ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಟ್ರ್ಯಾಕ್ಟರ್ ಜಪ್ತಿ, ರೈತರ ಪ್ರತಿಭಟನೆ

Lingaraj Badiger
Updated On : 6 Feb 2014, 1:54 am

ಹಾವೇರಿ: ರೈತ ಮನೆಯಲ್ಲಿಲ್ಲದ ಸಮಯದಲ್ಲಿ ವಶಪಡಿಸಿಕೊಂಡು ಬಂದಿರುವ ಟ್ರ್ಯಾಕ್ಟರ್ ಅನ್ನು ಮರಳಿಸುವಂತೆ ಹಾಗೂ ಕೋಟಕ್ ಮಹೀಂದ್ರ ಬ್ಯಾಂಕ್‌ನವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕು ಹರವಿ ಗ್ರಾಮದ ರೈತರು ರೈತ ಸಂಘದ ನೇತೃತ್ವದಲ್ಲಿ ಬುಧವಾರ ನಗರದ ವಿಜಯ ಬ್ಯಾಂಕ್ ಎದುರು ಧರಣಿ ನಡೆಸಿದರು.
ಹರವಿ ಗ್ರಾಮದ ರೈತ ರಾಜೇಂದ್ರಗೌಡ ಪಾಟೀಲ ಅವರು ಜಿಲ್ಲೆಯ ರಾಣಿಬೆನ್ನೂರ ನಗರದ ಮಂಜುನಾಥ ಟ್ರ್ಯಾಕ್ಟರ್ ಶೋರೂಂನಲ್ಲಿ ಕೋಟಕ್ ಮಹೀಂದ್ರ ಹಣಕಾಸು ಸಂಸ್ಥೆಯಿಂದ ಸಾಲ ಪಡೆದು ಮಹೇಂದ್ರ-475 ಎಂಬ ಟ್ರ್ಯಾಕ್ಟರ್ ಖರೀದಿಸಿದ್ದರು. ಒಂದು ಕಂತು ಕಟ್ಟಲು ವಿಳಂಬವಾಗಿದ್ದನ್ನೇ ಬಂಡವಾಳ ಮಾಡಿಕೊಂಡ ಬ್ಯಾಂಕ್‌ನವರು ರೈತ ಮನೆಯಲ್ಲಿ ಇಲ್ಲದ ಸಮಯದಲ್ಲಿ ಕಳೆದ ಸೆ. 23ರಂದು ಟ್ರ್ಯಾಕ್ಟರ್‌ನ್ನು ವಶಪಡಿಸಿಕೊಂಡು ತೆರಳಿದ್ದಾರೆ.
ಮರುದಿನ ರೈತರು ಬ್ಯಾಂಕ್‌ನ ಕಚೇರಿಗೆ ಹೋಗಿ ವಿಚಾರಿಸಿದಾಗ ಒಂದು ವಾರ ಬಿಟ್ಟು ಬನ್ನಿ ಎಂದು ಹೇಳುತ್ತ ಅಲೆದಾಡಿಸಿದರು. ಕೊನೆಗೆ ನ. 11ರಂದು ಬ್ಯಾಂಕ್‌ಗೆ ಹೋದಾಗ ಸಹಾಯಕ ವ್ಯವಸ್ಥಾಪಕರು ವಾರದ ಅವಕಾಶ ಕೊಡಿ, ಟ್ರ್ಯಾಕ್ಟರ್‌ನ್ನು ಮರಳಿಸಲು ನೋಟರಿಯವರಿಂದ ಹಾಗೂ ಕಂದಾಯ ಇಲಾಖೆಯಿಂದ ವಂಶವೃಕ್ಷದ ಒಪ್ಪಿಗೆ ಪತ್ರ ತನ್ನಿ ಎಂದು ತಿಳಿಸಿದರು. ಅದರಂತೆ ಎಲ್ಲ ಕಾಗದ ಪತ್ರಗಳೊಂದಿಗೆ, ಬಾಕಿ ಇರುವ ಕಂತಿನ ಹಣವನ್ನು ಕಟ್ಟಲು ಹೋದಾಗ ಬ್ಯಾಂಕ್ ವ್ಯವಸ್ಥಾಪಕರು ಸ್ಪಂದಿಸದೇ ಟ್ರ್ಯಾಕ್ಟರ್ ಮರಳಿಸಲು ಬರುವುದಿಲ್ಲ ಎಂದು ಮೋಸ ಮಾಡಿದ್ದಾರೆ ಎಂದು ರೈತರು ಆರೋಪಿಸಿದರು.
