ಅನಕ್ಷರತೆ ತೊಲಗಿಸಲು ಶ್ರಮಿಸಿ: ಶಾಸಕ ಕೋಳಿವಾಡ
ರಾಣಿಬೆನ್ನೂರು: ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಾಕ್ಷರತೆಯೇ ಮೂಲಾಧಾರವಾಗಿದ್ದು, ಅನಕ್ಷರತೆಯನ್ನು ಹೋಗಲಾಡಿಸಿ ಸಾಕ್ಷರತೆಯ ಮಹತ್ವವನ್ನು ಸರ್ವರಿಗೆ ತಿಳಿಸಲು ಯುವಜನತೆ ಮುಂದಾಗಬೇಕೆಂದು ಶಾಸಕ ಕೆ.ಬಿ. ಕೋಳಿವಾಡ ಹೇಳಿದರು.
ತಾಲೂಕಿನ ಎಣ್ಣಿಹೊಸಳ್ಳಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 1952ನೇ ವರ್ಷದಿಂದ ಇಲ್ಲಿಯವರೆಗೂ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಪ್ರಧಾನ ಗುರುಗಳಿಗೆ ಹಾಗೂ ಸಹ ಶಿಕ್ಷಕರಿಗೆ ಗ್ರಾಮದ ವಿದ್ಯಾರ್ಥಿಗಳು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವಜನತೆ ದೇಶದ ಸಂಪತ್ತಾಗಿದ್ದು, ನಿಸ್ವಾರ್ಥ ಸೇವೆಯಿಂದ ತಮಗೆ ವಿದ್ಯೆ ನೀಡಿದ ಗುರುಗಳನ್ನು ಎಂದೂ ಮರೆಯಬಾರದೆಂದು ಎಣ್ಣಿಹೊಸಳ್ಳಿ ಗ್ರಾಮದ ಯುವಕರು ತಮಗೆ ವಿದ್ಯೆಕಲಿಸಿದ ಗುರುಗಳನ್ನು ಸನ್ಮಾನಿಸುವುದರೊಂದಿಗೆ ರಾಜ್ಯದ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಹಾವೇರಿ ತಹಸೀಲ್ದಾರ್ ಪಂಪನಗೌಡ ಮಾತನಾಡಿ, ಜಿಲ್ಲೆಯಲ್ಲಿಯೇ ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ಯುವ ಜನತೆ ಸಾಮಾಜಿಕ ಜವಾಬ್ದಾರಿಗಳನ್ನರಿತು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕೆಂದು ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ಡಾ. ಬಸವರಾಜ ಶಾಸ್ತ್ರಿ, ಕರೂರು ಗ್ರಾಪಂ ಅಧ್ಯಕ್ಷೆ ಗೀತಾ ಮುದಿಗೌಡ್ರ, ಕುಮಾರಪಟ್ಟಣಂ ಠಾಣೆಯ ಪಿಎಸ್‌ಐ ಸಂತೋಷ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣತಮ್ಮಪ್ಪ ಬಾರ್ಕಿ, ಗ್ರಾಪಂ ಸದಸ್ಯ ಭೀಮಣ್ಣ ಓಲೇಕಾರ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಚಂದ್ರು ಕಡ್ಲಿಗೊಂದಿ, ಪ್ರಶಾಂತ ರೆಡ್ಡಿ ಮಾತನಾಡಿದರು.
ಚಳಗೇರಿ ಸಿಇಎಸ್‌ಪ್ರೌಢ ಶಾಲೆಯ ನಿವೃತ್ತ ಪ್ರಧಾನ ಗುರು ಎಚ್.ಎಫ್. ಚಳಗೇರಿ ಅಧ್ಯಕ್ಷತೆ ವಹಿಸಿದ್ದರು. ಮುದೇನೂರಿನ ತುಂಗಭದ್ರಾ ಗ್ರಾಮೀಣ ವಿದ್ಯಾ ಸಂಸ್ಥೆಯ ಕಾಲೇಜಿನ ನಿವೃತ್ತ ಪ್ರಾಚಾರ್ಯ ಜಿ.ಎಂ. ಬಣಕಾರ ಉಪನ್ಯಾಸ ನೀಡಿದರು. ಎಣ್ಣಿಹೊಸಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ಎಚ್.ಬಿ. ಇಮ್ಮಡಿ, ಕೆ.ಎನ್. ಹಾದರಗೇರಿ, ಎಂ.ಪಿ. ಯರೇಶಿಮಿ, ಸಿ.ಎಚ್. ಹೋಳಿಯಪ್ಪನವರ, ಶಶಿಕಲಾ ಮುದಿಗೌಡ್ರ, ಎಂ.ಎಂ. ಹಾವನೂರು, ಎಚ್.ಸಿ. ಬಿದರಿ, ಎಂ.ಪಿ. ತಿಮ್ಮಾಪುರ, ಆರ್. ಕುಸುಮಾ ಅವರನ್ನು ಸನ್ಮಾನಿಸಲಾಯಿತು.