಬಸವಶಾಂತಲಿಂಗ ಶ್ರೀ ಸಾನ್ನಿಧ್ಯ ವಹಿಸಿದ್ದರು. ಗೀತಾ ಪೂಜಾರ, ಎಂ.ಬಿ.ಅಂಬಿಗೇರ, ಗಂಗಾಧರ ನಂದಿ, ಜೆ.ಎಂ. ಮಠದ, ಜಿ.ಎಂ. ಓಂಕಾರಣ್ಣನವರ, ಜಿಲ್ಲೆಯ ಎಲ್ಲ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಜರಿದ್ದರು.
ಕುನ್ನೂರ: ಇಂದು ಸಾವಯವ ಕೃಷಿ ತೋಟ
ಶಿಗ್ಗಾಂವಿ: ಫೆ. 2ರಂದು ಬೆಳಗ್ಗೆ 10 ಗಂಟೆಗೆ ಕುನ್ನೂರ ಗ್ರಾಮದ ಹೊರ ವಲಯದ ಅಗಡಿ ಸಾವಯವ ಕೃಷಿ ತೋಟದಲ್ಲಿ ಸಾವಯವ ಕೃಷಿ ಕಾರ್ಯಕ್ರಮ ಜರುಗಲಿದೆ ಎಂದು ಪ್ರಾಚಾರ್ಯ ಪ್ರಕಟಣೆಯಲ್ಲಿ ಕೋರಿದ್ದಾರೆ. ಪಶು ಸಂಗೋಪನಾ ಪಾಲಿಟೆಕ್ನಿಕ್, ಶಿಗ್ಗಾಂವಿವತಿಯಿಂದ ಪ್ರತಿ ತಿಂಗಳು 5ನೇ ಮತ್ತು 20ನೇ ತಾರಿಖಿನಂದು ಪಶು ವೈದ್ಯಕೀಯ ಪಾಕ್ಷಿಕ ಎಂಬ ಜ್ಞಾನ ಪ್ರಸರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಬಾರಿಯ ಪಾಕ್ಷಿಕವನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಶಿಗ್ಗಾಂವಿ ಹಾಗೂ ಅಗಡಿ ಸಾವಯವ ಕೃಷಿ ಕೇಂದ್ರ ಕುನ್ನೂರು ಇವರ ಆಶ್ರಯದಲ್ಲಿ ಆಯೋಜಿಸಲಾಗಿದೆ. ವಿಷಯ: ಸಾವಯವ ಪಶುಪಾಲನೆ ಆಸಕ್ತರು ಪ್ರಯೋಜನ ಪಡೆಯಿರಿ.
ವಸ್ತುಪ್ರದರ್ಶನ ರಾಜ್ಯಮಟ್ಟಕ್ಕೆ ಆಯ್ಕೆ
ಹಾವೇರಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘ ಸಂಯುಕ್ತವಾಗಿ ರಾಣಿಬೆನ್ನೂರಿನ ಆಂಗ್ಲೋ ಉರ್ದು ಹೈಸ್ಕೂಲಿನಲ್ಲಿ ನಡೆದ ವೃತ್ತಿ ಶಿಕ್ಷಣ ವಸ್ತುಪ್ರದರ್ಶನದಲ್ಲಿ ತಾಲೂಕಿನ ಹೊಸರಿತ್ತಿ ಗ್ರಾಮದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಮಾದರಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿವೆ. ವಿಜೇತ ವಿದ್ಯಾರ್ಥಿಗಳಾದ ಚೇತನ ಮಾಚಾ, ಅಕ್ಷಯ ಕೂಡಗಿ, ಸಾಹೇಬಗೌಡ ಕುರ್ನಳ್ಳಿ, ಶಿವಾನಂದ ರಾಮಣ್ಣನವರ, ಫಕ್ಕಿರೇಶ ಬಳ್ಳೊಳ್ಳಿ, ಸಚಿನ್ ಗೌಡರ, ಮಾರ್ಗದರ್ಶನ ಶಿಕ್ಷಕ ಕೆ. ಆರ್. ತಳಗೇರಿ, ಗುರುರಾಜ ಭಂಡಾರಿಯವರನ್ನು ಸಂಸ್ಥೆ ಅಧ್ಯಕ್ಷ ಡಾ. ದೀನಬಂಧು ಹಳ್ಳಿಕೇರಿ, ಸದಸ್ಯರು, ಸಿಬ್ಬಂದಿ ಅಭಿನಂದಿಸಿದ್ದಾರೆ.
