ಹುಚ್ಚು ನಾಯಿ ಕಡಿತ
ಹಿರೇಕೆರೂರು: ತಾಲೂಕಿನ ರಟ್ಟಿಹಳ್ಳಿ ಗ್ರಾಮದಲ್ಲಿ ಹುಚ್ಚು ನಾಯಿಯನ್ನು ಓಡಿಸಲು ಹೋದ ವ್ಯಕ್ತಿಯೋರ್ವನನ್ನು ಹುಚ್ಚು ನಾಯಿ ಕಡಿದು ಗಾಯಗೊಳಿಸಿದ ಘಟನೆ ಜರುಗಿದೆ.
ಎರಡು ದಿನಗಳಿಂದ ರಟ್ಟಿಹಳ್ಳಿಯಲ್ಲಿ ನಾಯಿಗಳ ಹಾವಳಿಯಿಂದ ಬೇಸತ್ತ ಸಾರ್ವಜನಿಕರು ಗ್ರಾಮಪಂಚಾಯಿತಿಗೆ ನಾಯಿಗಳನ್ನು ಹಿಡಿದು ಬೇರೆಡೆಗೆ ವರ್ಗಾಯಿಸಿ ನಾಯಿಗಳಿಂದ ಮುಕ್ತಗೊಳಿಸುವಂತೆ ಮನವಿ ಮಾಡಿದ್ದರು ಎನ್ನಲಾಗಿದ್ದು, ಗ್ರಾಮದ ಜನತೆಯ ಮನವಿ ಮೇರೆಗೆ ನಾಯಿ ಹಿಡಿಯಲು ಗ್ರಾಮ ಪಂಚಾಯಿತಿ ನೌಕರ ಜಗದೀಶ ಈರಪ್ಪ ಹರಿಜನ (28) ಮುಂದಾಗಿದ್ದಾರೆ. ಗ್ರಾಮದ ಹೊಸಪೇಟೆ ಬೀದಿಯ ನಿವಾಸಿ ಪದ್ಮ ಶ್ರೀಭೀಮಪ್ಪನವರ ಎಂಬುವರ ಮನೆಯ ಹಿತ್ತಲಿನಲ್ಲಿ ನಾಲ್ಕು ನಾಯಿ ಮರಿಗಳಿಗೆ ಹುಚ್ಚು ನಾಯಿ ಕಚ್ಚಿದ್ದನ್ನು ಕಣ್ಣಾರೆ ನೋಡಿದ್ದು, ಅದನ್ನು ಓಡಿಸಲು ಹೋದಾಗ ನಾಯಿಯೇ ಆತನಿಗೆ ಕಚ್ಚಿದ್ದರಿಂದ ಆತ ಹುಚ್ಚು ಹಿಡಿದವರಂತೆ ವರ್ತನೆ ಮಾಡಿದ ತಕ್ಷಣ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆ ಸಾಗಿಸಲಾಗಿದೆ.