ಮಹಿಳೆಯರಿಂದ ಉತ್ತಮ ಆರ್ಥಿಕ ನಿರ್ವಹಣೆ: ಆಂಜನಪ್ಪ
ಹಾವೇರಿ: ಆರ್ಥಿಕ ವಿಚಾರದಲ್ಲಿ ಮಹಿಳೆಯರೇ ಪರಿಪೂರ್ಣರು. ಮಹಿಳೆಯರಿಗೆ ಸಾಮಾನ್ಯವಾಗಿ ಯಾವುದೇ ದುಶ್ಚಟಗಳಿರುವುದಿಲ್ಲ, ಹಾಗಾಗಿ ವಿವಿಧ ಮಹಿಳಾ ಸಂಘಗಳನ್ನು ರಚಿಸಿಕೊಂಡು ವ್ಯವಹಾರವನ್ನು ಸಮರ್ಥವಾಗಿ ನಿಭಾಯಿಸಿ ಆದಾಯ ಗಳಿಸುತ್ತಿದ್ದಾರೆ ಎಂದು ಜಿಪಂ ಸಿಇಒ ಕೆ.ಬಿ. ಆಂಜನಪ್ಪ ಹೇಳಿದರು.
ನಗರದ ಕೃಷ್ಣ ಮಠದಲ್ಲಿ ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಸ್ಥೆಯ ಆಶ್ರಯದಲ್ಲಿ ಶನಿವಾರ ನಡೆದ ಹಣಕಾಸು ನಿರ್ವಹಣೆಯ ತಿಳಿವಳಿಕೆ ಸಭೆ ಮತ್ತು ಗ್ರಾಹಕರ ಕುಂದು ಕೊರತೆಗಳ ನಿವಾರಣೆ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಸಾಲವನ್ನು ಆದಾಯ ಗಳಿಕೆ ಚಟುವಟಿಕೆಗೆ ಮಾತ್ರ ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು. ವಿವಿಧ ಯೋಜನೆಯಡಿ ಸರ್ಕಾರದಿಂದ ಸಹಾಯಧನ ಪಡೆಯಲು ಇತರ ಚಟುವಟಿಕೆಗಳಿಗೆ ಬ್ಯಾಂಕ್‌ಗಳಲ್ಲಿ ಖಾತೆ ಅವಶ್ಯ ಎಂದು ರಿಜರ್ವ್ ಬ್ಯಾಂಕ್ ಸೂಚಿಸಿದ್ದರೂ ಜನತೆ ಬ್ಯಾಂಕ್ ಖಾತೆ ತೆರೆಯುವಲ್ಲಿ ವಿಫಲರಾಗುತ್ತಿದ್ದಾರೆ. ಮಹಿಳಾ ಸಂಘಗಳನ್ನು ರಚಿಸಿಕೊಂಡ ಬಳಿಕ ಮಹಿಳೆಯರು ನಿರ್ಭಯವಾಗಿ ಬ್ಯಾಂಕ್‌ಗಳಿಗೆ ತೆರಳಿ ವ್ಯವಹರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ನವಚೇತನ ಮೈಕ್ರೋ ಫಿನ್ ಸರ್ವಿಸಸ್ ವ್ಯವಸ್ಥಾಪಕ ನಿರ್ದೇಶಕ ನಾಗೇಂದ್ರ ಮಾಳಿ, ರಿಜರ್ವ್ ಬ್ಯಾಂಕ್‌ನ ಎಲ್ಲ ನಿಯಮಗಳನ್ನು ಪಾಲಿಸಿ ಕಿರು ಹಣಕಾಸು ಸಂಸ್ಥೆಗಳಿಂದ ಜಿಲ್ಲೆಯ 2 ಲಕ್ಷ ಗ್ರಾಹಕರಿಗೆ ರು. 200 ಕೋಟಿ ಸಾಲ ವಿತರಿಸಿ ಜನತೆಯ ಆರ್ಥಿಕಾಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ. ಉಮೇಶಬಾಬು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಪಿ.ಡಿ. ಶಿರೂರ, ಎನ್.ಎಂ. ಪಾಟೀಲ, ಬಿ.ಎಂ. ಪಾಮಿಡಿ, ಕೆ. ಮೊರಬ್ ಇದ್ದರು.