ಸೌಲಭ್ಯ ಪಡೆದು ಶಿಕ್ಷಣದಲ್ಲಿ ನಿರ್ದಿಷ್ಟ ಗುರಿ: ದೊಡ್ಡಮನಿ
ಶಿಗ್ಗಾಂವಿ: ಹಿಂದೆ ಶಾಲೆ, ಕಾಲೇಜುಗಳಲ್ಲಿ ತಾಂತ್ರಿಕ ಅನುಕೂಲತೆಗಳಿರಲಿಲ್ಲ. ಈಗ ಎಲ್ಲ ಅನುಕೂಲಗಳಿವೆ. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಿದಲ್ಲಿ ಉತ್ತಮ ಗುರಿ ಮುಟ್ಟಲು ಸಾಧ್ಯ ಎಂದು ಡಿವೈಎಸ್ಪಿ ಬಾಲಚಂದ್ರ ದೊಡ್ಡಮನಿ ತಿಳಿಸಿದರು. ಪಟ್ಟಣದ ರಂಭಾಪುರಿ ಜ. ವೀರಗಂಗಾಧರ ಕಲಾ, ವಾಣಿಜ್ಯ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಎಸ್ಆರ್ಜೆವಿಜಿ ಕಾಲೇಜ ಆಡಳಿತಾಧಿಕಾರಿ ವಿಶ್ವನಾಥ ಕಂಬಾಳಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಫ್.ಬಿ. ಸೊರಟೂರ, ಎಸ್.ವಿ. ಕುಲಕರ್ಣಿ ಇದ್ದರು.
ಶರೀರದೊಂದಿಗೆ ಮಾನಸಿಕ ಬೆಳವಣಿಗೆಯಾಗಲಿ
ರಾಣಿಬೆನ್ನೂರು: ಹೊಸ ಪ್ರಪಂಚ ಕಾಣುವ ಹುಮ್ಮಸ್ಸಿನಲ್ಲಿರುವ 10ರಿಂದ 19 ವರ್ಷದೊಳಗಿನ ಮಕ್ಕಳು ಹಾರ್ಮೋನುಗಳ ಸ್ರಾವದಿಂದ ಶಾರೀರಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆ ನಡೆಯುತ್ತಿರುವಾಗ ಬುದ್ಧಿಗಿಂತ ಮಾನಸಿಕ ಭಾವನೆಗಳಿಗೆ ಹೆಚ್ಚು ಒತ್ತು ಕೊಡುತ್ತಿರುವ ಕಾರಣ ಅನೇಕ ಅನಾಹುತಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಶಿಕ್ಷಕರು ಮತ್ತು ಪಾಲಕರು ಅವರಿಗೆ ಬುದ್ಧಿ ಹೇಳುವುದು ಅವಶ್ಯವೆಂದು ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ. ರೂಪಾ ಹೇಳಿದರು. ಎಸ್ಜೆಎಂವಿ, ಬಿಎಜೆಎಸ್ಎಸ್ ಮಹಿಳಾ ಪದವಿ ಕಾಲೇಜು, ಸರ್ಕಾರಿ ಆಸ್ಪತ್ರೆ ರೆಡ್ಕ್ರಾಸ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ ಆಶ್ರಯದಲ್ಲಿ ಹದಿಹರೆಯದ ಸಮಸ್ಯೆಗಳಿಗೆ ವೈದ್ಯಕೀಯ ಪರಿಹಾರಗಳು ಕುರಿತು ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾಚಾರ್ಯ ಡಾ. ವಿ.ಕೆ. ಕನ್ನೇಶ್ವರ ಅಧ್ಯಕ್ಷತೆ ವಹಿಸಿದ್ದರು. ಬಿ.ಜಿ. ಕುರುವತ್ತಿ ಪ್ರಾಸ್ತಾವಿಕ ಮಾತನಾಡಿದರು.