ಇದಲ್ಲದೇ ಲೋನ್ ಶ್ಯೂರಿಟಿ ಇನ್ಸುರೆನ್ಸ್ ಮಾಡುವುದಾಗಿ ತಿಳಿಸಿ ರೈತರಿಂದ 11 ಸಾವಿರ ರು.ಗಳನ್ನು ಪಡೆದು ಇನ್ಸುರೆನ್ಸ್‌ನ್ನು ಮಾಡಿಸಿಲ್ಲ. ಟ್ರ್ಯಾಕ್ಟರ್‌ನ ರಜಿಸ್ಟೇಶನ್ ಮಾಡಿಸುವುದಾಗಿ ಹಣವನ್ನು ಪಡೆದು ಅದನ್ನು ಮರಳಿಸಿಯೂ ಇಲ್ಲ. ಟ್ರ್ಯಾಕ್ಟರ್ ರಜಿಸ್ಟ್ರೇಶನ್ ಸಹ ಮಾಡಿಸದೇ ಮೋಸ ಮಾಡಿ ಇದೀಗ ಟ್ರ್ಯಾಕ್ಟರ್ ಸಾಲದ ಪೂರ್ತಿ ಹಣ ತುಂಬಿದರೆ ಮಾತ್ರ ಟ್ರ್ಯಾಕ್ಟರ್ ಕೊಡುತ್ತೇವೆ ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಧರಣಿ ನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಹಾವೇರಿ ಲೀಡ್ ಬ್ಯಾಂಕ್ ಮ್ಯಾನೇಜರ್‌ಗೆ ಡಿ. 12ರಂದು ಮನವಿ ಮೂಲಕ ತಿಳಿಸಿದ್ದರೂ ಸಹ ಅವರು ಇಲ್ಲಿಯವರೆಗೆ ಬ್ಯಾಂಕ್‌ನವರ ಮೇಲೆ ಕಾನೂನು ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಜ. 30ರಂದು ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿ ಫೆ. 5ರಿಂದ ಲೀಡ್ ಬ್ಯಾಂಕ್ ಎದುರು ಧರಣಿ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದೆವು. ಅವರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಮಗೆ ನ್ಯಾಯ ಸಿಗುವವರೆಗೂ ಧರಣಿ ನಡೆಸುತ್ತೇವೆ ಎಂದು ರೈತರು ತಿಳಿಸಿದರು.
ರೈತ ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷ ಮರಡಿ ನಾಗಣ್ಣ, ರಾಜ್ಯ ಘಟಕದ ಉಪಾಧ್ಯಕ್ಷ ಎಚ್. ಓಂಕಾರಪ್ಪ, ಹರವಿ ಗ್ರಾಮ ಶಾಖೆಯ ಅಧ್ಯಕ್ಷ ಆರ್.ಸಿ. ಲೋಕಪ್ಪನವರ, ಉಪಾಧ್ಯಕ್ಷ ಎಚ್.ಎನ್. ಪಾಟೀಲ, ದೊಗ್ಗಳ್ಳಿ ಸಿದ್ದಪ್ಪ, ಸಿರಿಗೆರೆ ಬಸಣ್ಣ, ಗುತ್ತಮ್ಮ ಚೌಟಗಿ, ಶಿವಕ್ಕ ಹಿಟ್ಟಿಗುಡಿ, ವೈ. ನಿಂಗಮ್ಮ ಸೇರಿದಂತೆ ಮೂವತ್ತಕ್ಕೂ ಹೆಚ್ಚು ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement