ಬಗರಹುಕುಂ ಸಾಗುವಳಿಗೆ ಅವಕಾಶ ನೀಡಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಫೆ. 1
ಬಗರಹುಕುಂ ಸಾಗುವಳಿ ಮಾಡಿರುವ ಭೂರಹಿತ ಬಡ ರೈತರಿಗೆ ಸಾಗುವಳಿ ಪತ್ರಗಳನ್ನು ಕೂಡಲೇ ವಿತರಿಸುವಂತೆ ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ ತಾಲೂಕು ಘಟಕದ ನೇತೃತ್ವದಲ್ಲಿ ಭೂ ರಹಿತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಹಳೇ ಪುರಸಭೆಯಿಂದ ಮೆರವಣಿಗೆ ಮೂಲಕ ಸಾಗಿದ ನೂರಾರು ರೈತರು ಮುಖ್ಯರಸ್ತೆ ಸುಭಾಸ್ ಸರ್ಕಲ್, ಸ್ಟೇಷನ್ ರಸ್ತೆ ಮೂಲಕ ತಹಸೀಲ್ದಾರ್ ಕಚೇರಿ ತಲುಪಿದರು. ಮೆರವಣಿಗೆಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರು.
ಈ ಸಂದರ್ಭ ಅಧ್ಯಕ್ಷ ರುದ್ರಯ್ಯ ಸಾಲಿಮಠ ಮಾತನಾಡಿ, ಸಂವಿಧಾನದ ಆಶಯದಂತೆ ಭೂಮಿ, ಬಂಡವಾಳ ಹಾಗೂ ಉದ್ಯೋಗ ಇವುಗಳು ಕೆಲವೇ ವ್ಯಕ್ತಿಗಳ ಕೈವಶವಾಗದೇ ದೇಶದ ಪ್ರತಿಯೊಬ್ಬ ಪ್ರಜೆಗೂ ತಲುಪುವಂತೆ ಕಾನೂನುಗಳನ್ನು ರಚಿಸುವಂತೆ ಸೂಚಿಸುತ್ತದೆ. ಆದರೆ, 6 ದಶಕಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಕುಟುಂಬ ಹಾಗೂ ಸ್ವಾರ್ಥ ರಾಜಕಾರಣದಲ್ಲಿ ತೊಡಗಿದ್ದು, ಸಂವಿಧಾನದ ಅನುಚ್ಚೇದದ ಆಶಯಗಳನ್ನು ಮಣ್ಣುಪಾಲು ಮಾಡಿವೆ ಎಂದು ಆರೋಪಿಸಿದರು. ಕೃಷಿ ಪ್ರಧಾನವಾದ ದೇಶದಲ್ಲಿ ಶೇ. 75ರಷ್ಟು ಜನರು ಕೃಷಿ ಅವಲಂಬಿಸಿದ್ದಾರೆ. ಹೀಗಿದ್ದರೂ ಶೇ. 33ರಷ್ಟು ಕೃಷಿ ಕಾರ್ಮಿಕರು ಹಾಗೂ ಶೇ 43ರಷ್ಟು ಸಣ್ಣ ಹಿಡುವಳಿದಾರರಿದ್ದಾರೆ, ದೊಡ್ಡ ಹಿಡುವಳಿ ಹೊಂದಿರುವ ಭೂಮಾಲೀಕರು ಯಾವುದೇ ಕೆಲಸ ನಿರ್ವಹಿಸದೇ ಇರುವುದರಿಂದ ವಿಶ್ವಕ್ಕೆ ಅನ್ನಹಾಕುವ ಶಕ್ತಿಯಿದ್ದರೂ ಇಂದಿಗೂ ಪರಾವಲಂಬಿಗಳಾಗಿ ಬದುಕು ನಡೆಸುವಂತಾಗಿದೆ ಎಂದರು.
ಈ ಸಂದರ್ಭ ಫಕ್ಕೀರಪ್ಪ ತಳವಾರ, ಚಂದ್ರಪ್ಪ ತೆರೆದಹಳ್ಳಿ, ನಾಗಪ್ಪ ಅಬಲೂರ, ಹನುಮಂತಪ್ಪ ತಳವಾರ, ಹಸನಸಾಬ್ ತಡಸ, ಪರಮೇಶ ಬಿದರಕಟ್ಟಿ, ಫಕ್ಕೀರಪ್ಪ ಕಾರಗಿ, ಶಿವಪ್ಪ ಹುರಕಣ್ಣನವರ, ಮಾಲತೇಶ ಗಿಡ್ಡಣ್ಣನವರ, ಚಂದ್ರಪ್ಪ ತರೇದಹಳ್ಳಿ, ಮರಿಯಪ್ಪ ಕುರ ಡಮ್ಮನವರ, ನಾಗಪ್ಪ ಅಬಲೂರು, ನಬಿಸಾಬಬ್ಹರಿಹರ, ಹುಸೇನಸಾಬ್ ಓಲೇಕಾರ, ಪರಮೇಶಪ್ಪ ಅಬಲೂರು, ಕರಿಯಪ್ಪ ಕಾರಗಿ, ಮಲ್ಲಪ್ಪ ಮಾಳಗಿ, ಮಂಜು ಬಿದರಕಟ್ಟಿ, ಫಕ್ಕೀರಪ್ಪ ಹಾಲಮ್ಮನವರ ಪ್ರತಿಭಟನೆಯಲ್ಲಿದ್ದರು.