ಸಮ್ಮೇಳನ ಹಾವೇರಿಯಲ್ಲೇ ನಡೆಯಲಿ: ಸಿ.ಡಿ. ಯತ್ನಳ್ಳಿ
ಶಿಗ್ಗಾಂವಿ: 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿಯೇ ನಡೆಸಬೇಕು. ರಾಣಿಬೆನ್ನೂರಿಗೆ ಕೊಂಡೊಯ್ಯಬಾರದು. ಒಂದು ವೇಳೆ ಸ್ಥಳ ಬದಲಾವಣೆ ಮಾಡುವುದಾದರೆ ಶಿಗ್ಗಾಂವಿ ನಗರವು ಐತಿಹಾಸಿಕ ಮಹತ್ವ ಹೊಂದಿದ್ದು, ಶಿಗ್ಗಾಂವಿ ಜನರು ಸಾಹಿತ್ಯ ಸಮ್ಮೇಳನ ನಡೆಸಲು ಉತ್ಸುಕರಾಗಿದ್ದಾರೆ ಎಂದು ನೌಕರರ ಸಂಘದ ಅಧ್ಯಕ್ಷ ಸಿ.ಡಿ. ಯತ್ನಳ್ಳಿ ಹೇಳಿದರು.
ನಗರದ ಎಸ್‌ಬಿಬಿಎಂಡಿ ಪ್ರೌಢಶಾಲೆಯಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಾವೇರಿ ನಗರ ಜಿಲ್ಲಾ ಕೇಂದ್ರವಾಗಿದ್ದು, ಹಾವೇರಿಯಲ್ಲಿ ಸಮ್ಮೇಳನ ನಡೆದರೆ ಸುತ್ತಲಿನ ಸಾಹಿತ್ಯಾಸಕ್ತರಿಗೆ ಬರಲು ಅನುಕೂಲವಾಗಿತ್ತದೆ. ಆದ್ದರಿಂದ ಶಿಗ್ಗಾಂವಿ ತಾಲೂಕು ಕಸಾಪ ಅಧ್ಯಕ್ಷ ಬಸವರಾಜ ಬಸರೀಕಟ್ಟಿ ಶಿಗ್ಗಾಂವಿಯ ಸಾಹಿತ್ಯಾಭಿಮಾನಿಗಳಲ್ಲಿ ಭರವಸೆ ಕೊಡಬೇಕು. ಸಮ್ಮೇಳನವನ್ನು ಹಾವೇರಿಯಲ್ಲಿ ಆಗುವಂತೆ ಜಿಲ್ಲಾಧ್ಯಕ್ಷರಲ್ಲಿ ಒತ್ತಡ ತರಬೇಕು ಎಂದರು.
ಇತ್ತೀಚೆಗೆ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶಿಗ್ಗಾಂವಿ ಕಸಾಪ ಅಧ್ಯಕ್ಷ ಬಸವರಾಜ ಬಸರೀಕಟ್ಟಿ ರಾಣಿಬೆನ್ನೂರು ಪರ ಮಾತನಾಡಿದ್ದು, ಸಾಹಿತ್ಯಾಸಕ್ತರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ ಎಂದರು.
ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷರಾದ ಸುಭಾಸ ಮಾದರ ಮಾತನಾಡಿ, ಸಮ್ಮೇಳನವನ್ನು ಹಾವೇರಿಯಲ್ಲಿ ಮಾಡುವ ಕುರಿತಂತೆ ಜಿಲ್ಲಾ ಕಸಾಪದ ಮೇಲೆ ಒತ್ತಡ ಹೇರಬೇಕು ಎಂದರು. ಬಳಿಕ ಬಸವರಾಜ ಬಸರೀಕಟ್ಟಿ ಮಾತನಾಡಿ, ನಡೆದ ಘಟನೆ ಖಂಡಿಸುವುದನ್ನು ಬಿಟ್ಟು ಈ ನಿರ್ಣಯವನ್ನು ಜಿಲ್ಲಾಧ್ಯಕ್ಷರ ಬಳಿ ತಿಳಿಸುವುದಾಗಿ ಮತ್ತು ಹಾವೇರಿಯಲ್ಲಿಯೆ ಸಾಹಿತ್ಯ ಸಮ್ಮೇಳನ ನಡೆಸಲು ಒತ್ತಡ ತರುವುದಾಗಿ ಹೇಳಿದರು. ನಳಂದ ಪ್ರೌಢಶಾಲೆ ಪ್ರಾಚಾರ್ಯ ಎಂ.ಬಿ. ಹಳೇಮನಿ, ಭರಮಜ್ಜ ನವಲಗುಂದ, ಎಸ್.ಕೆ. ಹೂಗಾರ, ಕೆ.ಎನ್. ಕೋಡಿಹಳ್ಳಿ, ಎಲ್.ಎಸ್. ಲಮಾಣಿ, ಎಸ್.ಎನ್. ಮುಗಳಿ, ಶಿವಾನಂದ ಬಾಗೂರ ಇನ್ನಿತರರಿದ್ದರು.