ಕಾಲೇಜು ಶಿಕ್ಷಣ ಸದ್ಬಳಕೆ ಮಾಡಿಕೊಳ್ಳಿ: ನಾಗಪ್ಪ ಬೆಲ್ಲದ
ರಾಣಿಬೆನ್ನೂರು: ಶಿಕ್ಷಣ, ಸಂಘಟನೆ, ಹೋರಾಟದ ಜತೆಗೆ ಗ್ರಾಮಾಂತರ ಪ್ರದೇಶದ ಮಕ್ಕಳು ಅಭಿವೃದ್ಧಿ ಹೊಂದಲೆಂಬ ಉದ್ದೇಶದಿಂದ ಹೊನ್ನಮ್ಮ ದೇವಿ ಮಹಿಳಾ ಮಂಡಳ ಸಹಕಾರದೊಂದಿಗೆ ಬಡವರ ಮಕ್ಕಳಿಗೆ ಕಾಲೇಜು ಶಿಕ್ಷಣ ನೀಡುವುದಕ್ಕಾಗಿ ಪ್ರಾರಂಭಿಸಿದ್ದ ಕಾಲೇಜು ಇಂದು ಹೆಮ್ಮರವಾಗಿ ಬೆಳೆದಿದ್ದು, ಇದರ ಲಾಭ ಪಡೆಯಲು ವಿದ್ಯಾರ್ಥಿಗಳು ಮುಂದಾಬೇಕೆಂದು ಸಂಸ್ಧಾಪಕ ಅಧ್ಯಕ್ಷ, ಮಾಜಿ ಶಾಸಕ ನಾಗಪ್ಪ ಬೆಲ್ಲದ ಹೇಳಿದರು. ತಾಲೂಕಿನ ಹೊನ್ನತ್ತಿ ಗ್ರಾಮದಲ್ಲಿರುವ ಹೊನ್ನಮ್ಮ ದೇವಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ 28ನೇ ವಾರ್ಷಿಕ ಸ್ನೇಹ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರುದ್ರಪ್ಪ ಬಳ್ಳಾರಿ, ವಿಷ್ಣಪ್ಪ ಕಂಬಳಿ, ಸಿ.ಎನ್. ಬೆಲ್ಲದ ಇದ್ದರು.
ಅಜ್ಞಾನ, ಅಂಧಕಾರದಿಂದಮಹಿಳೆಯರಿಗೆ ಶೋಷಣೆ
ಶಿಗ್ಗಾವಿ: ಅಜ್ಞಾನ, ಅಂಧಕಾರದಿಂದ ಮಹಿಳೆಯರ ಮೇಲಿನ ಶೋಷಣೆಗಳು ಹೆಚ್ಚಾಗಲು ಕಾರಣವಾಗಿವೆ ಎಂದು ಜನಸ್ನೇಹಿ ಸಾಮಾಜಿಕ ಸೇವಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ ಹೇಳಿದರು. ಪಟ್ಟಣದ ಗುರುಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಸಪ್ತಾಹ ಸಮಾರಂಭದಲ್ಲಿ ಅವರು ಮಾತನಾಡಿದರು. ವಿ.ಎಸ್. ಮಡ್ಲಿಮಠ, ರಶ್ಮಿ ಪೂಜಾರ, ಬಸನಗೌಡ ಮೆಳ್ಳಾಗಟ್ಟಿ, ಮಕ್ಕಳ ರಕ್ಷಣಾ ಘಟಕದ ಮುಖ್ಯಸ್ಥೆ ನೇತ್ರಾ ನಾಗರವಳ್ಳಿ ಇದ್ದರು. ಚರ್ಚಾ, ಪ್ರಬಂಧ, ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.