ಕಾರ್ಯಕ್ರಮ ಮುಂದೂಡಿಕೆ: ದಿಂಗಾಲೇಶ್ವರ ಶ್ರೀ
ಹಾವೇರಿ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬಾಲೆಹೊಸೂರಿನ ದಿಂಗಾಲೇಶ್ವರ ಮಠದ ನೂತನ ಕಟ್ಟಡ, ಸಮುದಾಯಭವನ ಹಾಗೂ ದಾಸೋಹ ಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀ ಹೇಳಿದರು.
ಮಠದ ನೂತನ ಕಟ್ಟಡಗಳ ಲೋಕಾರ್ಪಣೆ, 5001 ಮಹಿಳೆಯರಿಗೆ ಹೊಸ ಸೀರೆ ಕೊಟ್ಟು ಉಡಿ ತುಂಬುವುದು, ಸಾಮೂಹಿಕ ವಿವಾಹ, 300 ಮಠಾಧೀಶರ ಪರಿಷತ್ ಒಳಗೊಂಡ ಮೂರು ದಿನಗಳ ಬೃಹತ್ ಕಾರ್ಯಕ್ರಮವನ್ನು ಮಾ. 7,8 ಹಾಗೂ 9ರಂದು ನಡೆಸಲು ನಿರ್ಧರಿಸಲಾಗಿತ್ತು. ಈ ಸಂದರ್ಭದಲ್ಲಿ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಆಗ ಸೀರೆ ವಿತರಣೆ, ಸಾಮೂಹಿಕ ಮದುವೆ, ದೊಡ್ಡ ಪ್ರಮಾಣದ ದಾಸೋಹ ಸೇವೆ, ರಾಜಕೀಯ ನೇತಾರರನ್ನು ಆಹ್ವಾನಿಸುವುದನ್ನು ಮಾಡಲು ಬರುವುದಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಸಲಹೆ ನೀಡಿದ್ದರಿಂದ ಈ ಬೃಹತ್ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಲೋಕಸಭೆ ಚುನಾವಣೆ ಮುಗಿದ ಒಂದು ವಾರದಲ್ಲಿ ದಿನಾಂಕ ನಿರ್ಧರಿಸಿ ಸಂಘಟಿಸಲಾಗುವುದು ಎಂದು ಶ್ರೀಗಳು ತಿಳಿಸಿದರು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಪಿ.ಡಿ. ಶಿರೂರು ಇನ್ನಿತರರು ಇದ್ದರು.